ಚಂದ್ರಶೇಖರ್‌ ಗೆದ್ದರೂ ಬಿಜೆಪಿ ಶಾಸಕ

7
ರಾಮನಗರ ಉಪಚುನಾವಣೆ: ಆಯೋಗದ ಸ್ಪಷ್ಟನೆ

ಚಂದ್ರಶೇಖರ್‌ ಗೆದ್ದರೂ ಬಿಜೆಪಿ ಶಾಸಕ

Published:
Updated:

ಬೆಂಗಳೂರು: ರಾಮನಗರ ಉಪ ಚುನಾವಣಾ ಕಣದಿಂದ ಎಲ್. ಚಂದ್ರಶೇಖರ್ ಹಿಂದೆ ಸರಿದಿದ್ದರೂ ಮತದಾನದ ಬಳಿಕ ಅವರು ಹೆಚ್ಚಿನ ಮತ ಪಡೆದರೆ ಅಧಿಕೃತ ಶಾಸಕರಾಗಿ ಅವರೇ ಆಯ್ಕೆಯಾಗಲಿದ್ದಾರೆ.

‘ಸ್ಪರ್ಧೆಯಿಂದ ಅವರು ನಿವೃತ್ತಿ ಘೋಷಿಸಿರಬಹುದು. ಮತಯಂತ್ರದಿಂದ ಅವರ ಹೆಸರನ್ನು ತೆಗೆಯಲು ಈಗ ಅವಕಾಶವಿಲ್ಲ. ಈಗಿನ ಚುನಾವಣಾ ನಿಯಮಾವಳಿ ಪ್ರಕಾರ, ಚಂದ್ರಶೇಖರ್ ಗೆದ್ದರೆ ಅವರೇ ಬಿಜೆಪಿ ಶಾಸಕರಾಗಲಿದ್ದಾರೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಪರ್ಧೆಯಿಂದ ಹಿಂದಕ್ಕೆ ಸರಿದಿರುವುದಾಗಿ ಚಂದ್ರಶೇಖರ್‌ ಕೊನೇ ಕ್ಷಣದಲ್ಲಿ ಚುನಾವಣಾ ಆಯೋಗಕ್ಕೆ ಪತ್ರ ಕೊಟ್ಟಿದ್ದಾರೆ. ಆದರೆ ಅದು ಊರ್ಜಿತವಾಗುವುದಿಲ್ಲ. ನಾಮಪತ್ರ ವಾಪಸ್‌ ಪಡೆಯಬೇಕಾದ ಅವಧಿಯಲ್ಲಿ ಅವರು ಕಣದಿಂದ ಹಿಂದಕ್ಕೆ ಸರಿದಿದ್ದರೆ, ಆಗ ಊರ್ಜಿತವಾಗುತ್ತಿತ್ತು. ಈಗ ಅದನ್ನು ಮಾನ್ಯ ಮಾಡಲು ಆಗುವುದಿಲ್ಲ. ಆದ್ದರಿಂದ, ಬ್ಯಾಲೆಟ್‌ ಯುನಿಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಂದ್ರಶೇಖರ್‌ ಅವರ ಹೆಸರೇ ಇರುತ್ತದೆ’ ಎಂದು ಹೇಳಿದರು.

‘ಚಂದ್ರಶೇಖರ್‌ ನೀಡಿರುವ ಪತ್ರ ಮತ್ತು ಬಿಜೆಪಿ ನೀಡಿರುವ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳು
ಹಿಸಲಾಗಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ವಿವರಣೆ ನಿಯಮಗಳಲ್ಲಿ ಇಲ್ಲ’ ಎಂದರು.

ಹಿಂದೆಯೂ ಇಂತಹದ್ದೇ ತಂತ್ರ: 2013ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕೆಜೆಪಿಯ ರಾಮನಗರ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಖಿಜರ್‌ ಪಾಷಾ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೊನೆಕ್ಷಣದಲ್ಲಿ ಖಿಜರ್‌ ಜೆಡಿಎಸ್ ಸೇರಿದ್ದರು. ಆಗ ಎಚ್‌.ಡಿ.ಕುಮಾರ
ಸ್ವಾಮಿ ಗೆಲುವು ಸಾಧಿಸಿದ್ದರು.

ಅಭ್ಯರ್ಥಿ ಹೆಸರಿನ ಬದಲು ‘ದೇಶ ಮೊದಲು’

ರಾಮನಗರ: ಜಿಲ್ಲಾ ಬಿಜೆಪಿಯು ಉಪಚುನಾವಣಾ ಅಭ್ಯರ್ಥಿಯ ಹೆಸರಿನ ಜಾಗದಲ್ಲಿ ‘ದೇಶ ಮೊದಲು’ ಎಂದು ಬರೆದ ಕರಪತ್ರ ಮುದ್ರಿಸಿದ್ದು, ಶುಕ್ರವಾರ ಮತದಾರರಿಗೆ ಹಂಚಿತು.

ಅಭ್ಯರ್ಥಿ ಭಾವಚಿತ್ರದ ಜಾಗದಲ್ಲಿ ಕಮಲದ ಚಿಹ್ನೆಯನ್ನು ಹಾಕಲಾಗಿದೆ. ಜೊತೆಗೆ ಚಂದ್ರಶೇಖರ್ ಹೆಸರು ಇದ್ದ ಕಡೆ ‘ನಂಬಿ ಮೋಸ ಹೋದ ರಾಮನಗರ ವಿಧಾನಸಭೆ ಕ್ಷೇತ್ರದ ಪ್ರಾಮಾಣಿಕ ಕಾರ್ಯಕರ್ತರು’ ಎಂದೂ ಬರೆಯಲಾಗಿದೆ. ನಗರದಲ್ಲಿ ಮತ ಯಾಚನೆ ಮಾಡಿದ ಕಾರ್ಯಕರ್ತರು ‘ಅಭ್ಯರ್ಥಿ ಇಲ್ಲದಿದ್ದರೂ ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಇದರ ಜೊತೆಗೆ ಅಭ್ಯರ್ಥಿ ಹೆಸರಿನ ಜಾಗದಲ್ಲಿ ‘ಹಿಂದುತ್ವ’ ಎಂದು ಬರೆದ ಮತ್ತೊಂದು ಕರಪತ್ರದ ಚಿತ್ರವೂ ಹರಿದಾಡುತ್ತಿದೆ. ಆದರೆ ಇದನ್ನು ಹಂಚಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ‘ಜಿಲ್ಲಾ ಬಿಜೆಪಿಯು ಅಭ್ಯರ್ಥಿ ಹೆಸರಿನ ಕಡೆ ‘ದೇಶ ಮೊದಲು’ ಎಂದು ಬರೆದ ಕರಪತ್ರವನ್ನು ಹಂಚಿದೆ. ಕೆಲವು ಕಾರ್ಯಕರ್ತರು ತಾವೇ ಕರಪತ್ರ ಮುದ್ರಿಸಿಕೊಂಡಿದ್ದು, ಅದರಲ್ಲಿ ಹಿಂದುತ್ವ ಪದ ಬಳಕೆಯನ್ನೂ ಮಾಡಿರಬಹುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !