ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೆಚ್ಚರಿಕೆ ವಹಿಸಿದ್ದರೆ ದಾಳಿ ತಪ್ಪಿಸಬಹುದಾಗಿತ್ತು: ಮಾಜಿ ಯೋಧ ಬಸಪ್ಪ

ದಾವಣಗೆರೆಯ ಬೇತೂರು
Last Updated 15 ಫೆಬ್ರುವರಿ 2019, 16:01 IST
ಅಕ್ಷರ ಗಾತ್ರ

ದಾವಣಗೆರೆ: ‘ಭದ್ರತಾ ಸಿಬ್ಬಂದಿ ವಾಹನ ಪಡೆ ಸಾಗುವಾಗ ಭಾರಿ ಭದ್ರತೆ ಒದಗಿಸಲಾಗುತ್ತದೆ. ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಇಷ್ಟರ ನಡುವೆಯೂ ಉಗ್ರರು ದಾಳಿ ನಡೆದಿದೆ ಎಂದರೆ ನಾವು ಇನ್ನಷ್ಟು ಎಚ್ಚರ ವಹಿಸಬೇಕಾಗಿತ್ತು ಅನ್ನಿಸುತ್ತದೆ’ ಎನ್ನುತ್ತಾರೆ ಒಂದು ಕಾಲದಲ್ಲಿ ಇದೇ ವಾಹನ ಪಡೆಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ದಾವಣಗೆರೆಯ ಬೇತೂರು ಎನ್‌.ಎಂ. ಬಸಪ್ಪ.

‘ಯಾವುದೇ ಭದ್ರತಾ ಸಿಬ್ಬಂದಿ ವಾಹನ ಪಡೆ ಪ್ರಯಾಣಿಸುವಾಗ ಮೊದಲು ರೋಡ್‌ ಓಪನಿಂಗ್‌ ಪಾರ್ಟಿ (ರಸ್ತೆ ಅಪಾಯದ ಮುನ್ನೆಚ್ಚರಿಕೆ ನೀಡುವ ತಂಡ) ಕಳುಹಿಸಲಾಗುತ್ತದೆ. ಆ ತಂಡ ಪಡೆ ಸಾಗುವ ಹಾದಿ ಉದ್ದಕ್ಕೂ ತೆರಳಿ ವರದಿ ನೀಡಿದ ನಂತರವೇ ಪ್ರಯಾಣಿಸಲಾಗುತ್ತದೆ. ಈ ದುರಂತ ಹೇಗೆ ನಡೆಯಿತು ಎನ್ನುವುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

‘ನಾನು ಅಲ್ಲಿ ಕೆಲಸ ಮಾಡುತ್ತಿದ್ದಾಗ, 70, 80, 90 ಹೀಗೆ ವಾಹನಗಳ ಪಡೆ ಹೋಗುತ್ತಿದ್ದವು. ಒಂದೊಂದರಲ್ಲಿ ಸರಾಸರಿ 25 ಜನರು ಇರುತ್ತಿದ್ದರು. ಅವರಲ್ಲಿ ಅಧಿಕಾರಿಗಳು, ಸೈನಿಕರು, ಕುಟುಂಬಸ್ಥರೂ ಇರುತ್ತಿದ್ದರು. ಎದುರುಗಡೆಯಿಂದ ಯಾವುದೇ ವಾಹನ ಹೋಗಲು ಅವಕಾಶ ಕೊಡುತ್ತಿರಲಿಲ್ಲ. ಈಗಿನ ದುರಂತಕ್ಕೆ ಎದುರಿನಿಂದ ವಾಹನ ಬರಲು ಅವಕಾಶ ಮಾಡಿಕೊಟ್ಟಿದ್ದೇ ಕಾರಣ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ಅಲ್ಲಿದ್ದಾಗ ಭದ್ರತಾ ಸಿಬ್ಬಂದಿ ವಾಹನ ಪಡೆ ಇಂತಹ ದಿನ, ಇಂತಹ ವೇಳೆ ಹೋಗುತ್ತದೆ ಎಂಬುದನ್ನು ಮೊದಲೇ ಘೋಷಣೆ ಮಾಡಲಾಗುತ್ತಿತ್ತು. ಹಾಗಾಗಿ, ನಾಗರಿಕರ ವಾಹನಗಳಿಗೆ ಆ ವೇಳೆ ಪ್ರವೇಶ ನಿರ್ಬಂಧಿಸಲಾಗುತ್ತಿತ್ತು. ಅಷ್ಟಕ್ಕೂ ಆ ದಾರಿ ಒನ್‌ ವೇ ಆಗಿತ್ತು. ಈಗ ಪರಿಸ್ಥಿತಿ ಹೇಗಿದೆ ನನಗೆ ತಿಳಿದಿಲ್ಲ’ ಎಂದರು.

‘ವಾಹನ ಪಡೆ ಸಾಗುವಾಗ ಎರಡು ಕಿ.ಮೀ.ಗೆ ಇಬ್ಬರು ಸೇನಾ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಬಾಂಬ್ ಪತ್ತೆ ಮಾಡುವ ಉಪಕರಣವನ್ನೂ ಅವರಿಗೆ ನೀಡಲಾಗುತ್ತದೆ. ತಿರುವು ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗುತ್ತದೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಉಗ್ರರು ಸ್ಫೋಟಕವಿದ್ದ ಸ್ಕಾರ್ಪಿಯೊ ನುಗ್ಗಿಸಿದ್ದು ಹೇಗೆ’ ಎಂದು ಪ್ರಶ್ನಿಸಿದರು.

‘ಇದೊಂದು ದೊಡ್ಡ ದುರಂತ. ಸಿಆರ್‌ಪಿಎಫ್ ಸಿಬ್ಬಂದಿ ಸಾವು ನನಗೆ ತೀವ್ರ ನೋವು ತಂದಿದೆ’ ಎಂದು ಅವರು ದುಃಖ ವ್ಯಕ್ತಪಡಿಸಿದರು.

ಸೇನೆಯಲ್ಲಿ 28 ವರ್ಷಗಳ ಸೇವೆ
28 ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಬಸಪ್ಪ 2004ರಲ್ಲಿ ನಿವೃತ್ತರಾದರು. ಕಾರ್ಗಿಲ್‌ನಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದರು. ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ದೇಶದ ಗಡಿಭಾಗದಲ್ಲೇ ಸಾಕಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT