ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ–ಮಳೆ ಆರ್ಭಟ: 150ಕ್ಕೂ ಹೆಚ್ಚು ಮನೆಗಳಿಗೆ ಹಾನಿ

Last Updated 1 ಮೇ 2020, 13:34 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ತತ್ವಣಗಿ ಹಾಗೂ ಹೊಸೂರ ಗ್ರಾಮದಲ್ಲಿ ಗುರುವಾರ ರಾತ್ರಿ ಗಾಳಿ–ಮಳೆಯ ಆರ್ಭಟಕ್ಕೆ 150ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ, ಅಪಾರ ಹಾನಿಯಾಗಿದೆ.

ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ತತ್ವಣಗಿಯ ವಂದನಾ ಬೆನಿತ್ ದೊಡ್ಡಮನಿ, ಹೊಸೂರಿನ ಮಂಜುಳಾ ಗುರು ಪಾಗೋಜಿ ಅವರ ಮನೆಯ ಮನೆಯ ಚಾವಣಿಗಳು ಸಂಪೂರ್ಣ ಹಾರಿಹೋಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ತೋಯ್ದು ಹೋಗಿವೆ. ‘ಲಾಕ್‌ಡೌನ್ ಇರುವ ಕಾರಣ ಕೂಲಿ ಕೆಲಸವೂ ಇಲ್ಲ. ಸರ್ಕಾರ ನೀಡಿದ್ದ ಪಡಿತರ, ಸಂಘ–ಸಂಸ್ಥೆಗಳು ಕೊಟ್ಟಿದ್ದ ದಿನಸಿ ಸಾಮಗ್ರಿಗಳೇ ಆಧಾರವಾಗಿದ್ದವು. ಇವೆಲ್ಲವೂ ಮಳೆ ನೀರಿಗೆ ಸಿಲುಕಿ, ಹಾಳಾಗಿವೆ. ಮನೆ ದುರಸ್ತಿಗೂ ಕೈಯಲ್ಲಿ ಹಣವಿಲ್ಲ’ ಎಂದು ವಂದನಾ ಹೇಳುವಾಗ ಅವರ ಕಣ್ಣು ತೇವವಾಗಿತ್ತು.

‘ಗಾಳಿಯ ಅಬ್ಬರಕ್ಕೆ ನೋಡುನೋಡುತ್ತಿದ್ದಂತೆ ಎದುರಿನ ಮನೆಯ ಮೇಲೆ ಮರಗಳು ಮುರಿದು ಬಿದ್ದವು, ಇನ್ನು ಕೆಲವು ಮನೆಗಳ ಚಾವಣಿ ಹಾರಿದವು. ದಿಕ್ಕು ತೋಚದೆ, ಮನೆಯ ಮೂಲೆಯಲ್ಲಿ ಇಬ್ಬರು ಮೊಮ್ಮಕ್ಕಳನ್ನು ಹಿಡಿದು ಕುಳಿತುಕೊಂಡೆ. ನಮ್ಮ ಮನೆಯ ಹೆಂಚು ಕೂಡ ಹಾರಿ, ಮನೆಯ ತುಂಬ ಮಳೆ ನೀರು ಸೇರಿತು. ಇಂತಹ ಭೀಕರ ಗಾಳಿ–ಮಳೆಯನ್ನು ಜೀವನದಲ್ಲಿ ನೋಡಿರಲಿಲ್ಲ’ ಎನ್ನುತ್ತ ವೃದ್ಧೆ ಶಾರದಾ ಘಟಗೋಳಕರ ಗದ್ಗದಿತರಾದರು. ಕೆಸರೊಳ್ಳಿ, ಬಿ.ಕೆ.ಹಳ್ಳಿ ಗ್ರಾಮಗಳಲ್ಲೂ ಮನೆಗಳಿಗೆ ಹಾನಿಯಾಗಿದೆ.

ಅಧಿಕಾರಿಗಳ ಭೇಟಿ: ಕಂದಾಯ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಸಮೀಕ್ಷೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT