ಸೋಮವಾರ, ಏಪ್ರಿಲ್ 12, 2021
26 °C

ಕೆನಡಾದ ರಸ್ತೆಯಲ್ಲಿ ‘ರಾಯಚೂರು’ ಫಲಕದ ಕಾರು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಚಿಕ್ಕವನಿದ್ದಾಗ ಬೆಳೆದಿರುವ ಊರಿನ ನೆನಪು ಸದಾ ಜೊತೆಯಲ್ಲಿರಲಿ ಎನ್ನುವ ಹಂಬಲ ಇಟ್ಟುಕೊಂಡಿರುವ ರಾಯಚೂರಿನ ಮಡ್ಡಿಪೇಟೆ ಬಡಾವಣೆಯ ಅಶೋಕ ಅಯ್ಯಾಳಪ್ಪ ಅವರು, ಕೆನಡಾದಲ್ಲಿ ತಮ್ಮ ಕಾರಿಗೆ ‘ರಾಯಚೂರು’ ಹೆಸರಿನಲ್ಲಿ ನೋಂದಣಿ ಮಾಡಿದ ಫಲಕ ಅಳವಡಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ.

ಫೋರ್ಡ್‌ ಕಂಪೆನಿಯ ಒಂಟಾರಿಯೊ ಕಾರಿನೊಂದಿಗೆ ನಿಂತಿರುವ ಛಾಯಾಚಿತ್ರವೊಂದನ್ನು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಕಾರಿನ ಫಲಕವು ಈಗ ಸಾರ್ವಜನಿಕರ ಗಮನ ಸೆಳೆದಿದ್ದು, ಪ್ರಶಂಸೆಗಳು ಹರಿದು ಬರುತ್ತಿವೆ ಹಾಗೂ ಈ ರೀತಿ ನೋಂದಣಿ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗಳನ್ನು ಅವರಿಗೆ ಕೇಳುತ್ತಿದ್ದಾರೆ.

‘ರಾಯಚೂರು ನಮ್ಮೂರು ಎನ್ನುವ ಗಾಢ ಪ್ರೀತಿ ಇರುವ ಕಾರಣದಿಂದ ಕಾರಿನ ಫಲಕಕ್ಕೆ ನೋಂದಣಿ ಮಾಡಿಸಿಕೊಳ್ಳಲು ಇವರೆಗೂ ತೊಂದರೆ ಆಗಿಲ್ಲ. ಈ ಫಲಕವು ಪ್ರತಿದಿನವೂ ನಾನು ಬೆಳೆದು ಬಂದ ಊರನ್ನು ಸ್ಮರಿಸುವಂತೆ ಮಾಡುತ್ತಿದೆ’ ಎನ್ನುವುದು ಅವರ ಮಾತು.

ರಾಯಚೂರಿನ ಟ್ಯಾಗೋರ್‌ ಮೆಮೊರಿಯಲ್‌ ಪ್ರಾಥಮಿಕ ಶಾಲೆ, ಟ್ಯಾಗೋರ್‌ ಮೆಮೊರಿಯಲ್‌ ಪ್ರೌಢಶಾಲೆ ಹಾಗೂ ಎಎಂಇಎಸ್‌ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಓದಿರುವ ಅಶೋಕ ಅವರು ಬೆಳಗಾವಿಯ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್‌ ಡಿಸೈನರ್‌ ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದಾರೆ.

ಆರಂಭದಲ್ಲಿ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು, ಆನಂತರ ಯುಎಸ್‌ಎ, ಜಪಾನ್‌ ದೇಶಗಳಲ್ಲಿದ್ದರು. ಇದೀಗ ಉತ್ತರ ಅಮೆರಿಕದ ಕೆನಡಾದಲ್ಲಿ ಎಲೆಕ್ಟ್ರಾನಿಕ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಅಮೆರಿಕ  ದೇಶಗಳಲ್ಲಿ ಮಾತ್ರ ಕಾರಿನ ಮಾಲೀಕರು ತಮಗೆ ಇಷ್ಟವಾದ ಫಲಕ ಅಳವಡಿಸಿಕೊಳ್ಳಲು ವಿಶೇಷ ಅನುಮತಿ ನೀಡಲಾಗುತ್ತಿದೆ. ಈ ಸದವಕಾಶವನ್ನು ಅಶೋಕ ಬಳಸಿಕೊಂಡಿದ್ದಾರೆ.

ಕೆನಡಾದಲ್ಲಿ ಪತ್ನಿ ಹಾಗೂ ಒಂದು ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ಕೆನಡಾದ ಹವಾಮಾನ ಕೆಲವು ಸಲ ಮೈನಸ್‌ 38 ವರೆಗೂ ಇಳಿಕೆಯಾಗುತ್ತದೆ. ಕೆಲವೊಮ್ಮೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುತ್ತದೆ. ಇಂತಹ ಕಠಿಣ ಹವಾಮಾನ ಪರಿಸ್ಥಿತಿ ಎದುರಿಸುವುದಕ್ಕೆ ರಾಯಚೂರಿನಲ್ಲಿ ಕಳೆದ ಜೀವನ  ಮತ್ತು ತಂದೆ ದೊಡ್ಡ ಅಯ್ಯಾಳಪ್ಪ ಅವರು ಬಾಲ್ಯದಲ್ಲಿ ನೀಡಿದ ಸ್ಫೂರ್ತಿಯೇ ಕಾರಣ ಎನ್ನುವುದು ಅಶೋಕ ಅವರ ಅಂತರಾಳದ ಮಾತು.

1997ರಲ್ಲಿ ತಂದೆ ದೊಡ್ಡ ಅಯ್ಯಾಳಪ್ಪ ಅವರು ರಾಯಚೂರು ನಗರಸಭೆ ಉಪಾದ್ಯಕ್ಷರಾಗಿದ್ದರು. ‘ನನ್ನ ಎಲ್ಲ ಬೆಳವಣಿಗೆಗೂ ತಂದೆಯು ನೀಡಿದ ಸ್ಫೂರ್ತಿಯೇ ಕಾರಣ. ಉತ್ತಮ ನಿರ್ಧಾರ ತೆಗೆದುಕೊಳ್ಳುವ ಬಗೆಗೆ ಹೇಳಿಕೊಟ್ಟಿದ್ದಾರೆ. ಕನಸುಗಳನ್ನು ಬಲವಾಗಿ ನಂಬುವುದು ಮತ್ತು ಅವುಗಳನ್ನು ನನಸಾಗಿಸುವ ಬಗ್ಗೆ ತಂದೆಯೇ ಕಲಿಸಿದ್ದಾರೆ. ಜನರಿಗೆ ಸಹಾಯ ಮಾಡುವ ಬೆಳೆಸಿಕೊಂಡಿದ್ದೇನೆ. ಇದಕ್ಕೆಲ್ಲ ತಂದೆಯೇ ಸ್ಫೂರ್ತಿ’ ಎನ್ನುತ್ತಾರೆ ಅಶೋಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು