ಭಾನುವಾರ, ಏಪ್ರಿಲ್ 5, 2020
19 °C
24 ಹುದ್ದೆಗಳ ಭರ್ತಿಗೆ ಲೋಕಾಯುಕ್ತ ಬೇಡಿಕೆ * ಕೈಚೆಲ್ಲಿದ ಸರ್ಕಾರ

₹1.7 ಕೋಟಿಗೂ ಸರ್ಕಾರ ಪರದಾಟ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ 24 ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ವಾರ್ಷಿಕ ₹1.7 ಕೋಟಿ ನೀಡಲು ಸಹ ಸರ್ಕಾರದ ಬಳಿ ದುಡ್ಡಿಲ್ಲ. ಈ ಹುದ್ದೆಗಳ ಸೃಜಿಸಲು ಆರ್ಥಿಕ ನಿರ್ಬಂಧದ ಹಿನ್ನೆಲೆಯಲ್ಲಿ ಸಾಧ್ಯವಿಲ್ಲ ಎಂದು ನಿಷ್ಠುರವಾಗಿ ಹೇಳಿರುವ ರಾಜ್ಯ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ಕೈಚೆಲ್ಲಿದೆ.

17,116 ಪ್ರಕರಣಗಳನ್ನು ಇಟ್ಟುಕೊಂಡು ಅವುಗಳನ್ನು ಇತ್ಯರ್ಥಪಡಿಸಲು ಲೋಕಾಯುಕ್ತ ಹೆಣಗಾಡುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಲೋಕಾಯುಕ್ತಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವಂತೆ ಲೋಕಾಯುಕ್ತ ರಿಜಿಸ್ಟ್ರಾರ್‌ ಹಿಂದಿನ ಕಾಂಗ್ರೆಸ್‌ ಸರ್ಕಾರ, ಮೈತ್ರಿ ಸರ್ಕಾರ ಹಾಗೂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ  ಸರ್ಕಾರಕ್ಕೆ 2013ರಿಂದ ಇದುವರೆಗೆ ಹಲವು ಪತ್ರಗಳನ್ನು ಬರೆದಿದ್ದರು. 

ಇದಕ್ಕೆ ಉತ್ತರ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು, ‘ಪ್ರಸ್ತುತ ಇರುವ ಆರ್ಥಿಕ ನಿರ್ಬಂಧದ ಕಾರಣದಿಂದ ಹೊಸ ಹುದ್ದೆಗಳ ಸೃಜಿಸಲು ಅವಕಾಶ ಇಲ್ಲ’ ಎಂದು ತಿಳಿಸಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಭಾಸ್ಕರನ್‌ ಮಾಹಿತಿ ಹಕ್ಕು ಕಾಯ್ದೆಯಡಿ ಈ ಕುರಿತ ದಾಖಲೆಗಳನ್ನು ಪಡೆದಿದ್ದಾರೆ. ‘ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಸಂಸ್ಥೆಯನ್ನು ಬಲಪಡಿಸಲು ಬಿಜೆಪಿ ಸರ್ಕಾರಕ್ಕೂ ಮನಸ್ಸಿಲ್ಲ’ ಎಂದಿದ್ದಾರೆ.

‘ಆರ್ಥಿಕ ಅವ್ಯವಹಾರ, ದುರ್ನಡತೆ, ಅಧಿಕಾರ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಇಲಾಖಾ ವಿಚಾರಣೆಯನ್ನು ಹೆಚ್ಚುವರಿ ನಿಬಂಧಕರು ನಡೆಸುತ್ತಿದ್ದಾರೆ. 2001ರಿಂದಲೂ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಒಬ್ಬ ಹೆಚ್ಚುವರಿ ನಿಬಂಧಕರು ತಿಂಗಳಿಗೆ ಗರಿಷ್ಠ 7ರಿಂದ 10 ಇಲಾಖಾ ವಿಚಾರಣಾ ಪ್ರಕರಣಗಳನ್ನು ವಿಲೇವಾರಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚಿನ ವಿಚಾರಣಾಧಿಕಾರಿಗಳನ್ನು ನೇಮಿಸಿದರೆ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಬಹುದು’ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಪತ್ರದಲ್ಲಿ ಉಲ್ಲೇಖಿಸಿದ್ದರು.

ಬಿಜೆಪಿ ಹೇಳಿದ್ದೇನು?
‘ಅಧಿಕಾರಕ್ಕೆ ಬಂದರೆ ಲೋಕಾಯುಕ್ತಕ್ಕೆ ಪೂರ್ಣ ಅಧಿಕಾರ ನೀಡುವ ಬಗ್ಗೆ ನಮ್ಮ ಮೊದಲ ಸಂಪುಟ ಸಭೆಯಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಭ್ರಷ್ಟಾಚಾರ ಬಗ್ಗೆ ದೂರು ಸಲ್ಲಿಸಲು ಮುಖ್ಯಮಂತ್ರಿ ಸಚಿವಾಲಯದ ಉಸ್ತುವಾರಿಯಲ್ಲಿ  ದಿನದ 24
ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಆರಂಭಿಸಲಾಗುವುದು’ ಎಂದು ಬಿಜೆಪಿ2018ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

*
ಸಿದ್ದರಾಮಯ್ಯ ಲೋಕಾಯುಕ್ತಕ್ಕೆ ಗೋರಿ ತೋಡಿದರು. ಕುಮಾರಸ್ವಾಮಿ ಶವಪೆಟ್ಟಿಗೆ ಸಿದ್ಧಪಡಿಸಿದರು. ಯಡಿಯೂರಪ್ಪ ಕೊನೆ ಮೊಳೆ ಹೊಡೆಯುತ್ತಿದ್ದಾರೆ
-ಭಾಸ್ಕರನ್‌, ಮಾಹಿತಿ ಹಕ್ಕು ಕಾರ್ಯಕರ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು