ಶಿವಮೊಗ್ಗ: ಬಿಜೆಪಿ ಭಿನ್ನಮತ ಸ್ಪೋಟ, ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಭಾನುಪ್ರಕಾಶ್

7

ಶಿವಮೊಗ್ಗ: ಬಿಜೆಪಿ ಭಿನ್ನಮತ ಸ್ಪೋಟ, ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಭಾನುಪ್ರಕಾಶ್

Published:
Updated:

ಶಿವಮೊಗ್ಗ: ‘ನಾನು ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನವನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನನ್ನನ್ನು ಆ ಸ್ಥಾನದಿಂದ ಕಿತ್ತು ಹಾಕಿದ್ದರು. ಈಗ ಏಕಾಏಕಿ ಮತ್ತೆ ನೇಮಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಎಂ.ಬಿ.ಭಾನುಪ್ರಕಾಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿಯೇ ನಾನು ಉಳಿಯುತ್ತೇನೆ. ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ಸತತ ಕೆಲಸ ಮಾಡಿದ್ದೇನೆ. ರಾಘವೇಂದ್ರ ಅವರು ಗೆಲ್ಲಬೇಕು ಎನ್ನುವ ಹಂಬಲ ನನಗೂ ಇದೆ. ಯಡಿಯೂರಪ್ಪ ಅವರು ಎಲ್ಲರವನ್ನೂ ವಿಶ್ವಾಸದಿಂದ ಕಾಣುತ್ತಿಲ್ಲ ಎನ್ನುವ ನೋವು ನನ್ನದು ಎಂದು ಅವರು ಅಸಮಾಧಾನ ಹೊರಹಾಕಿದರು.

ತಂತ್ರಗಾರಿಕೆಯಿಂದ ಚುನಾವಣೆಗಳನ್ನು ಗೆಲ್ಲಬಹುದು. ಸರ್ಕಾರಗಳನ್ನು ಉಳಿಸಿಕೊಳ್ಳಬಹುದು, ಕೆಡವಬಹುದು. ಆದರೆ ಮನಸ್ಸುಗಳನ್ನು ಪ್ರೀತಿ ಮತ್ತು ವಿಶ್ವಾಸದಿಂದ ಮಾತ್ರ ಕಟ್ಟಲು ಸಾಧ್ಯ. ತಂತ್ರಗಾರಿಕೆಯಿಂದ ಮನಸ್ಸುಗಳನ್ನು ಬೆಸೆಯಲು ಸಾಧ್ಯವಿಲ್ಲ ಎಂದರು.

ನಾನೂ ಮೂವತ್ತೈದು ವರ್ಷಗಳಿಂದ ಬಿಜೆಪಿಗಾಗಿ ಕೆಲಸ‌ ಮಾಡುತ್ತಿದ್ದೇನೆ. ನಮ್ಮ ಪಕ್ಷದಲ್ಲಿ ಎಂದೂ ಲೆಟರ್ ಸಂಸ್ಕೃತಿಯಿರಲಿಲ್ಲ. ಈಗ ಅದೂ ಶುರುವಾಗಿದೆ. ಕೆಜೆಪಿಯಿಂದ‌ ಬಂದಾಗ ಯಡಿಯೂರಪ್ಪ‌ ಅವರನ್ನು ಒಪ್ಪಿಕೊಂಡಿದ್ದೆವು. ಆದರೆ ‘ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ’ ಎಂದವರನ್ನೇ ಯಡಿಯೂರಪ್ಪ ಕೆಟ್ಟವರನ್ನಾಗಿ ಮಾಡಿದ್ದಾರೆ. ಸೊಗಡು ಶಿವಣ್ಣ, ಶಿವಯೋಗಿ ಸ್ವಾಮಿ, ಗಿರೀಶ್ ಪಟೇಲ್ ಸೇರಿದಂತೆ ಹಲವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷಕ್ಕೆ ಹೊಸಬರನ್ನು ಕರೆದುಕೊಂಡು ಬರುವುದರ ಜೊತೆಗೆ ನಮ್ಮ ಪಕ್ಷದಲ್ಲೇ ಹತ್ತಾರು ವರ್ಷಗಳಿಂದ ಕೆಲಸಮಾಡಿ, ಸದ್ಯ ತಟಸ್ಥರಾಗಿ ಉಳಿದವರನ್ನು ಮಾತನಾಡಿಸಬೇಕು ಎಂದು ಒತ್ತಾಯಿಸಿದರು. ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !