ಹಗರಣ ಮುಚ್ಚಿಹಾಕಲು ನಿರ್ಮಲಾ ಯತ್ನ: ರಾಹುಲ್‌ ಗಾಂಧಿ ಆರೋಪ

6
ಭ್ರಷ್ಟಾಚಾರಕ್ಕಾಗಿ ಎಚ್‌ಎಎಲ್‌ ಸರ್ವನಾಶ

ಹಗರಣ ಮುಚ್ಚಿಹಾಕಲು ನಿರ್ಮಲಾ ಯತ್ನ: ರಾಹುಲ್‌ ಗಾಂಧಿ ಆರೋಪ

Published:
Updated:

ಬೆಂಗಳೂರು: ‘ರಫೇಲ್‌ ಖರೀದಿ ಒಪ್ಪಂದದ ಹಗರಣವನ್ನು ಮುಚ್ಚಿ ಹಾಕಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫ್ರಾನ್ಸ್‌ಗೆ ತರಾತುರಿಯಲ್ಲಿ ಭೇಟಿ ನೀಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮತ್ತೊಂದು ಆಯಾಮವನ್ನು ನೀಡಿದರು.

‘ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌’ನ (ಎಚ್‌ಎಎಲ್‌) ಕಾರ್ಪೊರೇಟ್‌ ಕಚೇರಿ ಎದುರೇ ಸಂಸ್ಥೆಯ ಕೊಡುಗೆಗಳ ಬಗ್ಗೆ ನೌಕರರು ಹಾಗೂ ನಿವೃತ್ತ ನೌಕರರ ಜತೆಗೆ ರಾಹುಲ್‌ ಶನಿವಾರ ಸಂವಾದ ನಡೆಸಿದರು. ಎಚ್ಎಎಲ್ ಆಡಳಿತ ಮಂಡಳಿಯ ನಿರ್ಬಂಧದ ಮಧ್ಯೆಯೂ ನೌಕರರು ಸಮವಸ್ತ್ರದಲ್ಲೇ ಭಾಗವಹಿಸಿದರು.

‘ಎಚ್‌ಎಎಲ್‌, ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯಂತಹ ಸಾರ್ವಜನಿಕ ಉದ್ಯಮಗಳನ್ನು ನಾಶಪಡಿಸಲು ಸರ್ಕಾರ ಯತ್ನಿಸುತ್ತಿದೆ. ಇವುಗಳ ಉಳಿವಿಗಾಗಿ 24x7 ಹೋರಾಟ ನಡೆಸುತ್ತೇನೆ. ರಫೇಲ್‌ ಖರೀದಿ ಹಗರಣದ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇನೆ’ ಎಂದೂ ರಾಹುಲ್‌ ಘೋಷಿಸಿದರು.

ಸಂವಾದದ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ‘ರಕ್ಷಣಾ ಸಚಿವರು ಫ್ರಾನ್ಸ್‌ಗೆ ತೆರಳಿ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಭಾರತದ ಬೀದಿಗಳಲ್ಲಿ ಹೋರಾಟ ನಡೆಸಲಿದ್ದೇವೆ’ ಎಂದರು.

‘ಭ್ರಷ್ಟಾಚಾರಕ್ಕೆ ಮಣೆ ಹಾಕುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಅನಿಲ್‌ ಅಂಬಾನಿ ಅವರನ್ನು ಆಯ್ಕೆ ಮಾಡಿಕೊಂಡರು. ಈಗ ಡಾಸೊಗೆ ಸಂಬಂಧಿಸಿದ ದಾಖಲೆಗಳು ಹೊರಬಂದಿವೆ. ಹಗರಣ ಹೇಗೆ ನಡೆಯಿತು ಎಂಬ ಬಗ್ಗೆ ಇವು ಬೆಳಕು ಚೆಲ್ಲಿವೆ’ ಎಂದು ಅವರು ಹೇಳಿದರು.

ಸಂವಾದದಲ್ಲಿ ಮಾತನಾಡಿದ ರಾಹುಲ್‌, ‘ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಆಧುನಿಕ ಭಾರತದ ದೇವಸ್ಥಾನಗಳು ಇದ್ದಂತೆ. ಇವುಗಳ ಮೇಲೆ ದಾಳಿ ನಡೆಸಿ ನಾಶ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಡೆಸುವ ಕಾರಣಕ್ಕೇ ಎಚ್‌ಎಎಲ್‌ ಸಂಸ್ಥೆ
ಯನ್ನು ಸರ್ವನಾಶ ಮಾಡಲಾಗುತ್ತಿದೆ’ ಎಂದು  ಕಿಡಿಕಾರಿದರು. ‘ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಈ ಸಂಸ್ಥೆಗಳಿಗೆ ಇನ್ನಷ್ಟು ಬಲ ತುಂಬಲಿದೆ’ ಎಂದು ಅವರು ವಾಗ್ದಾನ ನೀಡಿದರು.

ವಿಮಾನ ನಿರ್ಮಾಣದಲ್ಲಿ ಅನಿಲ್ ಅಂಬಾನಿ ಅವರಿಗೆ ಯಾವುದೇ ಅನುಭವ ಇಲ್ಲ. ಅವರದ್ದು 12 ದಿನಗಳಷ್ಟು ಹಳೆಯ ಕಂಪನಿ. ಆದರೆ, ಎಚ್‌ಎಎಲ್‌ಗೆ 78 ವರ್ಷಗಳ ಅನುಭವ ಇದೆ. ಈ ಸಂಸ್ಥೆ ನಮ್ಮ ಇತಿಹಾಸದ ಭಾಗ’ ಎಂದೂ ಅವರು ವ್ಯಾಖ್ಯಾನಿಸಿದರು.

ಮಾಧ್ಯಮಗಳು ನನ್ನ ಮಾತು ಕೇಳುತ್ತಿಲ್ಲ’

‘ರಾಹುಲ್‌ ಗಾಂಧಿ ಜತೆಗೆ ನೀವೇಕೆ ಸಂವಾದ ಇಟ್ಟುಕೊಂಡಿದ್ದೀರಿ’ ಎಂದು ಹಲವರು ನನ್ನಲ್ಲಿ ಪ್ರಶ್ನಿಸಿದರು. ನಾವು ಪ್ರತಿಭಟನೆ ನಡೆಸಿದರೆ ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲ. ಹಾಗಾಗಿ, ರಾಹುಲ್ ಅವರನ್ನು ಕರೆದಿದ್ದೇವೆ’ ಎಂದು ಎಚ್‌ಎಎಲ್‌ನ ನಿವೃತ್ತ ನೌಕರ ಅನಂತಪದ್ಮನಾಭ ಹೇಳಿದರು.

ಇದನ್ನು ಭಾಷಣದಲ್ಲಿ ಉಲ್ಲೇಖಿಸಿದ ರಾಹುಲ್‌, ‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನಮ್ಮ ಮಾತನ್ನು ಕೇಳುತ್ತಿಲ್ಲ. ಇಲ್ಲಿರುವವರು ನನ್ನ ಮಾತು ಕೇಳುತ್ತಾರೆ. ಆದರೆ, ಅವರ ಬಾಸ್‌ಗಳ ನಿಲುವು ಬೇರೆ ಇದೆ’ ಎಂದರು.

ರಾಹುಲ್‌ಗೆ ಬಿಜೆಪಿ ನಾಲ್ಕು ಪ್ರಶ್ನೆ

ಎಚ್‌ಎಎಲ್ ನೌಕರರ ಜತೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ರಾಜ್ಯ ಘಟಕ ನಾಲ್ಕು ಪ್ರಶ್ನೆಗಳನ್ನು ಕೇಳಿದೆ.

* ಭಾರತೀಯ ವಾಯುಸೇನೆಗಾಗಿ 126 ಎಂಎಂಆರ್‌ಸಿಎ ವಿಮಾನಗಳನ್ನು ಖರೀದಿಸುವುದಕ್ಕಾಗಿ ಡಸಾಲ್ಟ್‌ ಏವಿಯೇಷನನ್ನು ಯುಪಿಎ ಸರ್ಕಾರ L1 ಎಂದು 2012ರಲ್ಲಿ ಘೋಷಿಸಿತ್ತು. ಆದರೆ, 2014ರವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ರಾಷ್ಟ್ರದ ಸುರಕ್ಷತೆಯೊಂದಿಗೆ ನೀವು ಮಾಡಿಕೊಂಡ ರಾಜಿಯಲ್ಲವೇ ಅದು?

* 2012ರಿಂದ 2014ರ ವರೆಗೆ ಡಸಾಲ್ಟ್‌ ಹಾಗೂ ಎಚ್‌ಎಎಲ್‌ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಕಾಂಗ್ರೆಸ್‌ ಪ್ರಯತ್ನಿಸಲಿಲ್ಲ. ಇದು ನೀವು ಎಚ್‌ಎಎಲ್‌ಗೆ ಮಾಡಿದ ದ್ರೋಹವಲ್ಲವೇ?

*126 ಎಂಎಂಆರ್‌ಸಿಎಗಳ ಖರೀದಿಗೆ 2007ರಲ್ಲಿ ಯುಪಿಎ ಸರ್ಕಾರ ಸಿದ್ಧತೆ ನಡೆಸಿತ್ತು. ಆದರೆ, 2014ರ ವರೆಗೆ ರಫೇಲ್‌ ಒಪ್ಪಂದವನ್ನು ಅಂತಿಮಗೊಳಿಸಲಿಲ್ಲ. ಭಾರತದೊಂದಿಗೆ ವ್ಯವಹಾರ ಕಷ್ಟ ಎಂಬ ಭಾವನೆಯನ್ನು ಕಾಂಗ್ರೆಸ್‌ ಮೂಡಿಸಿತು. ಈ ದುರಭಿಪ್ರಾಯವನ್ನು ಮೂಡಿಸಿದ್ದು ಯಾಕೆ?

* 2007ರ ಒಪ್ಪಂದದ ಪ್ರಕಾರ ವಿಮಾನ ದರ ₹737 ಕೋಟಿ ಇತ್ತು. ಅದೇ ವಿಮಾನವನ್ನು 2015ರಲ್ಲಿ ₹670 ಕೋಟಿಗೆ ಖರೀದಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಎಲ್ಲ ಸತ್ಯಗಳನ್ನು ಮುಚ್ಚಿಟ್ಟು ದೇಶದ ಜನರನ್ನು ದಾರಿ ತಪ್ಪಿಸುತ್ತಿರುವುದು ಏಕೆ?

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !