ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪ್ರತಿಕೃತಿ ದಹನ; ಬೂಟಿನೇಟು..!

ಲಿಂಗಾಯತ ವಿರೋಧಿ ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವ ಸೇನೆ ಪ್ರತಿಭಟನೆ; ಸಂಪುಟದಿಂದ ಕೈಬಿಡಲು ಆಗ್ರಹ
Last Updated 19 ಅಕ್ಟೋಬರ್ 2018, 19:08 IST
ಅಕ್ಷರ ಗಾತ್ರ

ವಿಜಯಪುರ:ಲಿಂಗಾಯತ ಸ್ವತಂತ್ರ ಧರ್ಮದ ಆಶಯಕ್ಕೆ ವಿರುದ್ಧವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿದರು.

ಪ್ರತಿಭಟನೆ ಸಂದರ್ಭ ಡಿಕೆಶಿ ಭಾವಚಿತ್ರ ಸುಟ್ಟರು. ಕೆಲವರು ಕಾಲಿನಿಂದ ತುಳಿದರೆ; ಒಂದಿಬ್ಬರು ಪ್ರತಿಭಟನಾಕಾರರು ಭಾವಚಿತ್ರಕ್ಕೆ ಬೂಟಿನೇಟು ನೀಡಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಮಾತನಾಡಿ ‘ಹಿಂದಿನ ಸರ್ಕಾರ ಯಾವುದೇ ಪಕ್ಷಪಾತ ಮಾಡಿಲ್ಲ. ಆ ಸಂದರ್ಭ ಬೆಂಬಲಿಸಿದ್ದ ಡಿಕೆಶಿ, ಇದೀಗ ತಪ್ಪಾಗಿದೆ. ಕ್ಷಮಿಸಿ ಎಂದು ಹೇಳಿರುವುದು ಅಕ್ಷಮ್ಯ ಅಪರಾಧ. ಇಡೀ ಲಿಂಗಾಯತ ಧರ್ಮೀಯರಿಗೆ ಅಪಮಾನ ಮಾಡಿದ್ದಾರೆ’ ಎಂದು ದೂರಿದರು.

‘ದ್ವೇಷ ಹಾಗೂ ಅಸೂಯೆಯಿಂದ, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬಾರದೆಂಬ ದುರುದ್ದೇಶದಿಂದ, ಲಿಂಗಾಯತ ನಾಯಕರಾದ ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ ಏಳಿಗೆ ಸಹಿಸದೆ, ಬಸವ ವಿರೋಧಿ ಪಂಚಪೀಠದ ರಂಭಾಪುರಿ ಸ್ವಾಮೀಜಿ ಖುಷಿ ಪಡಿಸಲು ಅವರ ಸಮ್ಮುಖದಲ್ಲಿ ಹೇಳಿರುವುದು ಒಳ್ಳೆಯದಲ್ಲ’ ಎಂದು ರವಿಕುಮಾರ ಕಿಡಿಕಾರಿದರು.

‘ಡಿಕೆಶಿ ಹೇಳಿಕೆಯನ್ನು ಸಮಗ್ರ ಲಿಂಗಾಯತರು ಖಂಡಿಸುತ್ತೇವೆ. ಮುಖ್ಯಮಂತ್ರಿಗೆ ಬಸವಣ್ಣ, ಲಿಂಗಾಯತ ಸಮಾಜದ ಮೇಲೆ ಗೌರವವಿದ್ದರೆ, ತಕ್ಷಣವೇ ಸಚಿವ ಸಂಪುಟದಿಂದ ಕೈ ಬಿಡಬೇಕು’ ಎಂದು ಇದೇ ಸಂದರ್ಭ ಪ್ರತಿಭಟನಾಕಾರರು ಆಗ್ರಹಿಸಿದರು.

‘ಆಗ ಏಕೆ ಒಪ್ಪಿಗೆ ನೀಡಿದ್ದರು’

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ಈಗ ಈ ರೀತಿ ಮಾತನಾಡುತ್ತಿರುವ ಸಚಿವ ಡಿ.ಕೆ.ಶಿವಕುಮಾರ್, ಹಿಂದಿನ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಏಕೆ ಒಪ್ಪಿಗೆ ನೀಡಿದ್ದರು’ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದ ಬಗ್ಗೆ ಶಿವಕುಮಾರ್ ಹಸ್ತಕ್ಷೇಪ ಬೇಕಿಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ. ಅವರು ವ್ಯಕ್ತಪಡಿಸಿರುವುದು ಪಕ್ಷದ ನಿಲುವಲ್ಲ. ಹೈಕಮಾಂಡ್‌ ಸಹ ಈ ಬಗ್ಗೆ ಯಾವ ಸೂಚನೆಯನ್ನೂ ನೀಡಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT