ಗುರುವಾರ , ಜುಲೈ 16, 2020
22 °C

ಬಾಕಿ ಉಳಿದ 80 ಕೋಟಿ ಟನ್ ಅದಿರು ಮಾರಾಟ: ಸಿಎಜಿ ಜತೆ ಯಡಿಯೂರಪ್ಪ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.

‘ಸಿ’ ವರ್ಗದ ಗಣಿಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಮೊದಲೇ ಗಣಿಗಾರಿಕೆ ಮಾಡಿರುವ ಸುಮಾರು 80 ಕೋಟಿ ಟನ್  ಅದಿರು ಮಾರಾಟವಾಗದೇ ಉಳಿದುಕೊಂಡಿದ್ದು, ಇದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಗಳ ನಿವಾರಣೆಗೆ ಮಹಾಲೇಖಪಾಲರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಗೆ ಮಾಡುತ್ತಿರುವುದನ್ನು  ತಡೆಗಟ್ಟಲು  ಡ್ರೋನ್ ಸರ್ವೆ ಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಖನಿಜಾನ್ವೇಷಣೆಗೆ  ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಖನಿಜಾನ್ವೇಷಣೆ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು.

ಗಣೆಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮ ಪಡಿಸಲು ಗುತ್ತಿಗೆದಾರರಿಂದ ರಾಜಧನದ ಶೇ 10 ರಷ್ಟು ಮತ್ತು 30 ರಷ್ಟು ಅನ್ವಯವಾಗುವಂತೆ ಜಿಲ್ಲಾ ಪ್ರತಿಷ್ಠಾನ ನಿಧಿಗೆ ಈವರೆಗೆ ವಂತಿಗೆ ₹ 28 ಕೋಟಿ ಸಂಗ್ರಹವಾಗಿದ್ದು, ಭಾರತ ಸರ್ಕಾರದ ನಿರ್ದೇಶನದಂತೆ ಕೋವಿಡ್ – 19ಕ್ಕೆ ಸೋಂಕು ತಡೆಗಟ್ಟಲು ಈ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ . ಪಾಟೀಲ ತಿಳಿಸಿದರು.  

ರಾಜ್ಯದಲ್ಲಿ ಅಂದಾಜು 4.5 ಕೋಟಿ ಮೆಟ್ರಿಕ್ ಟನ್  ಮರಳಿನ ಬೇಡಿಕೆ ಇದ್ದು, 3.8  ಕೋಟಿ ಮಟ್ರಿಕ್ ಟನ್ ಪೂರೈಕೆ ಮಾಡಲಾಗುತ್ತಿದೆ. ಹೊಸ ಮರಳು ನೀತಿಯ ಅನುಷ್ಠಾನದಿಂದ ಸರ್ಕಾರಕ್ಕೆ ಹೆಚ್ಚಿನ ರಾಜಧನ ಸಂಗ್ರಹವಾಗಲಿದೆ ಎಂದು ಸಚಿವರು ತಿಳಿಸಿದರು.
ಕೆಎಂಎಂಸಿಆರ್ ನಿಯಮಾವಳಿಗಳ ತಿದ್ದುಪಡಿ ನಂತರ ಬಾಕಿ ಇರುವ ಅರ್ಹ ಅರ್ಜಿಗಳಿಗೆ ಗಣಿಗುತ್ತಿಗೆಗಳ ಮಂಜೂರಾತಿ ಮತ್ತು ಹರಾಜು ಮೂಲಕ ಕಟ್ಟಡಕಲ್ಲು ಗಣಿಗುತ್ತಿಗೆಗೆಗಳ ಮಂಜೂರಾತಿ ನೀಡಲಾಗುವುದು.

ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2020ರ ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದ್ದು, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಪರವಾನಗಿ ವಿತರಣಾ ನಿಯಮಗಳ ಸರಳೀಕರಣ ಹಾಗೂ ಉಪ ಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್,  ನಿರ್ದೇಶಕ ಶಿವಶಂಕರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು