ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇರಿಕೆ ವಿರುದ್ಧ ತಿರುಗಿಬಿದ್ದ ದಕ್ಷಿಣ

Last Updated 15 ಸೆಪ್ಟೆಂಬರ್ 2019, 2:30 IST
ಅಕ್ಷರ ಗಾತ್ರ

ಬೆಂಗಳೂರು:‘ಹಿಂದಿ ದಿವಸ್‌’ ಆಚರಣೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದಿ ಹೇರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್‌ನಲ್ಲಿ ಅಭಿಯಾನವೇ ಆರಂಭವಾಗಿದೆ.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದಿದ್ದ ಗುಜರಾತ್‌ ಹೈಕೋರ್ಟ್
ಹಿಂದಿ ರಾಷ್ಟ್ರೀಯ ಭಾಷೆ ಎಂಬ ಗ್ರಹಿಕೆಯನ್ನು ಗುಜರಾತ್ ಹೈಕೋರ್ಟ್ 2010ರಲ್ಲಿ ತಿರಸ್ಕರಿಸಿತ್ತು. ಅತಿಹೆಚ್ಚು ಜನರು ಮಾತನಾಡುವ ಭಾಷೆ ಎಂಬುದರ ಹೊರತಾಗಿ, ಅದು ರಾಷ್ಟ್ರೀಯ ಭಾಷೆ ಎಂದು ಘೋಷಣೆಯಾಗಿರುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿತ್ತು.

‘ಭಾರತದಲ್ಲಿ ಹೆಚ್ಚಿನ ಜನರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸುವ ಯಾವುದೇ ದಾಖಲೆಗಳು ಇಲ್ಲ’ ಎಂದು ಅಂದಿನ ಮುಖ್ಯನ್ಯಾಯಮೂರ್ತಿ ಎಸ್.ಜೆ. ಮುಖ್ಯೋಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನಂತ್ ಎಸ್. ದವೆ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

ದ್ವಿಭಾಷಾ ಸೂತ್ರವೇ ಅಂತಿಮ
ಹಿಂದಿ ಹೇರಿಕೆಯನ್ನು 1960ರಿಂದಲೂ ವಿರೋಧಿಸಿಕೊಂಡು ಬಂದಿರುವ ತಮಿಳುನಾಡಿನಲ್ಲಿ ಶಾ ಹೇಳಿಕೆ ಮತ್ತೆ ಕಿಚ್ಚು ಹಚ್ಚಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೇಂದ್ರದ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ. ಬಿಜೆಪಿ ಮಿತ್ರಪಕ್ಷದ ಎಐಎಡಿಎಂಕೆ ಪಕ್ಷವೂ ಇದಕ್ಕೆ ಹೊರತಾಗಿಲ್ಲ.

‘ಸರ್ಕಾರವು ದ್ವಿಭಾಷಾ ಸೂತ್ರಕ್ಕೆ ಕಟಿಬದ್ಧವಾಗಿದೆ (ತಮಿಳು, ಇಂಗ್ಲಿಷ್). ರಾಜ್ಯದ ವಿರೋಧವನ್ನು ಮೋದಿ ಹಾಗೂ ಶಾ ಅವರ ಗಮನಕ್ಕೆ ಈ ಮೊದಲೂ ತರಲಾಗಿತ್ತು’ ಎಂದು ತಮಿಳುನಾಡು ಶಿಕ್ಷಣ ಸಚಿವ ಕೆ.ಎ. ಸಂಗೊಟ್ಟಯನ್ ಹೇಳಿದ್ದಾರೆ.

ಮತ್ತೊಂದು ಪ್ರತಿಪಕ್ಷ ಪಿಎಂಕೆ ಕೂಡ ಶಾ ನಡೆಯನ್ನು ಖಂಡಿಸಿದೆ.

ಈಶಾನ್ಯ ರಾಜ್ಯಗಳ ವಿರೋಧ
ಶಾ ಹೇಳಿಕೆಗೆ ಈಶಾನ್ಯ ರಾಜ್ಯಗಳು ತೀವ್ರವಾಗಿ ಪ್ರತಿಕ್ರಿಯಿಸಿವೆ.

‘ಹಿಂದಿ ರಾಷ್ಟ್ರ ಭಾಷೆ ಅಲ್ಲ. ಅಧಿಕೃತ ಭಾಷೆಗಳ ಪಟ್ಟಿಯಲ್ಲಿಹಿಂದಿ ಹಾಗೂ ಇಂಗ್ಲಿಷ್ ಇವೆ. ಹೀಗಾಗಿ ಹಿಂದಿಯನ್ನು ಎಲ್ಲ ಕಡೆ ಜಾರಿಗೊಳಿಸಬಾರದು. ಒಂದು ವೇಳೆ ಹಿಂದಿ ಹೇರಿದರೆ ಅದನ್ನು ತೀವ್ರವಾಗಿ ವಿರೋಧಿಸುವುದಾಗಿ
ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ಸಂಘಟನೆ (ಎನ್‌ಇಎಸ್‌ಒ) ಮುಖ್ಯಸ್ಥ ಸಮೌಲ್ ಜೈರ್ವಾ ಪ್ರತಿಕ್ರಿಯಿಸಿದ್ದಾರೆ.

ದೇಶದಾದ್ಯಂತ ಹಿಂದಿ ಪ್ರಚುರಪಡಿಸುವ 2019ರ ಹೊಸ ಶಿಕ್ಷಣ ನೀತಿಯ ಕರಡು ವಿರೋಧಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಂಘಟನೆ ಇತ್ತೀಚೆಗೆ ಪತ್ರ ಬರೆದಿತ್ತು.

ತೆಲುಗು ಭಾಷಿಕರ ಆಕ್ಷೇಪ
ಅಮೆರಿಕದಲ್ಲಿ ತೆಲುಗು ಭಾಷೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಲಿಕಾನ್ ಆಂಧ್ರ ಸಂಘಟನೆ ಅಧ್ಯಕ್ಷ ಕೂಚಿ
ಭೊಟ್ಲ ಆನಂದ್, ‘ಹಿಂದಿಯನ್ನು ಗೌರವಿಸುತ್ತೇವೆ. ಆದರೆ ತೆಲುಗು ಮಾತನಾಡುವ 15 ಕೋಟಿ ಜನರು ದೇಶದಲ್ಲಿದ್ದಾರೆ. ಹಿಂದಿ ಹೊರತುಪಡಿಸಿದ ಭಾಷೆಗಳು ಕೇವಲ ಭಾಷೆಗಳಾಗಿರದೇ ಒಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ತೆಲುಗು ಮಾತನಾಡುವವರ ಪೈಕಿ ಶೇ 75ರಷ್ಟು ಜನರಿಗೆ ಬೇರೆ ಭಾಷೆ ತಿಳಿದಿಲ್ಲ’ ಎಂದಿದ್ದಾರೆ.

ನಾವು ಒಪ್ಪುವುದಿಲ್ಲ
‘ಹಿಂದಿ ಹೇರಿಕೆಯು ದೇಶದ ವಿವಿಧತೆಗೆ ವಿರುದ್ಧವಾದುದು. ಅಂತಹ ವೈವಿಧ್ಯವನ್ನು ಬಿಜೆಪಿ ಹತ್ತಿಕ್ಕುತ್ತಿರಬಹುದು. ಆದರೆನಮ್ಮ ಮೇಲೆ ಬೇರೆ ಭಾಷೆಯ ಹೇರಿಕೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಕೇರಳದ ಸಂಸ್ಕೃತಿ ಸಚಿವ ಎ.ಕೆ.ಬಾಲನ್ ಹೇಳಿದ್ದಾರೆ.

‘ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಿರುವ ಭಾರತದಂತಹ ದೇಶಕ್ಕೆ ‘ಒಂದು ದೇಶ, ಒಂದು ಭಾಷೆ’ಯಂತಹ ಪರಿಕಲ್ಪನೆಗಳು ಒಗ್ಗುವುದಿಲ್ಲ. ಹಿಂದಿಯನ್ನು ಹೆಚ್ಚು ಜನರು ಮಾತನಾಡಿದರೂ, ಎಲ್ಲರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಒತ್ತು ಸಿಗಬೇಕು’ ಎಂದು ಕೇರಳದ ಕವಯಿತ್ರಿ ಸುಗತಕುಮಾರಿ ಹೇಳಿದ್ದಾರೆ.

ಸಂವಿಧಾನ ತಿದ್ದುಪಡಿಗೆ ಪಾಸ್ವಾನ್ ಇಂಗಿತ
ಸುಪ್ರೀಂ ಕೋರ್ಟ್ ಹಾಗೂ ಎಲ್ಲ ಹೈಕೋರ್ಟ್‌ಗಳಲ್ಲಿ ಭಾರತೀಯ ಭಾಷೆ ಬಳಕೆ ಕಡ್ಡಾಯಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಸಂವಿಧಾನ ಜಾರಿಯಾದ 15 ವರ್ಷಗಳವರೆಗೆ ಮಾತ್ರ ಇಂಗ್ಲಿಷ್ ಬಳಕೆಗೆ ಉದ್ದೇಶಿಸಲಾಗಿತ್ತು. ಆದರೆ ಇಂಗ್ಲಿಷ್‌ ಬಳಕೆ ಮುಂದುವರಿದಿದ್ದು, ಅದರ ಸ್ಥಾನದಲ್ಲಿ ಇರಬೇಕಿದ್ದ ಹಿಂದಿ ಭಾಷೆ ಅವಗಣನೆಗೆ ಒಳಗಾಗಿದೆ ಎಂದು ಹೇಳಿದ್ದಾರೆ.

1968ರ ರಾಷ್ಟ್ರೀಯ ನೀತಿಯಲ್ಲಿ ತ್ರಿಭಾಷಾ ಸೂತ್ರದಲ್ಲಿ ಉಲ್ಲೇಖಿಸಿರುವಂತೆ,ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಒಂದು ಆಧುನಿಕ ಭಾಷೆ (ದಕ್ಷಿಣದ ಭಾಷೆಗಳಿಗೆ ಆದ್ಯತೆ) ಹಾಗೂಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಯಾವುದಾದರೂ ಒಂದು ಪ್ರಾದೇಶಿಕ ಭಾಷೆ ಬೋಧನೆಗೆ ಅವಕಾಶವಿದೆ.

ತ್ರಿಭಾಷಾ ಸೂತ್ರವೇ ಇರಲಿ: ಕಾಂಗ್ರೆಸ್
ಹಿಂದಿ ಹೇರಿಕೆ ಕುರಿತ ಅಮಿತ್ ಶಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ತ್ರಿಭಾಷಾ ಸೂತ್ರವನ್ನು ಬದಲಿಸದಂತೆ ಸಲಹೆ ನೀಡಿದೆ.

‘ತ್ರಿಭಾಷಾ ಸೂತ್ರ ಬದಲಾವಣೆಗೆ ಮುಂದಾದರೆ ದೇಶದಲ್ಲಿ ಕಲಹ ಸೃಷ್ಟಿಯಾಗುವ ಅಪಾಯವಿದೆ’ ಎಂದು ಎಚ್ಚರಿಸಿದೆ.

‘ಭಾರತದ ವಿವಿಧತೆಯನ್ನು ಗೌರವಿಸಿರುವ ಸಂವಿಧಾನ, ದೇಶದ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದಿದೆ. ಸಂವಿಧಾನವು ಸ್ಪಷ್ಟಪಡಿಸಿರುವ ವಿಚಾರಗಳನ್ನು ಎತ್ತಿಕೊಂಡು ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ನಾನು ಕೂಡಾ ಹಿಂದಿ ಭಾಷಿಕ. ಆದರೆ ಎಲ್ಲ ಭಾಷೆಗಳನ್ನೂ ನಾನು ಗೌರವಿಸುತ್ತೇನೆ’ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೇಳಿದ್ದಾರೆ.

ಏನಿದು ತ್ರಿಭಾಷಾ ಸೂತ್ರ
1948–49ನೇ ಸಾಲಿನಲ್ಲಿ ತ್ರಿಭಾಷಾ ಸೂತ್ರವನ್ನು ವಿಶ್ವವಿದ್ಯಾಲಯ ಶೈಕ್ಷಣಿಕ ಆಯೋಗವು ರೂಪಿಸಿತು

1968ರಲ್ಲಿ ಕೇಂದ್ರ ಸರ್ಕಾರವು ಈ ಸೂತ್ರವನ್ನು ರಾಷ್ಟ್ರೀಯ ನೀತಿಯಾಗಿ ಅಂಗೀಕರಿಸಿತು

ಈ ಪ್ರಕಾರ ಉತ್ತರ ಭಾರತದ ರಾಜ್ಯಗಳಲ್ಲಿ (ಹಿಂದಿ ಪ್ರಧಾನ ಬಾಷೆಯಾಗಿರುವ ರಾಜ್ಯಗಳಲ್ಲಿ) ಹಿಂದಿ, ಇಂಗ್ಲಿಷ್ ಮತ್ತು ಭಾರತದ ಯಾವುದೇ ಪ್ರಾದೇಶಿಕ ಭಾಷೆಯನ್ನು (ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ ನೀಡಬೇಕು) ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು

ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ ಅನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಬೇಕು

ಹಿಂದಿ– ಪ್ರಾದೇಶಿಕ ಭಾಷೆ ಜಟಾಪಟಿ
ಶನಿವಾರ ‘ಹಿಂದಿ ದಿವಸ’ದ ಅಂಗವಾಗಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಹಿಂದಿ ಭಾಷೆಯು ಸರಳ, ಸ್ವಾಭಾವಿಕ ಹಾಗೂ ತನ್ನ ಸೊಗಸಿನಿಂದ ಅರ್ಥಪೂರ್ಣ ಭಾಷೆ ಎನಿಸಿಕೊಂಡಿದೆ’ ಎಂದುಉಲ್ಲೇಖಿಸಿದ್ದಾರೆ.

ಹಿಂದಿ ಭಾಷೆಯು ಎಲ್ಲಾ ಭಾರತೀಯರು ಮಾತೃಭಾಷೆ ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ತನ್ನ ವಿಶಿಷ್ಟ ಭಾಷೆ ಮಾತನಾಡುವ, ತನ್ನ ಸಂಸ್ಕೃತಿಯನ್ನು ಅನುಸರಿಸುವ ಹಕ್ಕನ್ನು ಸಂವಿಧಾನದ 29ನೇ ವಿಧಿ ನೀಡಿದೆ. ಹಿಂದಿ, ಹಿಂದು, ಹಿಂದುತ್ವಕ್ಕಿಂತ ಭಾರತ ದೊಡ್ಡದು ಎಂದು ಪ್ರತಿಪಾದಿಸುವ ಮೂಲಕ ಬಿಜೆಪಿಯ ಕಾರ್ಯಸೂಚಿಯನ್ನು ಅವರು ತರಾಟೆಗೆ ತೆಗೆದುಕೊಂಡರು.

ಶಾ ಅವರ ಹೇಳಿಕೆಯು ಭಾರತದ ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಯತ್ನ ಎಂದು ಸಿಪಿಎಂ ದೂರಿದೆ.

ಬಹುತೇಕ ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನು ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತದೆ. ಆದರೆ ಉತ್ತರದ ಯಾವ ರಾಜ್ಯದಲ್ಲಿಯೂ ಏಕೆ ಮಲಯಾಳ ಅಥವಾ ತಮಿಳು ಬೋಧಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಒಪ್ಪಿಕೊಳ್ಳಲು ಸಿದ್ಧರಿದ್ದೇವೆ ಎಂಬ ಅಭಿಪ್ರಾಯವು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ

*
ದೇಶಕ್ಕೆ ಏಕ ಭಾಷೆಯ (ಹಿಂದಿ) ಅಗತ್ಯವಿದೆ. ಆದರೆ, ಸಾಂವಿಧಾನಿಕವಾಗಿ ಪ್ರತಿ ಭಾಷೆಗೂ ಅದರದೇ ಆದ ಮಹತ್ವ, ಸ್ಥಾನ ಮತ್ತು ಗೌರವ ಇದೆ.
-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

*
ಹಿಂದಿಗೆ ಆದ್ಯತೆ ನೀಡಿದ ಮಾತ್ರಕ್ಕೆ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸುತ್ತೇವೆ ಎಂದರ್ಥವಲ್ಲ. ಎಲ್ಲ ಭಾಷೆಗಳಿಗೂ ನಮ್ಮ ಬೆಂಬಲವಿದೆ. ಹಿಂದಿ ಕಲಿಯುವುದರಲ್ಲಿ ತಪ್ಪಿಲ್ಲ
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

*
ನಾವು ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತೇವೆ. ಹಿಂದಿ ಭಾಷೆಯನ್ನೂ ಕಲಿಯೋಣ. ಆದರೆ, ಅದು ಹೇರಿಕೆ ರೀತಿ ಆಗಬಾರದು.
-ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT