ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ನೆಲದಲ್ಲಿ ಮೈತ್ರಿ ಸಂದೇಶ

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಕೆ: ಮುಖ್ಯಮಂತ್ರಿ ಸಾಥ್‌
Last Updated 3 ಮೇ 2019, 16:05 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮಂಗಳವಾರ ಕಾಂಗ್ರೆಸ್‌–ಜೆಡಿಎಸ್ ಬಾವುಟಗಳು ಒಟ್ಟಿಗೇ ಹಾರಾಡಿದ್ದು, ಕಳೆದ ಮೂರ್ನಾಲ್ಕು ದಶಕಗಳಲ್ಲಿನ ರಾಜಕೀಯ ವೈಷಮ್ಯಕ್ಕೆ ಮಂಗಳ ಹಾಡುವ ಸಂದೇಶ ರವಾನಿಸಿತು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಮೆರವಣಿಗೆಯಲ್ಲಿ ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪಾಲ್ಗೊಂಡು ಉತ್ಸಾಹ ಹೆಚ್ಚಿಸಿದರು. ಜೂನಿಯರ್‌ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಮೆರವಣಿಗೆಯಲ್ಲಿ ಮೈತ್ರಿ ಪಕ್ಷಗಳ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು.

ಮಧ್ಯಾಹ್ನ 12.30ರ ಸುಮಾರಿಗೆ ಸುರೇಶ್‌ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭ ಅವರಿಗೆ ಕುಮಾರಸ್ವಾಮಿ ಜೊತೆಗೆ ಶಾಸಕರಾದ ಎ.ಮಂಜುನಾಥ್‌, ಮುನಿರತ್ನ ಹಾಗೂ ಶಿವಣ್ಣ ಸಾಥ್‌ ನೀಡಿದರು. ಐದು ಮಂದಿಗಷ್ಟೇ ಅವಕಾಶವಿದ್ದ ಕಾರಣ ಸಹೋದರ ಡಿ.ಕೆ. ಶಿವಕುಮಾರ್ ಕೊಠಡಿಯ ಹೊರಗೆ ನಿಂತರು.

ಜಿಲ್ಲಾಧಿಕಾರಿ ಕಚೇರಿಗೆ ಕೂಗಳತೆ ದೂರದ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲೂ ಮೈತ್ರಿ ಮಾತು ಪ್ರತಿಧ್ವನಿಸಿತು.

‘33 ವರ್ಷದ ಹಿಂದೆಯೇ ದೇವೇಗೌಡರ ವಿರುದ್ಧ ಸೆಟೆದು ನಿಂತಿದ್ದೆ. ಈಗ ಅದೇ ಕುಟಂಬದ ಜೊತೆ ಕೈಜೋಡಿಸಿದ್ದೇನೆ. ಕಾಲ ಎಲ್ಲವನ್ನೂ ಬದಲಾಯಿಸಿದೆ. ನಾವು ಬದಲಾದಂತೆ ಉಭಯ ಪಕ್ಷಗಳ ಕಾರ್ಯಕರ್ತರೂ ಬದಲಾಗಬೇಕು’ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ದಾಖಲಾಗಿರುವ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿ ಕೇಸ್ ವಾಪಸ್‌ ಪಡೆದುಕೊಳ್ಳುವ ಭರವಸೆ ನೀಡಿದರು.

ಶಿವಕುಮಾರ್ ಮಾತಿಗೆ ಕುಮಾರಸ್ವಾಮಿ ಕೂಡ ಧ್ವನಿಗೂಡಿಸಿದರು. ಜಾತ್ಯತೀತ ಶಕ್ತಿಗಳು ಒಂದುಗೂಡಬೇಕು ಎನ್ನುವುದನ್ನು ಪದೇ ಪದೇ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎರಡೂ ಪಕ್ಷಗಳ ಶಾಸಕರು ಹಾಗೂ ಮುಖಂಡರು ಪಾಲ್ಗೊಂಡರು.

ಅಶ್ವಥ್‌ ನಾರಾಯಣ ನಾಮಪತ್ರ

ಬಿಜೆಪಿ ಅಭ್ಯರ್ಥಿಯಾಗಿ ಅಶ್ವಥ್‌ ನಾರಾಯಣ ಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.

ಅಶ್ವಥ್‌ರ ತಾಯಿ ತೀರಿಕೊಂಡು ಹನ್ನೊಂದು ದಿನವಾಗಿದ್ದು, ಬೆಳಗ್ಗೆ ಎಲ್ಲ ಕಾರ್ಯ ಮುಗಿಸಿ ಬಂದ ಅವರು ತರಾತುರಿಯಲ್ಲಿ 2.30ರ ವೇಳೆಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಆರ್. ಅಶೋಕ್‌, ಸಿ.ಪಿ. ಯೋಗೇಶ್ವರ್‌, ಕಟ್ಟಾ ಸುಬ್ರಮಣ್ಯನಾಯ್ಡು ಹಾಗೂ ಮಾಳವಿಕಾ ಅವಿನಾಶ್‌ ಸಾಥ್‌ ನೀಡಿದರು. ಬಿಜೆಪಿಯ ಜಿಲ್ಲಾ ಘಟಕದ ಕೆಲವು ಮುಖಂಡರು ಈ ಸಂದರ್ಭ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT