ಗುರುವಾರ , ಸೆಪ್ಟೆಂಬರ್ 19, 2019
22 °C
ಮಲಪ್ರಭಾ ನದಿಯಲ್ಲಿ ಪ್ರವಾಹ, ಜನರಲ್ಲಿ ಭೀತಿ ಹೆಚ್ಚಳ

ಗಾಯದ ಮೇಲೆ ಮತ್ತೊಮ್ಮೆ ‘ಬರೆ’

Published:
Updated:
Prajavani

ರಾಮದುರ್ಗ: ‘ಇನ್ನೇನ್ ಬಂದಿದ್ದ್‌ ನೀರ್ ಇಳಿತು, ಹೊಳ್ಳಿ ಮನಿಗೆ ಹೋಗೂನ್‌ ಅನ್ನೋಸ್ಟಿತ್ತಿಗೆ ಮತ್ತ್‌ ಈಗ ಹೋಳಿ ಬಂದ್ ನಮ್ಮ ಜೀವನಾನ ದುಸ್ತಾರ್ ಮಾಡೇತ್ರಿ. ಈ ಹೊಳಿ ಸಂಬಂಧ ನಮಗ್ ಸಾಕ್ ಸಾಕಾಗ್ ಹೋಗೇತ್ರಿ...’

– ಇದು ಇತ್ತೀಚೆಗೆ ಮಲಪ್ರಭಾ ನದಿಯ ರಕ್ಕಸ ಹೊಡೆತಕ್ಕೆ ಮನೆ ಕಳೆದುಕೊಂಡು ಸದ್ಯ ಇನ್ನೂ ಪರಿಹಾರ ಕೇಂದ್ರಗಳಲ್ಲಿ ನೆಲೆ ಪಡೆದಿರುವ ನಿರಾಶ್ರಿತರ ಗೋಳು. ಯಾಕಂದ್ರೆ ಇತ್ತೀಚೆಗೆ ತನ್ನ ಜನರನ್ನು ಬೀದಿಪಾಲು ಮಾಡಿದ್ದ ಮಲಪ್ರಭಾ ನದಿ ಇದೀಗ ಮತ್ತೆ ಬೋರ್ಗರೆದು ಹರಿಯುತ್ತಿದೆ.

ಖಾನಾಪುರ ತಾಲ್ಲೂಕಿನಾದ್ಯಂತ ಒಂದು ವಾರದಿಂದ ಭಾರಿ‌ ಮಳೆಯಾಗುತ್ತಿದೆ.‌ ಇದರಿಂದ ಮಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿದೆ.‌ ಹೀಗಾಗಿ ನವೀಲುತೀರ್ಥ ಡ್ಯಾಂನಿಂದ ಹೆಚ್ಚಿನ ನೀರು ಹೊರಬಿಡುತ್ತಿರುವುದರಿಂದ, ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ತಿಂಗಳ ಹಿಂದೆ ಬೋರ್ಗರೆದು ಹರಿದು ತಾಲ್ಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರ ಜೀವನವನ್ನು ಬೀದಿಪಾಲು ಮಾಡಿದ್ದ ಮಲಪ್ರಭಾ ನದಿ ಪುನಃ ತುಂಬಿ ಹರಿಯುತ್ತಿದೆ. ಹೀಗಾಗಿ ತಿಂಗಳ ಹಿಂದೆ ಮುಳಗಡೆಯಾಗಿದ್ದ ತಾಲ್ಲೂಕಿನ ಗ್ರಾಮಗಳು ಸದ್ಯ ಮತ್ತೊಮ್ಮೆ ಮುಳುಗಡೆಯಾಗುವ ಭೀತಿ ಎದುರಾಗಿದೆ.

ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ನದಿ ತಟದಲ್ಲಿನ‌ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ. ರೆಡ್‌ ಅಲರ್ಟ್‌ ಘೋಷಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳ ಸಭೆ ನಡೆಸಿ ಹುರುದುಂಬಿಸಿದ್ದಾರೆ. ಕೆಲವು ಕಡೆ ನೀರು ಕಡಿಮೆ ಆಗಿದ್ದರಿಂದ ಮನೆ ಸ್ವಚ್ಛತೆ ಮಾಡಲು ಮುಂದಾಗಿದ್ದ ನಿರಾಶ್ರಿತರು ಮತ್ತೆ ಪ್ರವಾಹ ಉಂಟಾಗುವ ಸುದ್ದಿ ಕೇಳಿ ತಲೆಮೇಲೆ ಕೈ ಇಟ್ಟು ಕೂರುವ ಸ್ಥಿತಿ ಬಂದಿದೆ.

ಮತ್ತೊಮ್ಮೆ ಪ್ರವಾಹ ಉಂಟಾಗುವ ಕಾರಣದಿಂದ ಜನರು ಮನೆಯ ಸಾಮಾನುಗಳನ್ನು ಚಕ್ಕಡಿ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದಾರೆ. ಕೆಲವರು, ತಲೆ ಮೇಲೆ ಹೊತ್ತು ತೆರಳುತ್ತಿದ್ದಾರೆ. ಬಹಳಷ್ಟು ಮಂದಿ ಶುಕ್ರವಾರ ರಾತ್ರಿಯೇ ಮನೆ ತೊರೆದು ಪರಿಹಾರ ಕೇಂದ್ರಗಳಲ್ಲಿ ಬಂದು ವಾಸವಾಗಿದ್ದಾರೆ.

ಕಳೆದ ತಿಂಗಳು ಉಂಟಾದ ಪ್ರವಾಹದಲ್ಲಿ ಮನೆ, ಜಮೀನು, ಜಾನುವಾರುಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರಗಳಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರಕಿಲ್ಲ. ಹೀಗಿರುವಾಗಲೇ ಮಲಪ್ರಭಾ ನದಿ ಮತ್ತೊಮ್ಮೆ ಪ್ರವಾಹ ತಂದೊಡ್ಡುವ ಮೂಲಕ ನಿರಾಶ್ರಿತರನ್ನು ಅಕ್ಷರಶಃ ಬೀದಿ ಪಾಲು ಮಾಡಿದೆ.

Post Comments (+)