ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿಲು

ಬುಧವಾರ, ಮೇ 22, 2019
24 °C

ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿಲು

Published:
Updated:

ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳು ಬೇಸಿಗೆ ಬಿಸಿಲ ಧಗೆಯಿಂದ ಕಂಗೆಟ್ಟಿದ್ದರೆ, ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಧರೆ ತಂಪಾಗಿದೆ. ಮುಂದಿನ ಎರಡು ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.

ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದರೆ, ಬಳ್ಳಾರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ನಿಂದ 40 ಡಿಗ್ರಿ ಸೆಲ್ಸಿಯಸ್‌ ಅಸುಪಾಸಿನಲ್ಲಿದೆ.

ದಕ್ಷಿಣ ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳು ಈಗಾಗಲೇ ಉಷ್ಣಾಂಶದ ಏರಿಕೆಯಿಂದ ತತ್ತರಿಸಿದೆ. ಇದರ ಜತೆಗೆ ಉತ್ತರ ಭಾರತದ ಬಿಸಿಗಾಳಿಯ (ಹೀಟ್‌ ವೇವ್‌) ಪರಿಣಾಮವೂ ತಟ್ಟಿದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹಾದು ಹೋದ ಬಳಿಕ ಉತ್ತರ ಭಾರತದಿಂದ ರಾಜ್ಯದ ಕಡೆ ಬಿಸಿ ಗಾಳಿ ಬೀಸಲಾರಂಭಿಸಿದೆ. ಇದರಿಂದ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಉಷ್ಣಾಂಶ ಏರಿಕೆಯಾಗಿದೆ.

ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮೂಲಕ ಬಿಸಿ ಮಾರುತ ಹಾದು ಹೋಗುತ್ತಿರುವುದರಿಂದ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಕನಿಷ್ಠ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ದಿನದ ಗರಿಷ್ಠ ಉಷ್ಣಾಂಶ 43 ರಿಂದ 44 ಡಿಗ್ರಿ ಸೆಲ್ಸಿಯಸ್‌ ಇದೆ. ಇದು ವಾಡಿಕೆಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಅಧಿಕ ಎಂದರು.

ತೇವಾಂಶ ಆಪೋಶನ ತೆಗೆದುಕೊಂಡ ಚಂಡಮಾರುತ: ಬಂಗಾಳ ಕೊಲ್ಲಿಯಲ್ಲಿ ಬೀಸಿದ ಚಂಡಮಾರುತ ತೇವಾಂಶವನ್ನು ಸಂಪೂರ್ಣವಾಗಿ ಹೀರಿ ಹಾಕಿದೆ. ಇದರಿಂದಾಗಿ, ವಾತಾವರಣದಲ್ಲಿ ತೇವಾಂಶ ಇಲ್ಲದೆ, ಉತ್ತರ ಒಳನಾಡಿನಲ್ಲಿ ಬಿಸಿಲು ಮತ್ತು ಧಗೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ ಒತ್ತಡದಿಂದಾಗಿ ಕೆಲವು ಕಡೆಗಳಲ್ಲಿ ಮೋಡಗಳು ಸೃಷ್ಟಿಯಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ ಎಂದು ಅವರು ಹೇಳಿದರು.

ದಕ್ಷಿಣ ಒಳನಾಡಿನಲ್ಲಿ ಹಗಲಿನಲ್ಲಿ ಬಿರು ಬಿಸಿಲು ಇದ್ದರೂ ಸಂಜೆಯಾಗುತ್ತಿದ್ದಂತೆ ಮೋಡ ಆವರಿಸುತ್ತದೆ. ವಾತಾವರಣದಲ್ಲಿ ತೇವಾಂಶದ ಕೊರತೆ ಮತ್ತು ಬಿಸಿಲಿನ ತಾಪದಿಂದ ಉಷ್ಣಾಂಶ ಏರಿಕೆ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.

ಹವಾಮಾನ ಇಲಾಖೆ ಮುನ್ಸೂಚನೆ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಐದು ದಿನಗಳ ಕಾಲ ತೆಲಂಗಾಣ, ಛತ್ತೀಸಘಡ, ತಮಿಳುನಾಡು, ಪುದುಚೇರಿ, ಹಿಮಾಚಲ ಪ್ರದೇಶ, ಸೌರಾಷ್ಟ್ರ, ಕಛ್, ಕೊಂಕಣ್‌– ಗೋವಾ, ಕರಾವಳಿ ಕರ್ನಾಟಕ, ವಿದರ್ಭ, ಕೇರಳಕ್ಕೂ ಬಿಸಿಗಾಳಿ ತಾಪ ತಟ್ಟಲಿದೆ.

ರಾಯಚೂರಿನಲ್ಲಿ ದಾಖಲೆ ಬಿಸಿಲು
ರಾಯಚೂರು: ಜಿಲ್ಲೆಯಲ್ಲಿ ಬುಧವಾರ 43.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಪ್ರಸಕ್ತ ವರ್ಷ ದಾಖಲಾದ ಅತಿ ಹೆಚ್ಚು ಉಷ್ಣಾಂಶ ಇದಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಗರಿಷ್ಠ 42.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲು ಹೆಚ್ಚಾಗಿದೆ. ಸುಡು ಬಿಸಿಲಿನಿಂದ ಜನರು ಹೊರಗಡೆ ಸಂಚರಿಸುವುದು ಕಷ್ಟವಾಗಿದೆ.

ಅಧಿಕ ತಾಪಮಾನಕ್ಕೆ ಕಾರಣಗಳೇನು?
ಉತ್ತರ ಕರ್ನಾಟಕ ಪ್ರದೇಶದ ಹಲವು ಜಿಲ್ಲೆಗಳ ಭೌಗೋಳಿಕ ಸ್ಥಿತಿಯೇ ಹೆಚ್ಚು ತಾಪಮಾನಕ್ಕೆ ಕಾರಣ. ಇಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ ಎಂದು ಹವಾಮಾನ ತಜ್ಞ ಡಾ.ಎಂ.ಬಿ ರಾಜೇಗೌಡ ತಿಳಿಸಿದರು.

ಬೆಂಗಳೂರಿನಂತಹ ನಗರದಲ್ಲಿ ತಾಪಮಾನ ಹೆಚ್ಚಲು ಮತ್ತು ಗುಡುಗು– ಸಿಡಿಲಿನಿಂದ ಕೂಡಿದ ಮಳೆ ಬೀಳಲು ಆಗಸದಲ್ಲಿ ಭಾರೀ ಪ್ರಮಾಣದಲ್ಲಿ ಧೂಳಿನ ಕಣಗಳು ಮತ್ತು ವಾಹನಗಳ ಹೊಗೆ ವ್ಯಾಪಿಸಿರುವುದೇ ಮುಖ್ಯ ಕಾರಣ. ತೇವಾಂಶ ಧೂಳಿನ ಮೇಲೆ ಸಾಂದ್ರೀಕರಣಗೊಂಡಾಗ ಧಗೆ ಹೆಚ್ಚಾಗುತ್ತದೆ. ಮಳೆಗೂ ಕಾರಣವಾಗುತ್ತದೆ ಎಂದು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !