ಪರೀಕ್ಷೆ ವಂಚಿತ ಉದ್ಯೋಗಕಾಂಕ್ಷಿಗಳಿಗೆ ಮತ್ತೊಂದು ಅವಕಾಶ: ಮುಖ್ಯಮಂತ್ರಿ ಭರವಸೆ

7
ತಡವಾಗಿ ಸಂಚರಿಸಿದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್

ಪರೀಕ್ಷೆ ವಂಚಿತ ಉದ್ಯೋಗಕಾಂಕ್ಷಿಗಳಿಗೆ ಮತ್ತೊಂದು ಅವಕಾಶ: ಮುಖ್ಯಮಂತ್ರಿ ಭರವಸೆ

Published:
Updated:

ಹುಬ್ಬಳ್ಳಿ: ರೈಲು ವಿಳಂಬದ ಕಾರಣ, ಭಾನುವಾರ ನಡೆದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೆಬಲ್ (ಎಪಿಸಿ) ಲಿಖಿತ ಪರೀಕ್ಷೆ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರೈಲು ಟಿಕೆಟ್ ಹಾಜರುಪಡಿಸಿ ಮನವಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ನೇಮಕಾತಿ ವಿಭಾಗದ ಎಡಿಜಿಪಿ ಆರ್‌.ಎಚ್‌. ಔರಾದಕರ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಏನಾಗಿತ್ತು?: ನಗರದಿಂದ ಬೆಂಗಳೂರಿಗೆ ಶನಿವಾರ ಹೊರಡಬೇಕಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಭಾನುವಾರ ಬೆಳಿಗ್ಗೆ ಹೊರಟ ಕಾರಣ, ಪರೀಕ್ಷೆ ಬರೆಯಲು ರಾಜಧಾನಿಗೆ ಹೊರಟಿದ್ದ ಸುಮಾರು 2 ಸಾವಿರ ಅಭ್ಯರ್ಥಿಗಳು ಅವಕಾಶ ಕಳೆದುಕೊಂಡಿದ್ದಾರೆ. ರೈಲು ಶನಿವಾರ ರಾತ್ರಿ 10.40ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಡಬೇಕಿತ್ತು. ಧಾರವಾಡದ ಕಂಬಾರಗಣವಿ ಸಮೀಪ ರಾತ್ರಿ ಗೂಡ್ಸ್ ರೈಲು, ಎಂಜಿನ್ ವಿಫಲವಾಗಿ ಕೆಟ್ಟು ನಿಂತಿತ್ತು. ಹೀಗಾಗಿ, ಆ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿ ನಿಲ್ದಾಣ ತಲುಪಿರಲಿಲ್ಲ.

ಈ ರೈಲಿನ ಎಂಜಿನ್ ಅನ್ನು ಗೂಡ್ಸ್ ರೈಲಿಗೆ ಅಳವಡಿಸಿ ಹಿಂದಕ್ಕೆ ಕೊಂಡೊಯ್ಯಲಾಯಿತು. ಮಾರ್ಗ ಮುಕ್ತವಾದ ನಂತರ ಪ್ರಯಾಣಿಕರ ರೈಲು ಹುಬ್ಬಳ್ಳಿ ತಲುಪಿತು. ಅಂತಿಮವಾಗಿ ರೈಲು, ಭಾನುವಾರ ಬೆಳಿಗ್ಗೆ ಆರು ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟಿತು.

ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿದ ಅಭ್ಯರ್ಥಿಗಳು ಕಂಬಾರಗಣವಿಯಲ್ಲಿ ಪ್ರತಿಭಟನೆ ನಡೆಸಿದರು. ‘ರೈಲ್ವೆ ಸಿಬ್ಬಂದಿ ಮಾಹಿತಿ ನೀಡಲು ನಿರಾಕರಿಸಿದರು. ಸಮಯೋಚಿತ ಕ್ರಮ ಕೈಗೊಳ್ಳದ ಕಾರಣ ವಿಳಂಬವಾಯಿತು’ ಎಂದರು.

ಆದರೆ, ಇಲಾಖೆಯ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಮಳೆಯ ನಡುವೆಯೂ ಸಿಬ್ಬಂದಿ ತುರ್ತಾಗಿ ಕೆಲಸ ಮಾಡಿ, ರಾತ್ರಿ 1 ಗಂಟೆ ಸುಮಾರಿಗೆ ರೈಲು ಹೊರಡಲು ಅಣಿಗೊಳಿಸಿದರು. ಆದರೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಅಲ್ಲಿಂದ ರೈಲು ಹೊರಟ ನಂತರವೂ ಸುಮಾರು 12 ಬಾರಿ ರೈಲಿನ ತುರ್ತು ಚೈನ್ ಎಳೆದು ತೊಂದರೆ ನೀಡಿದರು. ಅವರು ಸಹಕಾರ ನೀಡಿದ್ದರೆ ಬೆಳಿಗ್ಗೆ ಎಂಟೂವರೆ ಹೊತ್ತಿಗೆ ಬೆಂಗಳೂರು ತಲುಪಿಸುತ್ತಿದ್ದೆವು. ಯಾರ ವಿರುದ್ಧವೂ ಪ್ರಕರಣ ದಾಖಲಿಸುವುದಿಲ್ಲ’ ಎಂದರು.

 

 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !