ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಧಾರಾಕಾರ ಮಳೆ: ಕುರುಗೋಡಿನಲ್ಲಿ ವಿದ್ಯುತ್ ವಿತರಣಾ ಕೇಂದ್ರ ಜಲಾವೃತ

ಮನೆ ಕುಸಿದು ವೃದ್ಧ, ಯುವತಿ ಸಾವು
Last Updated 24 ಸೆಪ್ಟೆಂಬರ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಚಿತ್ರದುರ್ಗ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ.‌

ಬಳ್ಳಾರಿ, ವಿಜಯಪುರ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಬೆಳಗಿನ ಜಾವ ಭಾರಿ ಮಳೆ ಸುರಿದಿದೆ.

ಬಳ್ಳಾರಿ ಜಿಲ್ಲೆಯ ಹನುಮನಹಳ್ಳಿಯಲ್ಲಿ ಮನೆ ಕುಸಿದು ವೃದ್ಧರೊಬ್ಬರು,ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮನೆಯ ಮಾಳಿಗೆ ಕುಸಿದು ಸಂಗೀತಾ ಜಗಪ್ಪ ಕತ್ತಿ (19) ಎಂಬ ಯುವತಿ ಮೃತಪಟ್ಟಿದ್ದಾರೆ. ಸಿರುಗುಪ್ಪದಲ್ಲಿಯೂ ಮನೆಗಳು ಕುಸಿದಿದ್ದು ಚಾವಣಿ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

ಚಿತ್ರದುರ್ಗ ನಗರ ಹಾಗೂ ತಾಲ್ಲೂಕಿನ ವಿವಿಧೆಡೆಯೂ ಉತ್ತಮ ಮಳೆಯಾಯಿತು. ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು,ಮೊಳಕಾಲ್ಮೂರು ತಾಲ್ಲೂಕಿನ ಕೆಲವೆಡೆ ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೂ ಹದಮಳೆ ಸುರಿದಿದೆ.

ದಾವಣಗೆರೆ ನಗರದಲ್ಲಿ ಸೋಮವಾರ ತಡರಾತ್ರಿಯಿಂದ ಬೆಳಿಗ್ಗೆ 9ರ ವರೆಗೂ ಜಿಟಿಜಿಟಿ ಮಳೆಯಾಗುತ್ತಿತ್ತು. ಶಿವಮೊಗ್ಗ ನಗರ ಹಾಗೂ ತೀರ್ಥಹಳ್ಳಿಯ ಕೆಲವೆಡೆ ಮಂಗಳವಾರ ತುಂತುರು ಮಳೆಯಾಗಿದೆ.

ಮಂಡ್ಯ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಲಹಳ್ಳಿ ಕೊಳೆಗೇರಿಯ ಮನೆಗಳಿಗೆ ನೀರು ನುಗ್ಗಿದೆ. ಕನ್ನಲಿ, ಹೊಸ ಬೂದನೂರು ಗ್ರಾಮಗಳ ಕೆರೆಗಳು ಕೋಡಿ ಬಿದ್ದಿದ್ದು, 140 ಎಕರೆ ಜಮೀನಿಗೆ ನೀರು ನುಗ್ಗಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಕೆ.ಆರ್‌.ಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಹಾಸನದಲ್ಲಿ ಮಂಗಳವಾರ ಬೆಳಗಿನ ಜಾವದವರೆಗೂ ಸುರಿಯಿತು. ಚನ್ನರಾಯಪಟ್ಟಣ ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಮಂಗಳವಾರ ಬೆಳಿಗ್ಗೆ 8.30ರ ಸಮಯದಲ್ಲಿ ಕುಸಿದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾರೂ ಇರದ ಕಾರಣ ಅನಾಹುತ ತಪ್ಪಿದೆ. ಅರಸೀಕೆರೆ ತಾಲ್ಲೂಕಿನ ಹಳೇಕಲ್ಲನಾಯಕನಹಳ್ಳಿಯ ಹಾಗೂ ಮುರುಂಡಿ ಗ್ರಾಮದ ಬಣಜಾರ ತಾಂಡಾದಲ್ಲಿ ಒಂದೊಂದು ಮನೆ ಕುಸಿದಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರಿಯಿಡೀ ಭರ್ಜರಿ ಮಳೆಯಾಗಿದೆ.

ಹುಬ್ಬಳ್ಳಿಯ ಕಮರಿಪೇಟೆಯಲ್ಲಿದ್ದ 80 ವರ್ಷಗಳಷ್ಟು ಹಳೆಯ ಮಣ್ಣಿನ ಮನೆ ಮಂಗಳವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಆ ಹೊತ್ತಿನಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಬೆಳಗಾವಿ ನಗರ, ಖಾನಾಪುರ ಹಾಗೂ ಘಟಪ್ರಭದಲ್ಲಿಯೂ ಸಾಧಾರಣ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆ ಕುರುಗೋಡು ತಾಲ್ಲೂಕಿನ ಹಳ್ಳಗಳು ತುಂಬಿ ಹರಿದು ಶಾಲೆಗೆ ನುಗ್ಗಿದ ಕಾರಣ ಶಾಲೆಗೆ ರಜೆ ಘೋಷಿಸಲಾಯಿತು.

ಗದಗ– ಬೆಟಗೇರಿಗಳಲ್ಲಿ ಮಳೆಯ ಆರ್ಭಟದಿಂದಾಗಿ ಮನೆಗಳಿಗೆ ನೀರು ನುಗ್ಗಿತು. ನರಗುಂದ ತಾಲ್ಲೂಕಿನ ಕೊಣ್ಣೂರು ಮತ್ತು ವಾಸನದಲ್ಲಿ ಸಂತ್ರಸ್ತರಿಗೆಂದು ನಿರ್ಮಿಸಲಾಗಿದ್ದ ಟಿನ್‌ಶೆಡ್‌ಗಳಲ್ಲಿ ಮಳೆ ನೀರು ನುಗ್ಗಿದೆ.

ವಿಜಯಪುರ ನಗರ ಸೇರಿದಂತೆ ಜಿಲ್ಲೆಯಸಿಂದಗಿ, ತಾಳಿಕೋಟೆ, ಬಸವನಬಾಗೇವಾಡಿ, ಇಂಡಿ ಪಟ್ಟಣ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಕಲಬುರ್ಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಯ ಹಲವೆಡೆ ಮಂಗಳವಾರವೂ ಮಳೆ ಸುರಿಯಿತು.ಜೇವರ್ಗಿ ಪಟ್ಟಣದಲ್ಲಿ 52.6 ಮಿಲಿ ಮೀಟರ್‌ ಮಳೆ ಸುರಿದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು, ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು.

ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ತುಮಕೂರು ನಗರದಲ್ಲಿ ಸೋಮವಾರ ಸುರಿದ ಬಿರುಸಿನ ಮಳೆ ಮಂಗಳವಾರ ಬೆಳಗಿನ ಜಾವವೂ ಮುಂದುವರಿಯಿತು. ಕೆರೆಗಳಿಗೆ ನೀರು ಬಂದಿದೆ. ತೋಟಗಳು, ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ.

3 ಜಿಲ್ಲೆಗಳಲ್ಲಿ ‘ಆರೆಂಜ್‌ ಅಲರ್ಟ್‌’
ಬೆಂಗಳೂರು:‌ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ವೇಗವಾಗಿ ಬೀಸುತ್ತಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 25 ಮತ್ತು 26ರಂದು ಹೆಚ್ಚು ಮಳೆಯಾಗಲಿದೆ. ಹೀಗಾಗಿ ‌ಈ ಭಾಗದಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಮನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಕರಾವಳಿ ಭಾಗವನ್ನು ಹೊರತುಪಡಿಸಿ ಬುಧವಾರ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಈ ಭಾಗದಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ತಿಳಿಸಿದೆ.

ಮಂಗಳವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ 14 ಸೆಂ.ಮೀ.ಮಳೆಯಾಗಿದೆ. ಮಧುಗಿರಿ 12, ಬೆಂಗಳೂರು 11, ಮಳವಳ್ಳಿ 10, ಚಾಮರಾಜನಗರ 9, ಚನ್ನಪಟ್ಟಣ 8, ಕಂಪ್ಲಿ, ಮಂಡ್ಯ, ಹೆಸರಘಟ್ಟ, ಚಿಂಚೋಳಿ 7, ನೆಲಮಂಗಲ 6, ಸುಬ್ರಹ್ಮಣ್ಯ, ಕಲಬುರ್ಗಿ, ವಿಜಯಪುರದಲ್ಲಿ ತಲಾ 5 ಸೆಂ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT