ತಾರಕ್ಕಕ್ಕೇರಿದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಕಿತ್ತಾಟ

7
ಜಗಳ ಬಗೆಹರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯಗೆ ವಹಿಸಿದ ವೇಣುಗೋಪಾಲ್

ತಾರಕ್ಕಕ್ಕೇರಿದ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಕಿತ್ತಾಟ

Published:
Updated:

ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳಕರ ನಡುವಿನ ಸಂಘರ್ಷಕ್ಕೆ ತೇಪೆ ಹಚ್ಚಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ಹರಸಾಹಸಪಟ್ಟರು. 

ಕಳೆದ ರಾತ್ರಿ ಲಕ್ಷ್ಮಿ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ನಾಯಕರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತ್ಯೇಕ ಮಾತುಕತೆ ನಡೆಸಿದರು.

ಈ ವೇಳೆ ವೇಣುಗೋಪಾಲ್‌ ಬಳಿ ತಾ.ಪಂ., ಜಿ.ಪಂ., ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ತುಂಬಾ ತೊಂದರೆ ಕೊಟ್ಟಿದ್ದಾರೆ. ನನ್ನ ಕ್ಷೇತ್ರದ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನಗೆ ನೆಮ್ಮದಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಜಲ ಸಂಪನ್ಮೂಲ, ಕಂದಾಯ, ಲೋಕೋಪಯೋಗಿ ಸೇರಿ ಹಲವು ಇಲಾಖೆಗಳಲ್ಲಿ ಅಧಿಕಾರಿಗಳನ್ನು ತಮ್ಮ ಇಷ್ಟದಂತೆ ನೇಮಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ, ಜಾರಕಿಹೊಳಿ ಸಹೋದರರ ವಿರುದ್ಧ ದೂರಿನ ಲಕ್ಷ್ಮಿ ಹೆಬ್ಬಾಳಕರ ಸುರಿಮಳೆಯನ್ನೇ ಸುರಿಸಿದರು. 

ನನ್ನ ಕ್ಷೇತ್ರದಲ್ಲಿ ಸುಮಾರು 8 ಜಿ.ಪಂ. ಕ್ಷೇತ್ರಗಳು ಇವೆ. ಸತೀಶ್​ ಜಾರಕಿಹೊಳಿ ಕ್ಷೇತ್ರದಲ್ಲಿ ಕೇವಲ 2 ಕ್ಷೇತ್ರಗಳು ಬರುತ್ತವೆ. ಹೀಗಿದ್ದರೂ ಅಧಿಕಾರಿಗಳನ್ನು ಅವರೇ ನೇಮಿಸಿಕೊಳ್ಳುತ್ತಿದ್ದಾರೆ. ಸಂಖ್ಯಾಬಲ, ಜನಬಲ ನನ್ನ ಪರವಾಗಿದೆ. ಜಾರಕಿಹೊಳಿ ಕುಟುಂಬದ ಬಗ್ಗೆ ನನಗೆ ಗೌರವವಿದೆ. ಆದರೆ, ಜಾರಕಿಹೋಳಿ ಸಹೋದರರು ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು. 

ನೀವು ಮಾಧ್ಯಮಗಳ ಮುಂದೆ ಹೋಗಬಾರದು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಖಡಕ್‌ ಸೂಚನೆ ನೀಡಿದ ‌ ವೇಣುಗೋಪಾಲ್‌ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. 

ಸಚಿವ ರಮೇಶ್ ಜಾರಕಿಹೊಳಿ ಜೊತೆಯೂ ತಡರಾತ್ರಿಯವರೆಗೂ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದೀರ್ಘ ಚರ್ಚೆ ನಡೆಸಿರುವ ವೇಣುಗೋಪಾಲ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಯಾಕೆ ಗೊಂದಲ ಮಾಡಿಕೊಳ್ತೀರಿ. ನಿಮ್ಮ ಸಮಸ್ಯೆ ಏನೇ ಇದ್ರೂ ನನ್ನ ಗಮನಕ್ಕೆ ತರಬಹುದಾಗಿತಲ್ವಾ. ಎಲ್ಲಾ ಬಿಟ್ಟು ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಹೆಚ್ಚು ಕಾಂಗ್ರೆಸ್ ಕ್ಷೇತ್ರಗಳನ್ನು ಗೆಲ್ಲಿಸಿದ್ದೇವೆ. ಪಕ್ಷಕ್ಕಾಗಿ ಇಷ್ಟು ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೂ ನನ್ನ ಹಾಗೂ ಸಹೋದರ ಸತೀಶ್ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಇರಲು ಹೇಗೆ ಸಾಧ್ಯ. ಜಿಲ್ಲೆಯಲ್ಲಿ ನಮ್ಮ ಬಳಿ ಯಾವುದನ್ನೂ ಚರ್ಚಿಸದೇ ಸರ್ವಾಧಿಕಾರಿ ಎಂಬಂತೆ ವರ್ತಿಸುತ್ತಿದ್ದಾರೆ. ನನ್ನ ಜೊತೆ ಹೈಕಮಾಂಡ್ ಇದೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ದೂರಿದರು. 

ಕೊನೆಗೆ ರಮೇಶ್ ಜಾರಕಿಹೊಳಿಗೆ‌ ಕಿವಿಮಾತು ಹೇಳಿದ ವೇಣುಗೋಪಾಲ್, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಹೀಗೆಲ್ಲಾ ಕಿತ್ತಾಡಿಕೊಂಡರೆ ಹೇಗೆ ? ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು.

ಬಗೆಹರಿಯದ ಬಿಕ್ಕಟ್ಟು:

ತಮ್ಮ ಆರೋಪಗಳಿಗೆ ಕಟ್ಟುಬಿದ್ದಿರುವ ಬೆಳಗಾವಿ ಜಿಲ್ಲಾ ಮುಖಂಡರಾದ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಿತ್ತಾಟಕ್ಕೆ ಬ್ರೇಕ್ ಹಾಕಲು ವೇಣುಗೋಪಾಲ್ ಮಾತುಕತೆ ನಡೆಸಿದರು. 

ವೇಣುಗೋಪಾಲ್‌ಗೆ ಬೆಳಗಾವಿ ಜಿಲ್ಲಾ ಮುಖಂಡರ ಜಗಳ ಕಗ್ಗಂಟಾಗಿದ್ದು, ಈ ಜಗಳವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಿದ ಅವರು, ರಮೇಶ್ ಜಾರಕಿಹೊಳಿ ನಿಮ್ಮ‌ ಜೊತೆ ಚೆನ್ನಾಗಿದ್ದಾರೆ. ನಿಮ್ಮ ಮಾತನ್ನು ಕೇಳುತ್ತಾರೆ. ನೀವೇ ಸಮಸ್ಯೆಯನ್ನು ಬಗೆಹರಿಸಬೇಕು. ಜಾರಕಿಹೊಳಿ ಸಹೋದರರನ್ನು ಕರೆದು ಮಾತನಾಡಿ. ಆದಷ್ಟು ಬೇಗ ಈ ತಿಕ್ಕಾಟ ಕೊನೆಗಾಣಿಸಿ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !