ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಉದ್ಧಾರ ಮಾಡೋಕೆ ಯಾರೂ ಮದುವೆಯಾಗಲ್ಲ: ಎಸ್.ಎಲ್.ಭೈರಪ್ಪ

ದಸರಾ ಉದ್ಘಾಟಿಸಿ ಭಾಷಣ * ಜಾತಿ ವಿನಾಶಕ್ಕೆ ಬಸವಣ್ಣನ ಪ್ರಯತ್ನ ಶ್ಲಾಘನೀಯ ಎಂದ ಹಿರಿಯ ಸಾಹಿತಿ
Last Updated 29 ಸೆಪ್ಟೆಂಬರ್ 2019, 6:00 IST
ಅಕ್ಷರ ಗಾತ್ರ

ಮೈಸೂರು:‘ಯಾರೂ ಸಮಾಜ ಉದ್ಧಾರ ಮಾಡುವುದಕ್ಕೆ ಅಂತ ಮದುವೆಯಾಗುವುದಿಲ್ಲ. ನಮಗೆ ಹೊಂದುತ್ತಾರಾ ಎಂಬುದನ್ನಷ್ಟೇ ಹುಡುಗ–ಹುಡುಗಿ ಯೋಚನೆ ಮಾಡುತ್ತಾರೆ. ಅದು ಹಾಗೆಯೇ ಆಗಬೇಕು. ಅಡುಗೆಮನೆ ಕಟ್ಟಿಸುವುದರಿಂದ ಹಿಡಿದು ಎಲ್ಲವೂ ಜಾತಿಯನ್ನು ಆಧರಿಸಿದೆ. ಇದನ್ನೂ ನಾವು ಯೋಚಿಸಬೇಕು’.

ಇದು ಹಿರಿಯ ಸಾಹಿತಿ ಎಸ್‌.ಎಲ್.ಭೈರಪ್ಪ ಅವರು ದಸರಾ ಸಂದರ್ಭದಲ್ಲಿ ಆಡಿದ ಮಾತುಗಳು.

ವಿಶ್ವವಿಖ್ಯಾತ ಮೈಸೂರುದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಜಾತಿವಿನಾಶಕ್ಕೆ ಬಸವಣ್ಣ ಪ್ರಾಮಾಣಿಕವಾಗಿ ಪ್ರಯತ್ನಪಟ್ಟರು. ಜಾತಿಯನ್ನು ನಾಶ ಮಾಡಬೇಕಾದರೆ ಅಂತರಜಾತಿ ವಿವಾಹ ಆಗಬೇಕು ಅನ್ನುವ ಬಸವಣ್ಣನ ಪ್ರಯತ್ನ ಶ್ಲಾಘನೀಯ. ಆದರೆ ಆಗಿನ ಕಾಲದ ಜನರು ಅದನ್ನು ಒಪ್ಪಲಿಲ್ಲ. ಕಾರಣ ಅದು ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ ಆಗಿತ್ತು. ಆಗಿನ ಸಮಾಜ ಬದಲಾವಣೆ ಒಪ್ಪುತ್ತಿರಲಿಲ್ಲ’ ಎಂದರು.

‘ಬಸವಣ್ಣನ ಕಾಲದಲ್ಲಿ ಸಮಾಜ ಬದಲಾವಣೆಗೆ ಪಕ್ವವಾಗಿರಲಿಲ್ಲ. ಆದರೆ ಇವತ್ತು ಗಂಡು ಅಥವಾ ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. ಈಗ ಹುಡುಗಿ ಮತ್ತು ಹುಡುಗ ಇಬ್ಬರೂ ಓದಿರುತ್ತಾರೆ. ಎಲ್ಲೋ ಕೆಲಸ ಮಾಡುತ್ತಿರುತ್ತಾರೆ. ಪರಸ್ಪರ ಒಪ್ಪಿಗೆಯಿಂದ ಮದುವೆ ಮಾಡಿಕೊಳ್ತಾ ಇದ್ದಾರೆ. ಈ ಸ್ಥಿತಿಗೆ ಕಾರಣವಾಗಿದ್ದು ಆರ್ಥಿಕ ಸ್ವಾತಂತ್ರ್ಯ. ಜಾತಿ ಮೀರಿ ಮದುವೆಯಾಗುವುದು ಈಗ ನಡೀತಾ ಇದೆ’ ಎಂದು ಅವರು ಹೇಳಿದರು.

ಬಸವಣ್ಣನ ಹೆಸರು ಹೇಳುವವರು ಈ ಸಾಮಾಜಿಕ ಬದಲಾವಣೆ ಗಮನಿಸಬೇಕು. ಎಷ್ಟರಮಟ್ಟಿಗೆ ಸಮಾಜ ಬದಲಾವಣೆ ಆಗಿದೆ ಅಂತ ಗಮನವಿಟ್ಟು ನೋಡಬೇಕು. ಇಂಥ ವಿಷಯಗಳ ಬಗ್ಗೆ ಏನು ಆಲೋಚಿಸಬೇಕು ಅಂತ ನಮ್ಮ ಸಾಹಿತಿಗಳು ನೋಡಬೇಕು ಎಂದು ಭೈರಪ್ಪ ಹೇಳಿದರು.

ಈಗ ದೇವರ ಮನೆ ಹೇಗಿರುತ್ತದೆ? ದೇವರ ಮನೆಯಲ್ಲಿ ಮಂಟಪಗಳು ಇವೆ. ಕ್ಯಾಸೆಟ್ ಹಾಕಿ, ಲತಾ ಮಂಗೇಶ್ಕರ್ ಹಾಡಿನೊಂದಿಗೆ ಪೂಜೆ ಮಾಡ್ತಿದ್ದಾರೆ. ಏಕೀಕರಣ ಬರ್ತಿದೆ. ಸಾಹಿತಿ ಆದವನು ಇದನ್ನೆಲ್ಲಾ ಗಮನಿಸಬೇಕು. ತನ್ನ ಬರಹದಲ್ಲಿ ತರಬೇಕು ಎಂದು ಅವರು ಆಗ್ರಹಿಸಿದರು.

ನಾನು ದೇವರನ್ನು ನಂಬುತ್ತೇನೆ:ಸಾಹಿತಿಗಳು ದೇವರನ್ನು ನಂಬಬಾರದು ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆ ಅಭಿಪ್ರಾಯದ ಪ್ರಕಾರ ನಾನು ಸಾಹಿತಿ ಅಲ್ಲ. ನಾನು ದೇವರನ್ನು ನಂಬುತ್ತೇನೆ. ನನ್ನ ಮೊಮ್ಮಕ್ಕಳನ್ನು ಬೆಟ್ಟಕ್ಕೆ ಕರೆದುಕೊಂಡು ಬಂದು ದೇಗುಲದ ಹೊಸಿಲ ಮೇಲೆ ಮಲಗಿಸಿ ತೀರ್ಥ ಹಾಕಿಸಿಕೊಂಡು ಹೋಗಿದ್ದೇನೆ ಎಂದು ಭೈರಪ್ಪ ಹೇಳಿದರು.

ಕಥೆಯೊಂದನ್ನು ಉಲ್ಲೇಖಿಸಿ ಭೈರಪ್ಪ, ‘ದೊಡ್ಡವರು ಯಾರೂ ಇಲ್ಲವೇ? ಅಂತ ಪ್ರಯಾಣಿಕ ಒಂದು ಮನೆಗೆ ಬಂದು ಸೂಜಿ ಕೇಳಿದ. ಹುಡುಗ ದೊಡ್ಡವರು ಯಾರೂ ಇಲ್ಲ ಅಂದ. ಪ್ರಯಾಣಿಕ ಸೂಜಿ ಹುಡುಕಿನೋಡು ಅಂದ. ಕ್ಯಾಲೆಂಡರ್, ಪಟದಲ್ಲಿ ಇಲ್ಲ ಅಂದ ಹುಡುಗ. ಕೊನೆಗೆ ಪ್ರಯಾಣಿಕ ಮನೆಯಲ್ಲವನ್ನೂ ಹುಡುಕಿ ನೋಡು ಅಂತ ವಿನಂತಿಸಿದ. ಆ ಹುಡುಗ ಇಲ್ಲ ಅಂದ್ರೆ ಇಲ್ಲ ಹೋಗ್ರಿ ಅಂತ ದಬಾಯಿಸಿದ. ನಮ್ಮ ಕಥೆ ಹೀಗಾಗಿದೆ’ ಎಂದು ಹೇಳಿದರು.

ಮಹಾಸ್ಫೋಟದಿಂದ ಜಗತ್ತು ಸೃಷ್ಟಿಯಾಗಿದೆ. ಆ ಮಹಾಸ್ಫೋಟದಲ್ಲಿ ಕಾಲದೇಶ ಯಾವುದೂ ಇರಲಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಾರಣ ಮತ್ತು ಕಾರ್ಯದ ಸಿದ್ಧಾಂತ ನಿಮಗೆ ಗೊತ್ತಿರಬಹುದು. ಮಹಾಸ್ಫೋಟದ ಸ್ಥಿತಿಯಲ್ಲಿ ಕಾಲವೂ ಇಲ್ಲ. ಅಲ್ಲಿಗೆ ವಿಜ್ಞಾನ ನಿಂತು ಹೋಗುತ್ತದೆ. ಅದನ್ನೇ ನಮ್ಮ ವೇದಗಳು ‘ಅದು ಮನಸ್ಸಿಗೆ ಎಟುಕಲ್ಲ’ ಅಂತ ಹೇಳುತ್ತವೆ. ವಿಜ್ಞಾನಿಗಳು ಕೆಲ ವಿಚಾರಗಳಲ್ಲಿ ನಮ್ಮ ವಿಜ್ಞಾನ ಅಲ್ಲಿಗೆ ನಿಂತು ಹೋಗುತ್ತದೆ ಅಂತ ಹೇಳ್ತಾರೆ. ನಮ್ಮಲ್ಲಿ ದೇವರು ಅನ್ನುವ ಭಾವನೆಯೇ ಬಹಳ ಮುಖ್ಯ. ದೇವರನ್ನು ಸಾಕಾರ ರೂಪದಲ್ಲಿ, ನಿರಾಕಾರ ರೂಪದಲ್ಲಿ, ಹೆಣ್ಣು ಅಂತ, ಗಂಡು ಅಂತ, ಅದಕ್ಕಿಂತಲೂ ಮೀರಿದ್ದು ಅಂತಲೂ ನೋಡ್ತಾರೆ. ‘ಅದು’ ಅಂತನ್ಯೂಟ್ರಲ್ ಜಂಡರ್‌ನಲ್ಲಿಯೂ ನೋಡುವುದು ಬಂದಿದೆ ಎಂದು ಭೈರಪ್ಪ ಹೇಳಿದರು.

ದೇಶದಲ್ಲಿ ಹೆಣ್ಣಿಗೆ ಬೆಲೆ ಇದೆ:ಪ್ರಕೃತಿಯನ್ನು ಸಾಧಾರಣವಾಗಿ ಹೆಣ್ಣು ಅಂತ ಹೇಳುತ್ತಾರೆ. ದೇವರು, ದೇವತೆ ಅಂತ ಹೇಳುವಾಗ ಹೆಣ್ಣು ದೇವತೆಗಳು ಪ್ರಧಾನವಾಗಿರುತ್ತವೆ. ಹೀಗಾಗಿಯೇ ಊರುಗಳಲ್ಲಿ ಹೆಣ್ಣು ಅಥವಾ ಗಂಡು ಕೇಳಲು ಹೋಗುವಾಗ ಅಲ್ಲಿನ ಗ್ರಾಮ ದೇವತೆಗೆ ಪೂಜೆ ಮಾಡಿ ನಂತರ ಕೇಳುತ್ತೇವೆ. ಮೊದಲು ಮಾತೃದೇವೋಭವ ಅನ್ನುವ ರೂಢಿ ಇದೆ. ಹಿರಿಯ ದಂಪತಿಗಳಿದ್ದಾಗಲೂ ಮೊದಲು ಹೆಣ್ಣಿಗೆ ನಮಸ್ಕರಿಸುವುದು ರೂಢಿ. ಈ ದೇಶದಲ್ಲಿ ಹೆಣ್ಣಿಗೆ ಬೆಲೆಯಿಲ್ಲ ಅಂತ ಹೇಳುತ್ತಾರೆ. ಅದಕ್ಕೆ ಮಧ್ಯಕಾಲದಲ್ಲಿ ಆದ ಬೆಳವಣಿಗೆಗಳು ಕಾರಣ ಎಂದು ಭೈರಪ್ಪ ಹೇಳಿದರು.

ಶಬರಿಮಲೆ ವಿಚಾರದಲ್ಲಿ ಕಮ್ಯೂನಿಸ್ಟ್ ಸರ್ಕಾರ ತಲೆ ಹಾಕಿದ್ದೇಕೆ?

ನಮ್ಮಲ್ಲಿ ಕೆಲವು ತಪ್ಪು ಗ್ರಹಿಕೆಗಳು ಇವೆ. ಇದಕ್ಕೆ ಅಯ್ಯಪ್ಪ ದೇವಸ್ಥಾನಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಒಂದು ಉದಾಹರಣೆ. ಮುಟ್ಟಾದ ಮಹಿಳೆಯರಿಗೆ ಪ್ರವೇಶ ಇಲ್ಲ ಎನ್ನುವುದು ಅಲ್ಲಿನ ಸಂಪ್ರದಾಯ. ಮಹಿಳಾ ಜಡ್ಜ್‌ ‘ಈ ವಿಚಾರದಲ್ಲಿ ನಾವು ತೀರ್ಪು ಕೊಡಲು ಆಗಲ್ಲ ಅಂದ್ರು’. ಆದರೆ ಅದು ಮೈನಾರಿಟಿ ತೀರ್ಪು ಆಯಿತು. ಕೇರಳದ ಕಮ್ಯೂನಿಸ್ಟ್‌ ಸರ್ಕಾರ ಬಲವಂತವಾಗಿ, ಪೊಲೀಸ್ ಕಾವಲಿಟ್ಟು ಒಂದಿಷ್ಟು ಹೆಣ್ಣುಮಕ್ಕಳನ್ನು ದೇವಸ್ಥಾನಕ್ಕೆ ಕಳಿಸಿತು. ಕೇರಳದ ಕಮ್ಯೂನಿಸ್ಟ್‌ ಸರ್ಕಾರ ಶಬರಿಮಲೆ ಅಯ್ಯಪ್ಪ ದೇಗುಲ ವಿಚಾರದಲ್ಲಿ ಏಕೆ ತಲೆ ಹಾಕಬೇಕಿತ್ತು ಎಂದು ಭೈರಪ್ಪ ಪ್ರಶ್ನಿಸಿದರು.

ದೇವತೆಗಳ ಪ್ರಾರ್ಥನೆಯಂತೆ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದಳು. ಒಂದು ವೇಳೆ ಗಂಡಸರು ಈಗ ಲಿಂಗ ತಾರತಮ್ಯ ಅಂತ ಕೋರ್ಟ್‌ಗೆ ಹೋದರೆ ಹೇಗೆ? ಶೈವ ಮತ್ತು ವೈಷ್ಣವ ಪರಂಪರೆಯಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

‘ಯಾತ್ರೆಗೂ ಜಾತ್ರೆಗೂ ಏನು ವ್ಯತ್ಯಾಸ? ಉತ್ತರ ಭಾರತದಲ್ಲಿ ಎಷ್ಟೋ ಭಾಷೆಗಳಲ್ಲಿ ಯಕಾರವು ಜಕಾರವಾಗುತ್ತದೆ. ಯಾದವ ಅನ್ನೋದು ಜಾದವ ಅಂತ ಆಗುತ್ತದೆ. ಯೋಗಿ ಆದಿತ್ಯ ಅನ್ನೋದು ಜೋಗಿ ಆದಿತ್ಯ ಅಂತ ಆಗುತ್ತದೆ. ಸಂಸ್ಕೃತದ ಮೂಲ ರೀತಿಗೆ ಯೋಗಿ ಸರಿ. ಆದರೆ ಬಾಯಿಮಾತಿನಲ್ಲಿ ಅದು ಜೋಗಿ ಆಗಿದೆ. ಅದೇ ರೀತಿ ಯಾತ್ರೆ ಅನ್ನೋದು ಜಾತ್ರೆ ಆದಾಗ ಒಂದು ವ್ಯತ್ಯಾಸವಾಗುತ್ತದೆ. ಯಾತ್ರೆಯಲ್ಲಿ ವ್ಯಾಪಾರ, ಜನಸಂದಣಿ ಹೆಚ್ಚು ಇರಲ್ಲ. ಸಾಧಾರವಣವಾಗಿ ಯಾತ್ರೆ ಹೋಗೋದಾದ್ರೆ ಯಾವುದೋ ಗುಡ್ಡ, ಶಿಖರದ ಮೇಲೆ ಒಂದು ದೇವಸ್ಥಾನ ಇರುತ್ತದೆ. ಅಲ್ಲಿಗೆ ಹತ್ತಿ ಹೋದರೆ, ಜಗಲಿ ಮೇಲೆ ಎರಡು ಗಂಟೆ ಕೂತರೆ ಮನಸ್ಸು ಶಾಂತವಾಗುತ್ತದೆ. ಅಷ್ಟು ಮಾಡಿ ವಾಪಸ್ ಬರ್ತೀವಿ. ದೇವಸ್ಥಾನ ಪ್ರಸಿದ್ಧಿಗೆ ಬಂದಾಗ ಹೆಚ್ಚು ಹೆಚ್ಚು ಜನರು ಬರಲು ಶುರು ಮಾಡುತ್ತಾರೆ. ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಆಗ ಅದು ಜಾತ್ರೆ ಆಗುತ್ತದೆ. ಅಷ್ಟೊಂದು ಜನರು ಬರಲು ಶುರು ಮಾಡಿದ್ರೆ ಏಕಾಂತ ಹೊರಟು ಹೋಗುತ್ತದೆ’ ಎಂದು ಅವರು ಹೇಳಿದರು.

ಬೆಟ್ಟದ ಮೇಲೆ ಅಂಗಡಿ, ಕಾರು ನಿಲ್ಲಲು ಸ್ಥಳ ಮಾಡುತ್ತೇವೆ ಅಂತ ಸರ್ಕಾರ ಹೊರಟಾಗ ಮೈಸೂರಿನ ಪ್ರಜ್ಞಾವಂತರು ಅದನ್ನು ವಿರೋಧಿಸಿದರು. ಆದರೂ ಸರ್ಕಾರ ಜನರ ಮಾತು ಪರಿಗಣಿಸಲಿಲ್ಲ. ಚಾಮುಂಡಿಬೆಟ್ಟ ಟೂರಿಸ್ಟ್‌ ಸ್ಪಾಟ್ ಆಗಿ ಬದಲಾವಣೆ ಮಾಡುತ್ತಿದ್ದೇವೆ. ಅದನ್ನು ಯಾತ್ರಾಸ್ಥಳವಾಗಿ ಉಳಿಸಬೇಕು. ಊರಿನಲ್ಲಿ ಸಿಗದೆ ಇರುವುದು ಇಲ್ಲಿ ಏನು ಸಿಗುತ್ತದೆ. ಇಲ್ಲೇಕೆ ಅಂಗಡಿಗಳು ಬೇಕು. ಮೂಲ ಅಗತ್ಯಗಳಾದ ಊಟ, ಶೌಚಾಲಯದಂಥವು ಇದ್ದರೆ ಸಾಕು ಎಂದು ಅವರು ಪ್ರತಿಪಾದಿಸಿದರು.

ವೀರಶೈವ ಮತ್ತು ಲಿಂಗಾಯತ ಬೇರೆ ಅಂತ ಚುನಾವಣೆಗೂ ಮೊದಲು ಒಂದು ಚಳವಳಿ ಆರಂಭವಾಗಿತ್ತು. ಕೆಲ ಸಾಹಿತಿಗಳು ಅದರಲ್ಲಿ ಭಾಗವಹಿಸಿದ್ದರು. ರಾಜಕಾರಿಣಿಗಳು ಸರಿ ಸಾಹಿತಿಗಳು ಏಕೆ ಪಾಲ್ಗೊಂಡರು. ಬಸವಣ್ಣ ಹೇಳಿದ್ದು ಏನು ಎಂದು ಅವರು ಪ್ರಶ್ನಿಸಿದರು.

ಬಸವಣ್ಣ ನಿಜವಾದ ಸಮಾಜ ಸುಧಾರಕ:ನಾವು ಆದಿಚುಂಚನಗಿರಿ ಮಠದ ಕಾಲಭೈರವನ ಒಕ್ಕಲು ಹೀಗಾಗಿ ನನಗೆ ಭೈರಪ್ಪ ಅಂತ ಹೆಸರು ಇಟ್ಟರು. ಪ್ರತಿಯೊಬ್ಬರಲ್ಲಿಯೂ ಇಷ್ಟ ದೇವತೆ ಅಂತ ಇದೆ. ಬಸವಣ್ಣನವರು ಅದನ್ನು ಒಪ್ಪಿಕೊಂಡರು. ಬಸವಣ್ಣ ನಿಜವಾದ ಸಮಾಜ ಸುಧಾರಕರು. ಕಾಯಕದ ಪಾವಿತ್ರ್ಯ, ಜಾತಿ ವಿನಾಶವನ್ನು ಬಸವಣ್ಣ ಪ್ರತಿಪಾದಿಸಿದರು. ಪ್ರತಿಯೊಬ್ಬರು ಕಾಯಕ ಮಾಡಬೇಕು, ಕೆಲಸ ಮಾಡದೆ ಊಟ ಮಾಡಬಾರದು ಅಂತ ಹೇಳಿದರು. ಇವತ್ತು ಪಶ್ಚಿಮ ದೇಶಗಳಲ್ಲಿ ಕಾಯಕನಿಷ್ಠೆ ಇದೆ. ನಮ್ಮ ದೇಶದಲ್ಲಿ ಹಾಳಾಗಿ ಹೋಗಿದೆ ಎಂದು ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ಕಾಯಕನಿಷ್ಠೆ ಹಾಳುಮಾಡಿದ್ದು ರಾಜಕಾರಣಿಗಳು:ಬಿಸಿಲು ಹತ್ತುವುದಕ್ಕೆ ಮೊದಲು ಎತ್ತು ಕಟ್ಟಬೇಕು. ಹವಾ ತಂಪಾಗಿರುವಾಗ ಸಾಕಷ್ಟು ಹೊಲದ ಕೆಲಸ ಆಗಬೇಕು. ಬಿಸಿಲು ಇಳಿದ ನಂತರ ಮತ್ತೆ ಕೆಲಸ ಮಾಡುತ್ತಾರೆ. ರಾಜಕಾರಿಣಿಗಳು ಅವರನ್ನು ದಾರಿ ತಪ್ಪಿಸುತ್ತಾರೆ. ನೀನು 10 ಗಂಟೆಗೆ ಹೋಗು ಅಂತ ಹಚ್ಚಿಕೊಡ್ತಾರೆ. ಬಿಸಿಲಿನಲ್ಲಿ ಹೊಲದ ಕೆಲಸ ಮಾಡಲು ಆಗುತ್ತದೆಯೇ? ಕಾಯಕನಿಷ್ಠೆ ಅನ್ನೋದು ಒಂದು ಥರದಲ್ಲಿ ಇತ್ತು. ಅದನ್ನು ಹಾಳು ಮಾಡಿದ್ದು ರಾಜಕಾರಿಣಿಗಳು ಎಂದು ಭೈರಪ್ಪ ದೂರಿದರು.

ಕೊನೆಯದಾಗಿ, ‘ನಿಮ್ಮೆಲ್ಲರೊಂದಿಗೆ ತಾಯಿ ಚಾಮುಂಡಿಯ ದರ್ಶನ ಮಾಡಲು ಅವಕಾಶ ಕೊಟ್ಟ ಸರ್ಕಾರಕ್ಕೆ ಧನ್ಯವಾದ’ ಎಂದು ಭೈರಪ್ಪ ಭಾಷಣ ಮುಕ್ತಾಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT