ಭಾನುವಾರ, ಏಪ್ರಿಲ್ 18, 2021
31 °C

ಅಭಿವೃದ್ಧಿಗೆ ಜನಪ್ರತಿನಿಧಿಗಳೇ ಅಡ್ಡಿ: ಪ್ರಿಯಾಂಕ್‌ ಖರ್ಗೆ ಸಿಡಿಮಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನಮ್ಮ ನಗರವನ್ನು ಅಭಿವೃದ್ಧಿ ಮಾಡಬೇಕೆಂಬ ಹಂಬಲ ನಮಗೂ ಸಾಕಷ್ಟಿದೆ. ಆದರೆ, ‘ನಮ್ಮ’ ಜನಪ್ರತಿನಿಧಿಗಳು, ರಾಜಕಾರಣಿಗಳೇ ಇದಕ್ಕೆ ಅಡ್ಡಿ ಮಾಡುತ್ತಾರೆ. ಏನೇನೋ ನೆಪ ಹೇಳಿ ಕೆಲಸ ಆಗದಂತೆ ಮಾಡುತ್ತಾರೆ. ಏನು ಮಾಡುವುದು ಹೇಳಿ?’.

ಹೀಗೆ ಸಿಡಿಮಿಡಿಗೊಂಡಿದ್ದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ. ಕಲಬುರ್ಗಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ನಡೆಸಿದ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಸಹೋದ್ಯೋಗಿಗಳ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

‘ಇಲ್ಲಿನ ಐತಿಹಾಸಿಕ ಬಹಮನಿ ಕೋಟೆಯಲ್ಲಿ 300 ಅಕ್ರಮ ಮನೆಗಳಿವೆ. ಅವುಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ನಗರದ ಹಲವು ಕಡೆ ಇಂಥ ಒತ್ತುವರಿ ತೆರವು ಮಾಡಲು ಹೋದಾಗ, ಶಾಸಕರೇ ಫೋನ್‌ ಮಾಡಿ ತಡೆಯುತ್ತಾರೆ. ‘ಇದು ನನ್ನ ಮರಿಯಾದೆ ಪ್ರಶ್ನೆ. ಸದ್ಯಕ್ಕೆ ಮುಟ್ಟಬೇಡಿ, ನಾಲ್ಕು ದಿನದಲ್ಲಿ ನಾನೇ ತೆರವು ಮಾಡಿಸುತ್ತೇನೆ’ ಎಂದು ಭರವಸೆ ಕೊಡುತ್ತಾರೆ. ನಾನು ಇತ್ತ ಬರುತ್ತಿದ್ದಂತೆ ಜನರಿಂದ ಕೋರ್ಟ್‌ನಲ್ಲಿ ತಡೆಯಾಜ್ಞೆ ಹಾಕಿಸುತ್ತಾರೆ. ಇದು ಕೆಲಸ ಮಾಡುವ ಪದ್ಧತಿಯೇ?’ ಎಂದೂ ಅವರು ಖಾರವಾಗಿ ಪ್ರಶ್ನಿಸಿದರು.

‘ಗುಲಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡ 90 ಎಕರೆ ಜಮೀನಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕೆಲವರು ಸಭೆಯ ಮಧ್ಯದಲ್ಲೇ ನುಗ್ಗಿ ಪ್ರತಿಭಟನೆ ನಡೆಸಿದರು.

ಇದರಿಂದ ಮತ್ತಷ್ಟು ಕುಪಿತಗೊಂಡ ಪ್ರಿಯಾಂಕ್‌, ‘ಈ ಕುರಿತು ನಿಮಗಿಂತ ಮೊದಲು ನಾನೇ ಎರಡು ಬಾರಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಿದ್ದೇನೆ. ನಿಮಗೆ ಸ್ವಲ್ಪ ದಿನ ತಾಳುವ ವ್ಯವಧಾನ ಇಲ್ಲವೇ? ಇಷ್ಟೆಲ್ಲ ಕೆಲಸ ಮಾಡಿದ ಮೇಲೂ ಸಭೆಯಲ್ಲಿ ನನ್ನ ಮರಿಯಾದೆ ತೆಗೆಯುತ್ತೀರಿ. ಛೆ! ನಮ್ಮ ಹಣೆಬರಹವೇ ಇಷ್ಟು...’ ಎಂದೂ ಅವರು ಬೇಸರ ಹೊರಚೆಲ್ಲಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು