ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹಗೊಳಿಸಿದರೆ ಸರ್ಕಾರ ಅಲ್ಪಮತಕ್ಕೆ...

ತಮ್ಮ ಪರ ತೀರ್ಪು ಬಂದರೆ ಮಾತ್ರವೇ ಸರೀನಾ?
Last Updated 11 ಜುಲೈ 2019, 20:26 IST
ಅಕ್ಷರ ಗಾತ್ರ

ಶಾಸಕರ ರಾಜೀನಾಮೆ, ಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ಶಾಸಕತ್ವ ಅನರ್ಹಗೊಳಿಸಿ ಎಂದು ಸಭಾಧ್ಯಕ್ಷರಿಗೆ ಆಡಳಿತ ಪಕ್ಷ ನೀಡಿದ ಪತ್ರ, ಅನರ್ಹಗೊಳಿಸಿದರೆ ಮುಂದೇನಾಗುತ್ತದೆ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.

ಈ ಕುರಿತು ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಮತ್ತು ಎ.ಎಸ್‌. ಪೊನ್ನಣ್ಣ ಅವರು ನೀಡಿರುವ ಉತ್ತರಗಳು ಇಲ್ಲಿವೆ.

ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕವೂ ಪಕ್ಷದ ವ್ಹಿಪ್ ಅನ್ವಯವಾಗುತ್ತದೆಯೆ? ಅನ್ವಯವಾದರೆ, ಉಲ್ಲಂಘಿಸಿದ ಬಳಿಕ ಶಾಸಕತ್ವ ರದ್ದಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲವೆ?
ಬಿ.ವಿ. ಆಚಾರ್ಯ: ವ್ಹಿಪ್‌ ಅನ್ವಯ ಆಗೋದಿಲ್ಲ. ಅವರೆಲ್ಲಾ ಈಗಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಅನ್ವಯವೇ ಆಗೋದಿಲ್ಲ ಎಂದಾಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ಹೇಗೆ ಹೇಳುತ್ತೀರಿ?

ಎ.ಎಸ್.ಪೊನ್ನಣ್ಣ: ವ್ಹಿಪ್‌ ಖಂಡಿತಾ ಅನ್ವಯ ಆಗುತ್ತದೆ. ಸಂವಿಧಾನದ 180ನೇ ವಿಧಿಯ ಪ್ರಕಾರ ರಾಜೀನಾಮೆ ಕೊಟ್ಟಾಕ್ಷಣ ಅವರ ಸ್ಥಾನ ಖಾಲಿ ಆಗೋದಿಲ್ಲ. ರಾಜೀನಾಮೆ ಪತ್ರಗಳ ಪರಿಶೀಲನೆ ನಡೆಯಬೇಕು.

ಸಂವಿಧಾನ ಎಂಬುದು ಬೇರೆ ಕಾನೂನಿನಂತಲ್ಲ. ಅದೊಂದು ಪ್ರಜಾಪ್ರಭುತ್ವ ರಕ್ಷಣೆಯ ಜೀವಂತ ಗ್ರಂಥ. 20 ವರ್ಷಗಳ ಹಿಂದಿನ ಪರಿಸ್ಥಿತಿ ಇವತ್ತು ಇಲ್ಲ ಎಂಬುದನ್ನು ನಾವು ಮರೆಯಬಾರದು.

ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಪಕ್ಷದ ಅಧ್ಯಕ್ಷರು ಸಲ್ಲಿಸಿದ ಅರ್ಜಿ ಬಾಕಿ ಇರುವಾಗ, ರಾಜೀನಾಮೆ ಪತ್ರವನ್ನು ಸ್ವೀಕರಿಸಲೇಬೇಕಾ?
ಆಚಾರ್ಯ: ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಯಾರೋ ಏನೋ ಅರ್ಜಿ ಕೊಟ್ಟರು ಎಂದಾಕ್ಷಣ ಅದಕ್ಕಾಗಿ ಕಾಯಬೇಕಿಲ್ಲ. ರಾಜೀನಾಮೆ ಪತ್ರ ಸ್ವೀಕರಿಸಲು ಇರುವ ಕ್ರಮಬದ್ಧತೆಯ ಅನುಸಾರ ಅವರು ನಡೆದುಕೊಳ್ಳಲೇಬೇಕು.

ಪೊನ್ನಣ್ಣ: ಈ ಹಂತದಲ್ಲಿ ರಾಜೀನಾಮೆ ಅಂಗೀಕಾರ ಮಾಡಬೇಕೊ ಅಥವಾ ಬೇಡವೊ ಎಂಬುದನ್ನು ಸಂವಿಧಾನದ 190ನೇ (3) ವಿಧಿಯ ಪ್ರಕಾರ ಗಮನಿಸಬೇಕಾಗುತ್ತದೆ. ರಾಜೀನಾಮೆ ಕೊಟ್ಟವರು ಒತ್ತಡದಿಂದ ಕೊಟ್ಟಿದ್ದಾರೊ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲೇಬೇಕು.

ಶಾಸಕರನ್ನು ಅನರ್ಹಗೊಳಿಸಿದರೆ ಏನಾಗುತ್ತದೆ?
ಆಚಾರ್ಯ: ಏನೂ ಆಗೋದಿಲ್ಲ. ನಮಗೆ ಶಾಸಕ ಸದಸ್ಯತ್ವ ಬೇಡ ಎಂದು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟ ಮೇಲೆ ಇವರು ಎಂತ ಮಾಡಲಿಕ್ಕೆ ಆಗುತ್ತೆ?

ಪೊನ್ನಣ್ಣ: ಸರ್ಕಾರವನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಅನರ್ಹಗೊಳಿಸಿದರೆ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಇಳಿಯುತ್ತದೆ.

ಶಾಸಕರ ರಾಜೀನಾಮೆ ತಿರಸ್ಕರಿಸಿದರೆ ಸುಪ್ರೀಂಕೋರ್ಟ್‌ ಮಧ್ಯ ಪ್ರವೇಶ ಮಾಡಬಹುದೆ?

ಆಚಾರ್ಯ: ಖಂಡಿತಾ ಪ್ರವೇಶ ಮಾಡಬಹುದು. ಸಂವಿಧಾನದ ಪ್ರಕಾರ ಈ ಅಧಿಕಾರ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಎರಡಕ್ಕೂ ಇದೆ.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ರಾಜ್ಯಪಾಲರು 15 ದಿನ ಬಹುಮತ ಸಾಬೀತು ಮಾಡಲು ಸಮಯ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅದನ್ನು ಎರಡು ದಿನಕ್ಕೆ ಸೀಮಿತಗೊಳಿಸಲಿಲ್ಲವೆ?

ಕಾಂಗ್ರೆಸ್‌ನವರಿಗೆ ಪರವಾದ ತೀರ್ಪು ಬಂದರೆ ಕೋರ್ಟ್ ಸರಿಯಾಗಿದೆ ಎಂದರ್ಥ. ವಿರುದ್ಧ ಬಂದರೆ ತಪ್ಪು ಎಂದು ಹೇಳುವುದು ಎಷ್ಟು ಸರಿ?
ಪೊನ್ನಣ್ಣ:
ನ್ಯಾಯಾಂಗಕ್ಕೂ ತನ್ನದೇ ಆದ ಮಿತಿ ಇದೆ. ಈ ವಿಷಯದಲ್ಲಿ ಸಂತ್ರಸ್ತರ ಮೂಲಭೂತ ಹಕ್ಕುಗಳಲ್ಲಿ ಯಾವವು ಉಲ್ಲಂಘನೆ ಆಗಿವೆ ಎಂಬುದನ್ನು ಮೊದಲು ನೋಡಬೇಕು. ಹಾಗಾಗಿ ಮೊದಲು
ಹೈಕೋರ್ಟ್‌ ಮೆಟ್ಟಿಲು ಏರಬೇಕು. ನಂತರ ಸುಪ್ರೀಂ ಕೋರ್ಟ್‌ ಮೆಟ್ಟಿಲು ತುಳಿಯಬೇಕಾಗುತ್ತದೆ.

ಅನರ್ಹಗೊಂಡರೆ ಅದು ಇತ್ಯರ್ಥವಾಗುವವರೆಗೆ ಅಥವಾ ಕೋರ್ಟ್‌ ತಡೆಯಾಜ್ಞೆ ಸಿಗುವವರೆಗೆ ಅಥವಾ ಉಪಚುನಾವಣೆಯಲ್ಲಿ ಗೆಲ್ಲುವವರೆಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲವೆ?
ಆಚಾರ್ಯ:
ಅಲಂಕರಿಸುವಂತಿಲ್ಲ. ಆ ರೀತಿ ಸಾಂವಿಧಾನಿಕ ಹುದ್ದೆ ಅಲಂಕರಿಸಲು ಅವರು ಶಾಸಕ ಅಥವಾ ವಿಧಾನಪರಿಷತ್ ಸದಸ್ಯರಾಗಿರಬೇಕು.

ಪೊನ್ನಣ್ಣ: ಆ ರೀತಿ ಮಾಡಲು ಆಗುವುದಿಲ್ಲ. ಒಂದು ವೇಳೆ ಅನರ್ಹಗೊಂಡರೆ ಆ ಆದೇಶಕ್ಕೆ ಕೋರ್ಟ್ ತಡೆ ನೀಡಲಿಲ್ಲ ಅಂದರೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಸಂವಿಧಾನದ 164 (1) ಬಿ ಪ್ರಕಾರ, ಮಂತ್ರಿ ಮಾಡಲು ಆಗುವುದಿಲ್ಲ. ತಡೆ ನೀಡಿದರೆ ಮಾತ್ರ ಚುನಾವಣೆಗೆ ನಿಂತುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT