ಗುರುವಾರ , ಜುಲೈ 29, 2021
21 °C

ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯ: ವಿರೋಧಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯಕ್ರಮ ಅಳವಡಿಸಲು ಹೊರಟಿರುವ ಸರ್ಕಾರದ ಕ್ರಮದಿಂದ ವಿವಿಧ ವಿಶ್ವವಿದ್ಯಾಲಯಗಳ ವಿಕೇಂದ್ರೀಕರಣ ಧ್ಯೇಯಕ್ಕೆ ಮತ್ತು ಸ್ವಾಯತ್ತೆಗೆ ಧಕ್ಕೆಯಾಗುತ್ತದೆ. ಪ್ರಾದೇಶಿಕ ಅನನ್ಯತೆ ಜೊತೆಗೆ ವಿಶ್ವವಿದ್ಯಾಲಯಗಳ ವೈಶಿಷ್ಟ್ಯತೆ ಮತ್ತು ಅಸ್ಮಿತೆಗಳನ್ನೂ ನಾಶ ಮಾಡಿದಂತಾಗುತ್ತದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಪರಿಷತ್ತು ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದೆ.

ಇಲ್ಲಿನ ಅಂಜುಮನ್ ಕಾಲೇಜಿನಲ್ಲಿ ಪರಷತ್ತಿನ ಪದಾಧಿಕಾರಿಗಳು ಸಭೆ ನಡೆಸಿ, ‘ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಪಠ್ಯಕ್ರಮ ಅಳವಡಿಕೆ ಕ್ರಮ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಕನ್ನಡ ವಿಷಯ ಪಠ್ಯಕ್ಕಂತೂ ಏಕರೂಪತೆ ಅನ್ವಯಿಸಬಾರದು. ಕನ್ನಡವು ರಾಜ್ಯ ಭಾಷೆಯಾಗಿದ್ದು, ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನೂ ಪಡೆದಿದೆ. ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಭಾರತೀಯ ಭಾಷೆಗಳಲ್ಲೇ ಹಿರಿದಾದ ಚರಿತ್ರೆ ಹೊಂದಿದೆ. ಅದು ಪ್ರಾದೇಶಿಕವಾಗಿ ವೈವಿಧ್ಯಮಯವೂ ಆಗಿದೆ. ಹೀಗಾಗಿ, ಏಕರೂಪ ಪಠ್ಯ ಕಲಿಕೆಯಿಂದ ವಿದ್ಯಾರ್ಥಿಗಳು ಈ ವೈವಿಧ್ಯಮಯ ಜ್ಞಾನದಿಂದ ವಂಚಿತರಾಗಬೇಕಾಗುತ್ತದೆ’ ಎಂದು ತಿಳಿಸಿದರು.

‘ಆಯಾ ಭಾಗದ ಸಾಹಿತ್ಯ, ಸಂಸ್ಕೃತಿ ಮತ್ತು ಚರಿತ್ರೆಗೆ ಮಹತ್ವ ನೀಡಿ ಪಠ್ಯ ರೂಪಿಸುವ ವಿವಿಧ ವಿಶ್ವವಿದ್ಯಾಲಯಗಳ ಅಭ್ಯಾಸ ಮಂಡಳಿಗಳ ಅಸ್ತಿತ್ವವೇ ಇಲ್ಲವಾಗಿ ಅಧ್ಯಾಪಕರಲ್ಲಿನ ಸೃಜನಶೀಲತೆ ಮತ್ತು ಕ್ರೀಯಾಶೀಲತೆಗೆ ಹಿನ್ನಡೆ ಆಗುತ್ತದೆ. ಪ್ರಾದೇಶಿಕ ಅಸಮಾನತೆ ತಲೆದೋರಿ ಏಕೀಕರಣದ ಆಶಯವೇ ನಿಷ್ಫಲವಾಗುತ್ತದೆ. ಕನ್ನಡ ವಿಷಯ ಪಠ್ಯಕ್ಕಾಗಿ ಈಗ ಸರ್ಕಾರ ರಚಿಸಿರುವ ತಜ್ಞರ ಸಮಿತಿಯು ಬೆಂಗಳೂರು ಕೇಂದ್ರಿತವಾಗಿದ್ದು ಪ್ರಾದೇಶಿಕ ಅಸಮಾನತೆ ಎದ್ದು ಕಾಣುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಶಿಕ್ಷಣ ತಜ್ಞರು, ಸಾಹಿತಿಗಳು, ವಿಶ್ವವಿದ್ಯಾಲಯಗಳ ಪರಿಣತರೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಪರಿಷತ್ತಿನ ಅಧ್ಯಕ್ಷ ಡಾ.ಡಿ.ಎಸ್. ಚೌಗಲೆ, ಕಾರ್ಯದರ್ಶಿ ಡಾ.ಯಲ್ಲಪ್ಪ ಹಿಮ್ಮಡಿ, ಕೋಶಾಧಿಕಾರಿ ಡಾ.ಸುರೇಶ ಹನಗಂಡಿ, ಸಿಂಡಿಕೇಟ್ ಸದಸ್ಯ ಡಾ.ಎಚ್.ಐ. ತಿಮ್ಮಾಪೂರ ಪತ್ರಕ್ಕೆ ಸಹಿ ಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.