ಗುರುವಾರ , ನವೆಂಬರ್ 14, 2019
22 °C

70 ಸಾವಿರ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ತುರ್ತುಕ್ರಮ

Published:
Updated:

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟಿರುವ ಸುಮಾರು 70 ಸಾವಿರ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ತುರ್ತು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಬುಧವಾರ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಶಿಕ್ಷಣ ಇಲಾಖೆಯು ಇತ್ತೀಚೆಗೆ ನಡೆಸಿದ ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಬಗ್ಗೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆಯೂ ಸೂಚಿಸಿತ್ತು. ಈ ಸಂಬಂಧ ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿತ್ತು. 

‘ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರುವ ಪ್ರಕ್ರಿಯೆ ನಡೆಸಬೇಕು. ಇದಕ್ಕೆ ಸರಳ ವಿಧಾನಗಳನ್ನು ಅನುಸರಿಸಿ. ಇಂತಹ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಶೈಕ್ಷಣಿಕ ಮುಖ್ಯವಾಹಿನಿಗೆ ಕರೆ ತರಬೇಕು’ ಎಂದು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಸೂಚಿಸಿದರು.

‘ದಾಖಲಾತಿ ಸಂದರ್ಭದಲ್ಲಿ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಜನ್ಮ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ವರ್ಗಾವಣೆ ಪತ್ರಗಳನ್ನು ಕೇಳಿ ಪಾಲಕರನ್ನು ಹೆದರಿಸುವುದು ಬೇಡ. ಶಾಲೆ ಸೇರಲು ಬರುವ ಮಕ್ಕಳ ಪಾಲಕರಿಗೆ ಏನೂ ಕೇಳದೇ ದಾಖಲಾತಿ ಮಾಡಿಕೊಳ್ಳಿ. ಬಳಿಕ ನಿಯಮಾವಳಿಗಳನ್ನು ಪೂರೈಸಿ. ಇದರಿಂದ ಶಾಲೆಗಳಲ್ಲಿ ಕೆಳ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತದೆ’ ಎಂದು ವಿಜಯಭಾಸ್ಕರ್‌ ಹೇಳಿದರು.

ವಲಸೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವರ್ಷದ ಯಾವುದೇ ಸಂದರ್ಭದಲ್ಲೂ ದಾಖಲಾತಿ ಮಾಡಿಕೊಳ್ಳಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂತಹವರಿಗೆ ಶಾಲೆ ಪ್ರವೇಶ ದಾಖಲಾತಿಯನ್ನು ನಿರಾಕರಿಸಬಾರದು ಎಂದೂ ಕಟ್ಟುನಿಟ್ಟಾದ ಸೂಚನೆ ನೀಡಿದರು.

ವಲಸೆ ಕಾರ್ಮಿಕರ ಮಕ್ಕಳು ಸರ್ಕಾರಿ ಬಸ್‌ಗಳಲ್ಲಿ ಶಾಲೆಗೆ ಪ್ರಯಾಣಿಸಲು ಉಚಿತ ಬಸ್‌ ಪಾಸ್‌ಗಳನ್ನು ನೀಡಬೇಕು ಎಂದು ಕಾರ್ಮಿಕ ಇಲಾಖೆಗೆ ಸೂಚಿಸಿದರು.ಅಲ್ಲದೆ, ಕಾರ್ಮಿಕರ ಮಕ್ಕಳು ಸಮೀಪದ ಶಾಲೆಗಳಿಗೆ ಹೋಗುವಂತೆ ಕ್ರಮವಹಿಸುವುದು ಗುತ್ತಿಗೆದಾರರ ಕರ್ತವ್ಯ ಎಂದೂ ವಿಜಯಭಾಸ್ಕರ್‌ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಸಮೀಕ್ಷೆ ನಡೆಸಿ, ಶಾಲೆ ಬಿಟ್ಟ ಮಕ್ಕಳು ಫ್ಲೈಓವರ್‌, ಬಸ್‌ ನಿಲ್ದಾಣಗಳ ಶೆಲ್ಟರ್‌ ಆಶ್ರಯ ಪಡೆದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಬೇಕು. ಆಗಸ್ಟ್‌ನಲ್ಲಿ ಈ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದೂ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಆರು ವರ್ಷದಿಂದ 18 ವರ್ಷದೊಳಗಿನ ವಯಸ್ಸಿನ ಸುಮಾರು 70 ಸಾವಿರ ಮಕ್ಕಳು ಶಾಲೆ ಬಿಟ್ಟಿರುವುದನ್ನು ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆ ಗುರುತಿಸಿದೆ.

ಪ್ರತಿಕ್ರಿಯಿಸಿ (+)