‘ಒನ್‌ ಮ್ಯಾನ್‌ ಶೋ’ ನಿಲ್ಲಿಸಲು ಜನ ಕಾತರ

ಶನಿವಾರ, ಏಪ್ರಿಲ್ 20, 2019
29 °C
ಅಗತ್ಯದಷ್ಟು ವೇಗ ಪಡೆಯದ ಅಭಿವೃದ್ಧಿ: ಖರ್ಗೆ ವಿರುದ್ಧ ಕೆ.ರತ್ನಪ್ರಭಾ ಆರೋಪ

‘ಒನ್‌ ಮ್ಯಾನ್‌ ಶೋ’ ನಿಲ್ಲಿಸಲು ಜನ ಕಾತರ

Published:
Updated:
Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ‘ಒನ್‌ ಮ್ಯಾನ್‌ ಶೋ’ ನಡೆದಿದೆ. ಇದರಿಂದ ಬೇಸತ್ತಿರುವ ಜನ ಬದಲಾವಣೆ ಬಯಸಿದ್ದಾರೆ. ಡಾ.ಉಮೇಶ ಜಾಧವ ಅವರ ಗೆಲುವು ನಿಶ್ಚಿತ’ ಎಂದು ಬಿಜೆಪಿ ನಾಯಕಿ ಕೆ.ರತ್ನಪ್ರಭಾ ಹೇಳಿದರು.

‘ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಆಗಬೇಕಾದಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಹೊಸತನಕ್ಕೆ ಜನ ಕಾಯುತ್ತಿದ್ದಾರೆ. ನಾವು ಪ್ರಚಾರಕ್ಕೆ ಹೋದಲ್ಲೆಲ್ಲ ಬದಲಾವಣೆಯ ಮಾತುಗಳೇ ಕೇಳಿಬರುತ್ತಿವೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜನರು ಸುಮಾರು 50 ವರ್ಷಗಳ ಕಾಲ ಒಬ್ಬರಿಗೇ ಅಧಿಕಾರ ನೀಡಿದ್ದಾರೆ. ಒಂದು ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ಇದು ಹೆಚ್ಚೇ ಆಯಿತು. ಹೆಚ್ಚೂಕಡಿಮೆ ಒಂದು ಜನರೇಷನ್‌ ಬಾಳಿ ಬದುಕುವಷ್ಟು ಸಮಯ ಅಧಿಕಾರ ಸಿಕ್ಕಿದೆ. ಆದರೆ, ರಾಜಕೀಯ ಇಚ್ಚಾಶಕ್ತಿಯ ಕೊರತೆಯೇ ಹೈದರಾಬಾದ್‌ ಕರ್ನಾಟಕ ಇನ್ನೂ ಹಿಂದುಳಿಯಲು ಕಾರಣ’ ಎಂದು ವಿವರಿಸಿದರು.

‘ವಿದ್ಯಾವಂತರು ಕೆಲಸಕ್ಕಾಗಿ, ಬಡವರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಇನ್ನೂ ತಪ್ಪಿಲ್ಲ. ಕೇಂದ್ರ ಸರ್ಕಾರದಿಂದ ಉದ್ಯೋಗ ಸೃಷ್ಟಿಸುವಂಥ ಯೋಜನೆಗಳು ಮಂಜೂರಾಗಿವೆ. ಆದರೆ, ರಾಜ್ಯ ಸರ್ಕಾರ ಅವುಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ, ಬಹುಪಾಲು ಯೋಜನೆಗಳು ಅರ್ಧಕ್ಕೆ ನಿಂತಿವೆ’ ಎಂದು ಅವರು ತಿಳಿಸಿದರು.

‘ನಿಮ್ಜ್‌’ ನಿರ್ಮಾಣಕ್ಕೆ 12 ಸಾವಿರ ಎಕರೆ ಭೂಮಿ ಗುರುತಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆನ್ನೇ ಆರಂಭಿಸಿಲ್ಲ. ಹೀಗಾಗಿ, ಅದು ಹಾಗೇ ಉಳಿದಿದೆ. ಕೋಕಾಕೋಲಾ ಕಂಪನಿ ಪ್ಲ್ಯಾಂಟ್‌ ತೆರೆಯಲು ಮುಂದೆ ಬಂದಿತ್ತು. ಇಲ್ಲಿನ ಜನಪ್ರತಿನಿಧಿಗಳು ಸೂಕ್ತ ಸ್ಪಂದನೆ ನೀಡಲಿಲ್ಲ. ಹೀಗಾಗಿ, ಅದು ಮೈಸೂರಿಗೆ ಹೋಯಿತು’ ಎಂದು ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಹರಿಹಾಯ್ದರು.

‘ಬಾಬುರಾವ್‌ ಚಿಂಚನಸೂರ್‌ ಅವರು ಸಚಿವರಾಗಿದ್ದಾಗ ಜವಳಿ ಪರ್ಕ್‌ ಸ್ಥಾಪಿಸಲು ಆಸಕ್ತಿ ತೋರಿದ್ದರು. ಅವರ ಅಧಿಕಾರ ಮುಗಿದ ನಂತರ ಯೋಜನೆ ಮರೆತೇ ಹೋಯಿತು. ಕಲಬುರ್ಗಿ ವಿಮಾನ ನಿಲ್ದಾಣದ ಪ್ರಕ್ರಿಯೆಗಳೂ ಅತ್ಯಂತ ವಿಳಂಬವಾದವು. ಈ ಭಾಗ ಹಿಂದುಳಿಯಲು ಏನು ಕಾರಣ, ಯಾರು ಕಾರಣ ಎಂಬುದಕ್ಕೆ ಇಂಥ ಹಲವಾರು ಉದಾಹರಣೆ ನೀಡಬಹುದು’ ಎಂದು ರತ್ನಪ್ರಭಾ ತಿಳಿಸಿದರು.

‘ನಾನು ಬೆಂಗಳೂರಿನಲ್ಲೇ ಬಿಜೆಪಿ ಸೇರಬೇಕಿತ್ತು, ಕಲಬುರ್ಗಿಗೆ ಬಂದು ಸೇರಲು ಏನು ಕಾರಣ ಎಂದು ಹಲವರು ಪ್ರಶ್ನಿಸುತ್ತಾರೆ. ಈ ಭಾಗದಲ್ಲಿ ಕೆಲಸ ಮಾಡಿದ ನನ್ನ ಅನುಭವ ಹಾಗೂ ಆಸಕ್ತಿಯೇ ಇಲ್ಲಿಗೆ ಎಳೆದುತಂದಿದೆ’ ಎಂದರು.

ಕಾಂಗ್ರೆಸ್‌ ವಿರುದ್ಧ ಪ್ರತಿದೂರು
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಮಾತನಾಡಿ, ‘ವಾಡಿ ಸಮೀಪದ ಕುಂಬಾರಹಳ್ಳಿ ತಾಂಡಾ ಬಳಿ ಸಚಿವ ಪ್ರಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ಮುಖಂಡರು ಹಣ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ಏಕೆ ಜಪ್ತಿ ಮಾಡಿಲ್ಲ? ಇದರ ಹಿಂದೆ ಯಾರ ಬಲಪ್ರಯೋಗ ಇದೆ ಎಂಬುದು ಜನರಿಗೆ ಗೊತ್ತಾಗಿದೆ’ ಎಂದು ಆರೋಪಿಸಿದರು.

‘ಕಾರಿನಲ್ಲಿ ಎಷ್ಟು ಹಣ ಸಾಗಿಸುತ್ತಿದ್ದರು? ಎಲ್ಲಿಗೆ ಸಾಗಿಸುತ್ತಿದ್ದರು ಮತ್ತು ಯಾರನ್ನು ಖರೀದಿ ಮಾಡಲು ಹೊರಟಿದ್ದರು ಎಂಬುದು ನಮಗೂ ಗೊತ್ತಿದೆ. ಈ ಅಕ್ರಮ ತಡೆಯಲು ಹೋದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದರು.

‘ಬಿಜೆಪಿ ಕಾರ್ಯಕರ್ತರು ಕೂಡ ಪ್ರತಿ ದೂರು ನೀಡಿದರೆ ಪೊಲೀಸರು ಸ್ವೀಕರಿಸಿಲ್ಲ. ತಡರಾತ್ರಿ ನಾನೇ ಖುದ್ದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಕೋರಿದ ಮೇಲೆ ದೂರು ಸ್ವೀಕರಿಸಿದ್ದಾರೆ’ ಎಂದು ರವಿಕುಮಾರ ತಿಳಿಸಿದರು.

ಪಕ್ಷದ ಮುಖಂಡರಾದ ವಿಜಯಕುಮಾರ ಅಡಗಿ, ಸಂಗಣ್ಣ ಇಜೇರಿ, ರವಿಚಂದ್ರ, ಶರಣಪ್ಪ ಆತನೂರ ಇದ್ದರು.

**

ಜಾತಿ, ಧರ್ಮದ ಆಧಾರದಲ್ಲಿ ಆಡಳಿತ ಮಾಡುತ್ತಿರುವುದು ಕಾಂಗ್ರೆಸ್ಸಿಗರು. ಬಿಜೆಪಿ ರಾಷ್ಟ್ರೀಯತೆ ತಳಹದಿಯಲ್ಲಿ ಕೆಲಸ ಮಾಡುತ್ತದೆ. ಸಚಿವ ಪ್ರಿಯಾಂಕ್‌ ಇದನ್ನು ಅರಿಯಲಿ

–ರನ್‌.ರವಿಕುಮಾರ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !