ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ‘ಜಾಮೀನು ಪಡೆದವರೇ ಜೆಡಿಎಸ್‌ ಮುಖಂಡ ಪ್ರಕಾಶ್ ಹಂತಕರು’

ಬೂದಿ ಮುಚ್ಚಿದ ಕೆಂಡದಂತಿದ್ದ ಕೊಲೆ ಪ್ರಕರಣ; ಸಂಧಾನಕ್ಕೆ ಒಪ್ಪದ್ದಕ್ಕೆ ಇತ್ತು ಅಪಾಯ
Last Updated 25 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಮದ್ದೂರು: ಎರಡು ವರ್ಷಗಳ ಹಿಂದೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಬೂದಿಮುಚ್ಚಿದ ಕೆಂಡದಂತಿತ್ತು. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದು ಜೆಡಿಎಸ್‌ ಮುಖಂಡ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಫ್ಲೆಕ್ಸ್‌ ಅಳವಡಿಸುವ ಹಾಗೂ ಕುಡಿಯುವ ನೀರು ಪೂರೈಕೆ ಕುರಿತು ಗ್ರಾಮದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. 2016, ಡಿಸೆಂಬರ್‌ 24ರಂದು ಗ್ರಾಮದ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆಗ ಜೆಡಿಎಸ್‌ ಮುಖಂಡ ಪ್ರಕಾಶ್‌ ಅವರೇ ಠಾಣೆಗೆ ದೂರು ನೀಡಿದ್ದರು. ಬಂಧನಕ್ಕೊಳಗಾದ 20 ಆರೋಪಿಗಳಲ್ಲಿ 17 ಮಂದಿಗೆ ಈಚೆಗೆ ಜಾಮೀನು ಸಿಕ್ಕಿತ್ತು. ಉಳಿದ ಮೂವರಿಗೆ ಜಾಮೀನು ಸಿಕ್ಕಿರಲಿಲ್ಲ.

ರಾಜಿಸಂಧಾನ ಮಾಡಿಸಿ ಉಳಿದ ಮೂವರನ್ನೂ ಬಿಡಿಸುವಂತೆ ಪ್ರಕಾಶ್‌ ಅವರನ್ನು ಒತ್ತಾಯಿಸಿದ್ದರು. ಆದರೆ ಅವರು ರಾಜಿಗೆ ಒಪ್ಪಿರಲಿಲ್ಲ. ಇದೇ ದ್ವೇಷಕ್ಕೆ ಕಾರಣವಾಗಿತ್ತು. ದೂರು ಕೊಟ್ಟು ಜೈಲಿಗೆ ಕಳುಹಿಸಿದ, ರಾಜಿ ಸಂಧಾನಕ್ಕೆ ಒಪ್ಪದಿರುವುದರಿಂದ ಕೊಲೆಗೆ ಸಂಚು ರೂಪಿಸಿದ್ದರು. ಇದಕ್ಕೂ ಮೊದಲು ಎರಡು ಬಾರಿ ಕೊಲೆ ಯತ್ನ ನಡೆದಿತ್ತು. ಆಗ ಪಾರಾಗಿದ್ದರು.

ಜೀವಕ್ಕೆ ಅಪಾಯವಿದ್ದ ಕಾರಣ ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ರಕ್ಷಣೆ ಸಿಕ್ಕಿರಲಿಲ್ಲ. ಸೋಮವಾರ ಕೊಲೆಯಾದ ನಂತರ ಅವರ ಬೆಂಬಲಿಗರು, ರಕ್ಷಣೆ ನೀಡದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಲಿಖಿತವಾಗಿ ಮನವಿ ಸಲ್ಲಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

ಒಬ್ಬನ ಬಂಧನ: ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 8 ಜನರ ವಿರುದ್ಧ ಈಗ ಪುನಃ ದೂರು ದಾಖಲಾಗಿದೆ. ಪೊಲೀಸರು ಸೋಮವಾರ ರಾತ್ರಿಯೇ ಸ್ವಾಮಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಹೇಮಂತ್‌, ಯೋಗೇಶ್‌, ಶಿವರಾಜ್‌ ಎಂಬುವವರ ಸುಳಿವು ಸಿಕ್ಕಿದ್ದು, ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಕಾಂಗ್ರೆಸ್‌ ಕಾರ್ಯಕರ್ತರು ಎಂದು ಹೇಳಲಾಗಿದೆ.

ಸೋಮವಾರ ರಾತ್ರಿ ಉದ್ರಿಕ್ತ ಗುಂಪು ತೊಪ‍್ಪನಹಳ್ಳಿ ಗ್ರಾಮದ ನಾಲ್ಕು ಮನೆಗಳನ್ನು ಜಖಂಗೊಳಿಸಿದೆ. ಮಹಿಳೆ ಗಾಯಗೊಂಡಿದ್ದಾರೆ. ಮಂಗಳವಾರ ಮೃತದೇಹವನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ತರಲಾಯಿತು. ಸಂಜೆ ಅಂತ್ಯಸಂಸ್ಕಾರ ನಡೆಯಿತು.

ಅಸಹಾಯಕತೆ ವ್ಯಕ್ತಪಡಿಸಿದ ಮುಖ್ಯಮಂತ್ರಿ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೊಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಪಕ್ಷದ ಮುಖಂಡನಿಗೆ ಅಂತಿಮ ನಮನ ಸಲ್ಲಿಸಿದರು. ಮೃತದೇಹದ ಮುಂದೆ ಭಾವುಕರಾಗಿ ಕಣ್ಣೀರು ಹಾಕಿದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿ, ‘ಕೊಲೆ ಮಾಡಿದವರು ಜಾಮೀನು ಪಡೆದು ಹೊರಗೆ ಬರುತ್ತಾರೆ. ನಮ್ಮ ದೇಶದ ಕಾನೂನು, ಸುವ್ಯವಸ್ಥೆಯೇ ಸರಿ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಎರಡು ವರ್ಷಗಳ ಹಿಂದೆ ಜೋಡಿ ಕೊಲೆಯಾಗಿದ್ದಾಗ ಊರಿಗೆ ಬಂದಿದ್ದೆ. ಆಗ ಪ್ರಕಾಶ್‌, ಕೊಲೆಯಾದವರ ಪರ ನಿಂತಿದ್ದರು. ಜೋಡಿ ಕೊಲೆ ಮಾಡಿದವರೇ ಅವರನ್ನೂ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ’ ಎಂದರು.

‘ಕೊಲೆ ವಿಚಾರ ಕೇಳಿ ಆಘಾತಕ್ಕೆ ಒಳಗಾಗಿ ಶೂಟೌಟ್‌ ಹೇಳಿಕೆ ನೀಡಿದ್ದೆ. ಮುಖ್ಯಮಂತ್ರಿಯಾಗಿ ನಾನು ಆ ಮಾತುಗಳನ್ನು ಆಡಿರಲಿಲ್ಲ. ಒಬ್ಬ ಪ್ರಜೆಯಾಗಿ ಪ್ರತಿಕ್ರಿಯಿಸಿದ್ದೆ. ಮಾಧ್ಯಮಗಳು ಅದನ್ನು ವೈಭವೀಕರಿಸಿದವು’ ಎಂದು ಸ್ಪಷ್ಟಪಡಿಸಿದರು.

‘ಬಿಜೆಪಿ ಮುಖಂಡರು ಸತ್ತರೆ ಈ ಕಾಳಜಿ ತೋರಿಸುತ್ತಾರೆಯೇ ಎಂದು ಆ ಪಕ್ಷದ ಮುಖಂಡರು ಪ್ರಶ್ನಿಸಿದ್ದಾರೆ. ಯಾರೇ ಸತ್ತರೂ ನನಗೆ ನೋವಾಗುತ್ತದೆ. ಯಾರ ಹತ್ಯೆಯಾದರೂ ನನ್ನ ಮನಸ್ಸು ತಡೆಯುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT