ಗುರುವಾರ , ಡಿಸೆಂಬರ್ 5, 2019
20 °C

ಬಿಜೆಪಿಗೆ ನಾಳೆ ಅನರ್ಹ ಶಾಸಕರ ಅಧಿಕೃತ ಸೇರ್ಪಡೆ: ಎಲ್ಲರಿಗೂ ಟಿಕೆಟ್ ಬಹುತೇಕ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್‌ ತೀರ್ಪಿನಿಂದ ಖುಷಿಯಾಗಿರುವ ಅನರ್ಹ ಶಾಸಕರು ಇದೀಗ ಬಿಜೆಪಿ ಸೇರುವ ಉತ್ಸಾಹದಲ್ಲಿದ್ದಾರೆ. 

ತೀರ್ಪಿನ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ನಿವಾಸದಲ್ಲಿ ಮಾತುಕತೆ‌ ನಡೆಸಿದ ಅನರ್ಹ ಶಾಸಕರು ನಾಳೆ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಬಿಜೆಪಿಯಲ್ಲಿ ಟಿಕೆಟ್ ನೀಡುವ ಪ್ರಕ್ರಿಯೆಯಲ್ಲಿ ಸಂತೋಷ್ ಪ್ರಮುಖ ಪಾತ್ರ ನಿರ್ವಹಿಸುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. 

ಅನರ್ಹ ಶಾಸಕರಾದ ಮಹೇಶ್ ಕುಮಠಳ್ಳಿ, ರಮೇಶ್ ಜಾರಕಿಹೊಳಿ, ಎಚ್‌.ವಿಶ್ವನಾಥ, ಬಿ.ಸಿ.ಪಾಟೀಲ, ಶಿವರಾಮ್ ಹೆಬ್ಬಾರ್, ಪ್ರತಾಪಗೌಡ, ಶಂಕರ್, ನಾರಾಯಣಗೌಡ, ಶ್ರೀಮಂತ ಪಾಟೀಲ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕ ಯೋಗೇಶ್ವರ್ ಸಹ ಸಭೆಯಲ್ಲಿ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಇಷ್ಟಪಟ್ಟು ನಾವೆಲ್ಲರೂ ನಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿದ್ದೇವೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೇಳಿದರು.

‘ಡಕಾಯಿತರೇ ಸಚಿವರಾಗುತ್ತಾರೆ. ಅಂಥದ್ದರಲ್ಲಿ ನಾವು ಸಚಿವರಾಗುವುದು ಬೇಡವೇ. ನಮ್ಮನ್ನು  ಅನರ್ಹಗೊಳಿಸಿದ ಸ್ಪೀಕರ್‌ ಆದೇಶದ ಬಗ್ಗೆ ಮೊದಲಿನಿಂದಲೂ ಆಕ್ಷೇಪಗಳಿದ್ದವು. ಪಕ್ಷದ ಸದಸ್ಯತ್ವ ಪಡೆದುಕೊಂಡ ನಂತರ ಅನರ್ಹರಿಗೆ ಟಿಕೆಟ್ ಕೊಡಬೇಕೇ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ನಿರ್ಧರಿಸಲಿದ್ದಾರೆ’ ಎಂದು ರಮೇಶ ಜಾರಕಿಹೊಳಿ ಸುದ್ದಿಗಾರರಿಗೆ ಹೇಳಿದರು.

ಯಡಿಯೂರಪ್ಪ ಸಮಕ್ಷಮ ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ಅನರ್ಹ ಶಾಸಕರು ಪಕ್ಷದ ಸದಸ್ಯತ್ವನ್ನೂ ಪಡೆದುಕೊಳ್ಳಲಿದ್ದಾರೆ ಎಂದು ಮತ್ತೋರ್ವ ಅನರ್ಹ ಶಾಸಕ ಬಿ.ಸಿ.ಪಾಟೀಲ ಹೇಳಿದರು.

ಉಪಚುನಾವಣೆ ಬಳಿಕ ಮೈತ್ರಿ ಕಟ್

ಮತ್ತೊಂದೆಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ‘ಉಪಚುನಾವಣೆ ಬಳಿಕ ಕಾಂಗ್ರೆಸ್ ಜತೆ ಮೈತ್ರಿ ಸಾಧ್ಯವೇ ಇಲ್ಲ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು