ಮಂಗಳವಾರ, ಮಾರ್ಚ್ 2, 2021
26 °C
ನಿವಾಸಿಗಳಿಗೆ ಕಾಡುತ್ತಿದೆ ‘ಜಲಸ್ಫೋಟ’ದ ದುಃಸ್ವಪ್ನ

ಕೊಡಗು ಮರುನಿರ್ಮಾಣ: ಹೊಸ ಬದುಕಿನ ಹುಡುಕಾಟದಲ್ಲಿ ಹೆಬ್ಬಟ್ಟಗೇರಿ ಜನರು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ಪ್ರವಾಸಿಗರ ವಾಹನ ಹಾಗೂ ಬಾಡಿಗೆಯ ಜೀಪುಗಳ ಸಂಚಾರದಿಂದ ಗಿಜಿಗುಡುತ್ತಿದ್ದ ಆ ರಸ್ತೆಯಲ್ಲೀಗ ನೀರವ ಮೌನ. ಸುತ್ತಲೂ ಹಸಿರಾಗಿದ್ದ ಬೆಟ್ಟಗಳು ಕೆಂಬಣ್ಣಕ್ಕೆ ತಿರುಗಿದ್ದು ಅದರ ನಡುವೆ ಹೊಸ ಬದುಕು ಕಟ್ಟಿಕೊಳ್ಳುವತ್ತ ಜನರು ಮಗ್ನರಾಗಿದ್ದಾರೆ. ಹೆದರಿ ಊರು ತೊರೆದಿದ್ದ ಜನರು, ಸೂರ್ಯನ ದರ್ಶನದ ಬಳಿಕ ಗ್ರಾಮಕ್ಕೆ ಮರಳಿದ್ದು ಮಣ್ಣಿನಲ್ಲಿ ಹೂತು ಹೋಗಿರುವ ಬೆಲೆ ಬಾಳುವ ಸಾಮಗ್ರಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪ್ರಸಿದ್ಧ ‍ಪ್ರವಾಸಿ ತಾಣ ಮಾಂದಲ್‌ಪಟ್ಟಿಯ ಮಾರ್ಗದ ಕಾಫಿ ತೋಟ, ಬೆಟ್ಟದ ಸಾಲಿನಲ್ಲಿ ಹೆಬ್ಬಟ್ಟಗೇರಿ ಗ್ರಾಮವು ಹಬ್ಬಿಕೊಂಡಿತ್ತು. ಕಾಫಿ ತೋಟ, ಬಾಡಿಗೆ ಜೀಪುಗಳಿಂದ ಬರುತ್ತಿದ್ದ ಆದಾಯದಿಂದ ಯಾರ ಬಳಿಯೂ ಕೈಚಾಚದೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಜನರನ್ನು ಮಹಾಮಳೆ ಬೀದಿಗೆ ತಂದು ನಿಲ್ಲಿಸಿತ್ತು.

ಹಬ್ಬಟ್ಟಗೇರಿಯಲ್ಲಿ ದೊಡ್ಡಬೆಟ್ಟ ಎರಡು ಕಿ.ಮೀ.ನಷ್ಟು ಕುಸಿದು ಶಾಲೆಮನೆ ಕಾಲೊನಿಗೂ, ಜಹಗೀರ್‌ ಪೈಸಾರಿಗೆ ಸಂಪರ್ಕವೇ ಕಡಿತಗೊಂಡಿದೆ. ಎರಡ್ಮೂರು ದಿನಗಳಿಂದ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ಕೆಸರು ಮಣ್ಣು ಕಾಮಗಾರಿಗೆ ಅಡ್ಡಿ ಆಗುತ್ತಿದೆ. ಗದ್ದೆ ಬಯಲಿನಲ್ಲಿ ಬೆಟ್ಟದ ಮಣ್ಣು ಸಂಗ್ರಹಗೊಂಡಿದೆ. ಭತ್ತದ ಪೈರು, ಕಾಫಿ ಗಿಡ, ಬಾಳೆ ತೋಟ, ಕಾಫಿ ಕಣ ಮಾಯವಾಗಿದೆ.   

ವಾಸಕ್ಕೆ ಯೋಗ್ಯವಾಗಿರುವ ಕಾಲೊನಿಯ ನಿವಾಸಿಗಳು ಪರಿಹಾರ ಕೇಂದ್ರಗಳಿಂದ ವಾಪಸ್ ಬಂದು ಸ್ವಂತ ಮನೆಯಲ್ಲಿ ನೆಲಸಲು ಆರಂಭಿಸಿದ್ದಾರೆ. ಜಹಗೀರ್‌ ಪೈಸಾರಿ ನಿವಾಸಿಗಳಿಗೆ ತೆರಳಲು ರಸ್ತೆ ಸಂಪರ್ಕ ಇಲ್ಲ. ಮನೆ ಕಳೆದುಕೊಂಡವರು ಪರಿಹಾರ ಕೇಂದ್ರದಲ್ಲೇ ಉಳಿದಿದ್ದಾರೆ. 

ಹೆಬ್ಬಟ್ಟಗೇರಿ, ದೇವಸ್ತೂರು, ಸೂರ್ಲಬ್ಬಿ ಭಾಗದಲ್ಲಿ ನೂರಾರು ಎಕರೆ ಕಾಫಿ ತೋಟ ಕುಸಿದಿದ್ದು ಕಾರ್ಮಿಕರಿಗೆ ಕೆಲಸ ಇಲ್ಲವಾಗಿದೆ. ಎಲ್ಲರ ಮೊಗದಲ್ಲಿ ನಗು ಕಣ್ಮರೆಯಾಗಿದೆ. ಸರ್ಕಾರ ನೀಡಿದ್ದ ₹ 3,800, ‘ವಿಶೇಷ ಅನ್ನಭಾಗ್ಯ ಕಿಟ್‌’ನಿಂದ ಇಷ್ಟು ದಿವಸ ಕಾಲವಾಗಿದೆ. ಭವಿಷ್ಯ ಹೇಗೆಂಬ ಚಿಂತೆ ಎಲ್ಲರಲ್ಲೂ ಕಾಡುತ್ತಿದೆ. 

ಹೆಬ್ಬಟ್ಟಗೇರಿಯಲ್ಲಿ ಕಾರ್ಮಿಕರು ಹಾಗೂ 2ರಿಂದ 10 ಎಕರೆ ತೋಟ ಹೊಂದಿದ್ದ ಮಧ್ಯಮ ವರ್ಗದ ಜನರು ನೆಲೆಸಿದ್ದರು. 10 ಮಂದಿಯ ತೋಟ, ಮನೆಗಳು ಕೊಚ್ಚಿ ಹೋಗಿವೆ. ಗ್ರಾಮಸ್ಥರು ಕುಡಿಯಲು ಬಳಸುತ್ತಿದ್ದ ನೀರಿನ ಬಾವಿಯ ಕುರುಹು ಸಿಗದಂತೆ ಕಣ್ಮರೆಯಾಗಿದೆ. ಸದ್ಯಕ್ಕೆ ತೋಡಿನ ನೀರೇ ಆಸರೆ. 

ಗುರುವಾರ ‘ಪ್ರಜಾವಾಣಿ’ ಸ್ಥಳಕ್ಕೆ ತೆರಳಿದ್ದಾಗ ನೇತ್ರಾ ಅವರು ಮಣ್ಣಿನಲ್ಲಿ ಹುದುಗಿದ್ದ ಮನೆಯ ಸಾಮಗ್ರಿಗಳಿಗೆ ಹುಡುಕಾಟ ನಡೆಸುತ್ತಿದ್ದರು. ಚಿನ್ನಾಭರಣ, ಹಣ ಇದ್ಯಾವುದೂ ಅವರಿಗೆ ಸಿಗಲಿಲ್ಲ. ಮೇಲಿದ್ದ ಎರಡು ಮರದ ಕುರ್ಚಿಗಳನ್ನು ಮಾತ್ರ ಹೊರ ತೆಗೆಯಲು ಸಾಧ್ಯವಾಯಿತು.

‘ಆ.16ರಂದು ಅನಾಹುತದ ಸೂಕ್ಷ್ಮತೆ ಗೊತ್ತಾಗಿತ್ತು. 17ರಂದು ಬೆಳಿಗ್ಗೆಯೇ ಸುರಕ್ಷಿತ ಸ್ಥಳಕ್ಕೆ ತೆರಳಲು ಯೋಚಿಸಿದ್ದೆವು. ಅಷ್ಟರಲ್ಲಿ ಮನೆಯ ಹಿಂಬದಿಯ ತೋಡಿನಲ್ಲಿ ನೀರು ಏಕಾಏಕಿ ಏರಿಕೆಯಾಗಿ ಬೆಟ್ಟದಿಂದ ಕೆಸರು ಮಣ್ಣು ಬಂದು ಬದುಕನ್ನೇ ಕಿತ್ತುಕೊಂಡಿತು’ ಎಂದು ನೇತ್ರಾ ಕಣ್ಣೀರಾದರು.

‘ನಾಲ್ಕು ಎಕರೆ ಕಾಫಿ ತೋಟ ಕುಸಿದಿದೆ. 2 ಕ್ವಿಂಟಲ್‌ ಕಾಳು ಮೆಣಸು ನಾಶವಾಗಿದೆ. ₹ 25 ಲಕ್ಷದ ಮನೆ ನೆಲಸಮವಾಗಿದೆ. ಅತ್ತೆ ಉಮ್ಮವ್ವ ಅವರೂ ಸಾವನ್ನಪ್ಪಿದರು. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹೊಸದಾಗಿಯೇ ಬದುಕು ಆರಂಭಿಸುವ ಸ್ಥಿತಿ ನಮ್ಮದು’ ಎಂದೂ ಹೇಳಿದರು. ಇಂತಹ ಇಷ್ಟೋ ದುರಂತ ಕಥೆಗಳು ಈ ಗ್ರಾಮದಲ್ಲಿವೆ.

ಜಲಸ್ಫೋಟದ ದುಃಸ್ವಪ್ನ: ‘ಬೆಟ್ಟಗಳಲ್ಲಿ ಆದ ಸ್ಫೋಟದ ಶಬ್ದವು ದುಃಸ್ವಪ್ನವಾಗಿ ಕಾಡುತ್ತಿದೆ. ಅದರ ನಡುವೆ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ. ಮೂರು ತಿಂಗಳ ಕಾಲ ನಿರಂತರ ಮಳೆ ಭೂಕುಸಿತಕ್ಕೆ ಕಾರಣ. ಜೀವ ಮಾತ್ರ ಉಳಿಸಿಕೊಂಡಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆಯಬಾರದು’ ಎಂದು ಸ್ಥಳೀಯ ನಿವಾಸಿ ಮೊಣ್ಣಯ್ಯ ಆಗ್ರಹಿಸಿದರು.    

ರಸ್ತೆ ಸಂಪರ್ಕ ಕಲ್ಪಿಸಿ

‘ಭೂಕುಸಿತವಾಗಿ 20 ದಿನ ಕಳೆದರೂ ಬಹುತೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಗಿಲ್ಲ. ಮೊದಲು ತಾತ್ಕಾಲಿಕವಾಗಿ ರಸ್ತೆ ಸಂಪರ್ಕ ಕಲ್ಪಿಸಿದರೆ ಹೇಗಾದರೂ ಬದುಕು ಸಾಗಿಸುತ್ತೇವೆ’ ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ಮಾಂದಲ್‌ಪಟ್ಟಿ, ದೇವಸ್ತೂರು ರಸ್ತೆಯಲ್ಲಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ಬೆಟ್ಟದ ಬದಿಯ ಮಣ್ಣು ಸಡಿಲಗೊಂಡಿದ್ದು ತೆರವು ಮಾಡಿದಂತೆಲ್ಲಾ ಕುಸಿಯುತ್ತಿದೆ.

ದೇವಸ್ತೂರು ಗ್ರಾಮದಲ್ಲಿ ಹೊಳೆಯ ನೀರು ಉಕ್ಕಿ ಹರಿದಿದ್ದ ಪರಿಣಾಮ ಕೆಸರು ಮಣ್ಣು ನಿಂತಿದೆ. ಹೊಳೆ ಈಗ ಶಾಂತವಾಗಿದ್ದು ಪರಿಹಾರ ಕೇಂದ್ರದಿಂದ ಬಂದಿರುವ ಸಂತ್ರಸ್ತರು ದುಃಖದ ನಡುವೆ ಕೆಸರು ಮಣ್ಣು ತೆರವು ಮಾಡುತ್ತಿದ್ದ ದೃಶ್ಯವೂ ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು