ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 25ರಿಂದ ಪಂದ್ಯಗಳು: ಭಾರತ ‘ಎ’– ಶ್ರೀಲಂಕಾ ‘ಎ’ ಕ್ರಿಕೆಟ್‌ಗೆ ಸಿದ್ಧತೆ

ಕೋಚ್ ರಾಹುಲ್‌ ದ್ರಾವಿಡ್‌ ಆಕರ್ಷಣೆ
Last Updated 22 ಮೇ 2019, 9:27 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳ ನಡುವೆ ಇಲ್ಲಿನ ಆಟೊನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ ಆರಂಭವಾಗಲಿರುವ 4 ಪಂದ್ಯಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ ತಿಳಿಸಿದರು.

‘ಪುರುಷರ ಅಂತರರಾಷ್ಟ್ರೀಯ ಪಂದ್ಯಕ್ಕೆ ಇಲ್ಲಿ ಇದೇ ಮೊದಲಿಗೆ ಅವಕಾಶ ದೊರೆತಿದೆ. ಮೇ 25ರಿಂದ 28ರವರೆಗೆ ನಾಲ್ಕು ದಿನಗಳ ಪಂದ್ಯ, ಜೂನ್‌ 6, 8 ಹಾಗೂ 10ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘4 ದಿನಗಳ ಮತ್ತೊಂದು ಪಂದ್ಯ ಮೇ 31ರಿಂದ ಜೂನ್‌ 3ರವರೆಗೆ, 2 ಏಕ ದಿನ ಪಂದ್ಯಗಳು (ಜೂನ್ 13 ಹಾಗೂ ಜೂನ್ 15) ಹುಬ್ಬಳ್ಳಿಯ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ನಡೆಯಲಿವೆ’ ಎಂದು ವಿವರಿಸಿದರು.

ಹೆಮ್ಮೆಯ ವಿಷಯ:

‘ಒಂದೇ ವಲಯದಲ್ಲಿ ಉತ್ತಮವಾದ 2 ಮೈದಾನಗಳು ಇರುವುದು ಹಾಗೂ ಮಹತ್ವದ ಪಂದ್ಯಗಳು ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. 2017ರ ಡಿಸೆಂಬರ್‌ನಲ್ಲಿ ಭಾರತ–ಬಾಂಗ್ಲಾದೇಶ ‘ಎ’ ಮಹಿಳಾ ತಂಡಗಳು ಇಲ್ಲಿ 3 ಪಂದ್ಯಗಳ ಟಿ–20 ಸರಣಿ ಆಡಿದ್ದವು. 2018ರ ಜೂನ್‌ನಲ್ಲಿ ಭಾರತ ಅಧ್ಯಕ್ಷರ ಇಲವೆಲ್‌ ಹಾಗೂ ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವೆ ಅಂತರರಾಷ್ಟ್ರೀಯ ಪಂದ್ಯ ಆಯೋಜನೆಯಾಗಿತ್ತು. ಆದರೆ, ಮಳೆಯಿಂದಾಗಿ ಸ್ಥಳಾಂತರಗೊಂಡಿತ್ತು’ ಎಂದು ತಿಳಿಸಿದರು.

‘ಆಟಗಾರರ ವಾಸ್ತವ್ಯ, ಅಭ್ಯಾಸಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮೈದಾನವನ್ನು ಅತ್ಯುತ್ತಮವಾಗಿ ಸಿದ್ಧಪಡಿಸಲಾಗಿದೆ’ ಎಂದರು.

ವಲಯದ ಸದಸ್ಯ ಅವಿನಾಶ್‌ ಪೋತದಾರ ಮಾತನಾಡಿ, ‘ಉಭಯ ತಂಡಗಳ ಆಟಗಾರರು ಮೇ 23 ಹಾಗೂ 24ರಂದು ನೆಟ್‌ನಲ್ಲಿ ಅಭ್ಯಾಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ಉಚಿತ ಪ್ರವೇಶ:

‘3–4ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸುವುದಕ್ಕಾಗಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಟಿಕೆಟ್‌ ಇರುವುದಿಲ್ಲ. ಸಾರ್ವಜನಿಕರು ಉಚಿತವಾಗಿ ಪಂದ್ಯ ನೋಡಬಹುದು. ಆದರೆ, ನಿಗದಿಪಡಿಸಿದ ಗೇಟ್‌ನಲ್ಲಿ ಬಂದು ಸಹಕರಿಸಬೇಕು’ ಎಂದು ಕೋರಿದರು.

‘ಪಂದ್ಯದ ವೇಳೆ ವಿದ್ಯುನ್ಮಾನ ಸ್ಕೋರ್‌ ಬೋರ್ಡ್‌ ಅನಾವರಣಗೊಳಿಸಲಾಗುವುದು. ಮ್ಯಾನ್ಯುಯಲ್ ಸ್ಕೋರ್‌ ಬೋರ್ಡ್‌ ಕೂಡ ಇರುತ್ತದೆ. ಮಳೆ ಬಂದರೆ ಪಿಚ್‌ ರಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಭಾರತ ‘ಎ’ ತಂಡದ ಕೋಚ್‌ ಆಗಿ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್, ಬೌಲಿಂಗ್ ಕೋಚ್ ಆಗಿರುವ ನರೇಂದ್ರ ಹಿರ್ವಾನಿ ಬರಲಿದದ್ದಾರೆ. ಭರವಸೆಯ ಆಟಗಾರರು ಪಂದ್ಯವಾಡಲಿದ್ದಾರೆ. ಅಂತರರಾಷ್ಟ್ರೀಯ ಪಂದ್ಯ ವೀಕ್ಷಿಸುವ ಅವಕಾಶವನ್ನು ಇಲ್ಲಿನ ಕ್ರಿಕೆಟ್‌ ಪ್ರಿಯರು ಕಳೆದುಕೊಳ್ಳಬಾರದು’ ಎಂದು ಕೋರಿದರು.

‘ಇಲ್ಲಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡುವಂತೆ ಕೆಎಸ್‌ಸಿಎಗೆ ಮನವಿ ಸಲ್ಲಿಸಲಾಗಿದೆ. ಶೀಘ್ರವೇ ಈ ಸೌಲಭ್ಯ ದೊರೆಯುವ ಸಾಧ್ಯತೆ ಇದೆ. ಬಳಿಕ ಮತ್ತಷ್ಟು ಪಂದ್ಯಗಳು ಇಲ್ಲಿಗೆ ಸಿಗಲಿವೆ. ಈ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಸಿಸಿಐ ಪ್ರತಿನಿಧಿ ರಾಹಿಲ್, ‘ಮೈದಾನ ಅತ್ಯುತ್ತಮವಾಗಿದೆ. ಒಳ್ಳೆಯ ಪಂದ್ಯಗಳನ್ನು ನಿರೀಕ್ಷಿಸಬಹುದು’ ಎಂದರು.

ಮೈದಾನದ ವ್ಯವಸ್ಥಾಪಕ ದೀಪಕ್ ಪವಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT