ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್, ಪಿಎಸ್‌ಐ ಪ್ರಶ್ನೆಪತ್ರಿಕೆ ಅಕ್ರಮ: ಮಣಿಪಾಲ್ ಪ್ರೆಸ್‌ನಿಂದ ಸೋರಿಕೆ

ಪ್ರಮುಖ ಆರೋಪಿ ಸೆರೆ
Last Updated 4 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಮಣಿಪಾಲ್ ಪ್ರಿಂಟಿಂಗ್‌ ಪ್ರೆಸ್‌ನಿಂದ ಸೋರಿಕೆ ಆಗಿದ್ದವು ಎಂಬ ಸಂಗತಿ ಬೆಂಗಳೂರು ಸಿಸಿಬಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

‘ಮುದ್ರಣಾಲಯದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಅನಿಲ್ ಫ್ರಾನ್ಸಿಸ್ ಎಂಬಾತನೇ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದ. ಆತನನ್ನು ಸೋಮವಾರ ನಸುಕಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅಲೋಕ್‌ಕುಮಾರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕರ್ನಾಟಕ ಹಾಗೂ ಹೊರ ರಾಜ್ಯಗಳ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಮಣಿಪಾಲ್ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮುದ್ರಣವಾಗುತ್ತವೆ. ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಕೊಠಡಿಯಲ್ಲಿ ಸಂಗ್ರಹಿಸಿಡಲಾಗುತ್ತದೆ’

‘ಆ ಕೊಠಡಿ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್‌ಗಳ ಗಮನವನ್ನು ಬೇರೆಡೆ ಸೆಳೆಯುತ್ತಿದ್ದ ಅನಿಲ್‌, ಪ್ರಶ್ನೆಪತ್ರಿಕೆಯ ಪ್ರತಿಯೊಂದನ್ನು ಕದ್ದುಕೊಂಡು ಬಂದು ಜೆರಾಕ್ಸ್‌ ಮಾಡಿಸುತ್ತಿದ್ದ. ನಂತರ ಮೂಲ ಪ್ರತಿಯನ್ನು ಕೊಠಡಿಯಲ್ಲಿ ಇಡುತ್ತಿದ್ದ. ಸೋರಿಕೆ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ’ ಎಂದು ಅವರು ಹೇಳಿದರು.

‘ಪ‍್ರಶ್ನೆಪತ್ರಿಕೆಯ ಜೆರಾಕ್ಸ್ ಪ್ರತಿಯನ್ನು ಅನಿಲ್, ಇನ್ನೊಬ್ಬ ಆರೋಪಿ ದಾವಣಗೆರೆಯ ಅಮೀರ್‌ ಅಹ್ಮದ್‌ಗೆ ಕೊಡುತ್ತಿದ್ದ. ಆ ಪ್ರತಿಯನ್ನು ಆತ, ತುಮಕೂರಿನ ಸಿ.ಟಿ.ಬಸವರಾಜು ಎಂಬಾತನಿಗೆ ನೀಡುತ್ತಿದ್ದ. ಅದಕ್ಕೆ ಪ್ರತಿಯಾಗಿ ಲಕ್ಷಾಂತರ ಹಣ ಪಡೆದುಕೊಳ್ಳುತ್ತಿದ್ದ’.

‘ಪ್ರಶ್ನೆಪತ್ರಿಕೆ ಸಿಗುತ್ತಿದ್ದಂತೆ ಬಸವರಾಜು, ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಶಿವಕುಮಾರಯ್ಯ ಅಲಿಯಾಸ್ ಗುರೂಜಿ ಹಾಗೂ ಆತನ ಸಹಚರರ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದ. ಲಕ್ಷಾಂತರ ರೂಪಾಯಿ ಹಣ ಪಡೆದು ಪರೀಕ್ಷೆ ಮುನ್ನಾದಿನವೇ ಪ್ರಶ್ನೆಪತ್ರಿಕೆಗಳನ್ನು ಅವರಿಗೆ ಕೊಡುತ್ತಿದ್ದ’ ಎಂದು ಅಲೋಕ್‌ಕುಮಾರ್‌ ಹೇಳಿದರು.

ಯುವತಿಯರಿಂದ ಅನಿಲ್‌ನ ಸಂಪರ್ಕ: ‘ಮಣಿಪಾಲ್ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಎಂಬಾತನ ಮೂಲಕ ಅಮೀರ್ ಅಹ್ಮದ್‌, ಆಂಧ್ರಪ್ರದೇಶದ ವೃತ್ತಿಪರ ಕೋರ್ಸ್‌ಗಳ ಪ್ರಶ್ನೆಪತ್ರಿಕೆಯನ್ನೂ ಸೋರಿಕೆ ಮಾಡಿದ್ದ. ಆ ಪ್ರಕರಣದಲ್ಲಿ ಅವರಿಬ್ಬರನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದರು. ಆಗ ಪ್ರವೀಣ್‌ನನ್ನು ಕೆಲಸದಿಂದ ಕಿತ್ತುಹಾಕಲಾಗಿತ್ತು. ಅಮೀರ್ ಜಾಮೀನು ಮೇಲೆ ಹೊರಬಂದು ಪುನಃ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಸಂಚು ರೂಪಿಸುತ್ತಿದ್ದ’ ಎಂದು ಅಲೋಕ್‌ ಕುಮಾರ್ ತಿಳಿಸಿದರು.

‘ಮಣಿಪಾಲ್ ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಅನಿಲ್‌ ಫ್ರಾನ್ಸಿಸ್, ಫೇಸ್‌ಬುಕ್‌ನಲ್ಲಿ ಪ್ರೊಫೈಲ್‌ ಹಾಕಿಕೊಂಡಿದ್ದ. ಯುವತಿಯರ ಮೂಲಕ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ ಅಮೀರ್‌ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದ. ಕ್ರಮೇಣ ಸ್ನೇಹ ಸಂಪಾದಿಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಒಪ್ಪಿಸಿದ್ದ. ಆ ನಂತರವೇ ಬಿಎಂಟಿಸಿ, ಕಾನ್‌ಸ್ಟೆಬಲ್ ಪರೀಕ್ಷೆಯ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದರು’ ಎಂದು ಹೇಳಿದರು.

‘ಪಿಎಸ್‌ಐ ಪರೀಕ್ಷೆ ವೇಳೆಯಲ್ಲಿ ಅನಿಲ್‌, ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಹೀಗಾಗಿ, ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯವಾಗಿರಲಿಲ್ಲ. ಸೋರಿಕೆ ಸುಳಿವು ಸಿಗುತ್ತಿದ್ದಂತೆ ಜಾಲದ ಎಲ್ಲ ಆರೋಪಿಗಳನ್ನು ಬಂಧಿಸಲಾಯಿತು’ ಎಂದರು.

‘ಪ್ರಕರಣದಲ್ಲಿ 150 ಮಂದಿಯನ್ನು ಬಂಧಿಸಲಾಗಿದೆ. ₹67.73 ಲಕ್ಷ ನಗದು, ಕಾನ್‌ಸ್ಟೆಬಲ್ ಪ್ರಶ್ನೆಪತ್ರಿಕೆಯ 98 ಜೆರಾಕ್ಸ್‌ ಪ್ರತಿಗಳು, 138 ಅಭ್ಯರ್ಥಿಗಳ ಪ್ರವೇಶ ಪತ್ರಗಳು, 35 ಅಭ್ಯರ್ಥಿಗಳ ಅಸಲಿ ಶೈಕ್ಷಣಿಕ ದಾಖಲೆಗಳು, 36 ಮೊಬೈಲ್, 17 ವಾಹನ, ಎರಡು ಪ್ರಿಂಟರ್, ಲ್ಯಾಪ್‌ಟಾಪ್‌, ಟ್ಯಾಬ್ ಹಾಗೂ ಹಣ ಎಣಿಸುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಸಿಸಿಬಿ ತಂಡಕ್ಕೆ ₹3 ಲಕ್ಷ ಬಹುಮಾನ ಘೋಷಿಸಿದ್ದಾರೆ’ ಎಂದು ಅವರು ತಿಳಿಸಿದರು.

ಅಭ್ಯರ್ಥಿಗಳ ಹಣದಲ್ಲಿ ಸಿನಿಮಾ ನಿರ್ಮಾಣ

‘ದಾವಣಗೆರೆಯ ಅಮೀರ್ ಅಹ್ಮದ್, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ₹55.50 ಲಕ್ಷ ಗಳಿಸಿದ್ದ. ಅದರಲ್ಲಿ ₹20 ಲಕ್ಷವನ್ನು ಅನಿಲ್‌ ಫ್ರಾನ್ಸಿಸ್‌ಗೆ ಕೊಟ್ಟಿದ್ದ. ₹25 ಲಕ್ಷ ಖರ್ಚು ಮಾಡಿ ಕನ್ನಡದಲ್ಲಿ ‘ಹಾಫ್‌ ಬಾಯಿಲ್ಡ್‌’ ಸಿನಿಮಾ ನಿರ್ಮಿಸಿದ್ದ. ಇದೇ ತಿಂಗಳು ಅದು ಬಿಡುಗಡೆ ಆಗಬೇಕಿತ್ತು’ ಎಂದು ಅಲೋಕ್‌ಕುಮಾರ್‌ ಹೇಳಿದರು.

‘ಎಸ್ಸೆಸ್ಸೆಲ್ಸಿ ಓದಿರುವ ಅಮೀರ್, ಎಂಬಿಬಿಎಸ್ ವೈದ್ಯೆಯನ್ನು ಮದುವೆಯಾಗಿದ್ದಾನೆ. ಆರಂಭದಲ್ಲಿ ಟ್ರಾವೆಲ್‌ ಏಜೆನ್ಸಿ ಆರಂಭಿಸಿದ್ದ ಆತ, ಅದರಲ್ಲಿ ನಷ್ಟ ಉಂಟಾಗುತ್ತಿದ್ದಂತೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ದಂಧೆ ಆರಂಭಿಸಿದ್ದ’ ಎಂದರು.

ವಿಮಾನ ನಿಲ್ದಾಣದಲ್ಲಿ ಬಂಧನ

‘ಕೆಲವು ತಿಂಗಳ ಹಿಂದಷ್ಟೇ ಯುಎಇಗೆ ಹೋಗಿದ್ದ ಅನಿಲ್ ಫ್ರಾನ್ಸಿಸ್, ಶಾರ್ಜಾದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆತನನ್ನು ಅಲ್ಲಿಗೇ ಹೋಗಿ ಬಂಧಿಸಿದರೆ ಭಾರತಕ್ಕೆ ಕರೆತರುವುದು ತಡವಾಗುತ್ತಿತ್ತು. ವಿಶೇಷ ಕಾರ್ಯಾಚರಣೆಯೊಂದನ್ನು ನಡೆಸಿ ಆತನನ್ನು ಭಾರತಕ್ಕೆ ಕರೆಸಿಕೊಂಡೆವು. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನು ವಶಕ್ಕೆ ಪಡೆದೆವು’ ಎಂದು ಅಲೋಕ್‌ಕುಮಾರ್‌ ಮಾಹಿತಿ ನೀಡಿದರು.

ಆರೋಪಿಗಳು ಅಭ್ಯರ್ಥಿಗಳಿಂದ ಪಡೆದಿದ್ದ ಹಣ (ಹುದ್ದೆವಾರು, ತಲಾ ಒಬ್ಬರಿಂದ)

ಪಿಎಸ್‌ಐ – ₹40 ಲಕ್ಷದಿಂದ 60 ಲಕ್ಷ

ಕಾನ್‌ಸ್ಟೆಬಲ್ – ₹6 ಲಕ್ಷದಿಂದ ₹8 ಲಕ್ಷ

ಬಿಎಂಟಿಸಿ ಚಾಲಕ, ನಿರ್ವಾಹಕ – ₹5 ಲಕ್ಷದಿಂದ ₹10 ಲಕ್ಷ

* ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಮಣಿಪಾಲ್ ಪ್ರಿಂಟಿಂಗ್ ಪ್ರೆಸ್‌ನವರು ಲೋಪವೆಸಗಿದ್ದು ತನಿಖೆಯಿಂದ ಗೊತ್ತಾದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ
– ಅಲೋಕ್‌ಕುಮಾರ್‌, ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT