ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಒಳ ಮೀಸಲಾತಿ ಬೇಗುದಿ

Last Updated 29 ಸೆಪ್ಟೆಂಬರ್ 2018, 18:48 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಎಂಬ ಹಕ್ಕೊತ್ತಾಯ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರಕ್ಕೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ.

ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂಬ ಬೇಡಿಕೆಗೆ ಈಗ ಮತ್ತೆ ಮುಂಚೂಣಿಗೆ ಬಂದಿದೆ.

ಹಿಂಬಡ್ತಿಗೆ ಗುರಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಸಮಾನಾಂತರ ಹುದ್ದೆ ಕಲ್ಪಿಸಿ, ನ್ಯಾಯ ಕೊಡಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಆಕ್ರೋಶ ಪರಿಶಿಷ್ಟರಲ್ಲಿ ಇದೆ. ವಿಳಂಬವನ್ನು ಖಂಡಿಸಿ ಸಮಾಜ ಕಲ್ಯಾಣ ಸಚಿವ ‍ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಬದ್ಧ ಎಂದು ಕುಮಾರಸ್ವಾಮಿ ಸಮಾಧಾನ ಪಡಿಸಿದ್ದರು. ಅದರ ಬೆನ್ನಲ್ಲೇ, ಒಳಮೀಸಲಾತಿಗಾಗಿನ ಹೋರಾಟ ಚುರುಕಾಗಿದೆ.

ಪರಿಶಿಷ್ಟ ಜಾತಿಯಲ್ಲಿರುವ ಒಳಪಂಗಡಗಳ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ನಿಗದಿಯಾಗಬೇಕೆಂಬ ಬೇಡಿಕೆ ದಶಕಗಳಷ್ಟು ಹಳೆಯದು. ಆಂಧ್ರಪ್ರದೇಶದಲ್ಲಿ ಎಡಗೈ ಮತ್ತು ಬಲಗೈ ದಲಿತರಲ್ಲಿ ಈ ವಿಚಾರದಲ್ಲಿ ಬಿರುಕು ಮೂಡಿದ ಬಳಿಕ ಕರ್ನಾಟಕದಲ್ಲಿಯೂ ಈ ಕಂದಕ ಹೆಚ್ಚಾಗಿತ್ತು.

‘ಎಡಗೈ’ಗೆ ಸೇರಿದ ಜಾತಿಗಳ ಒತ್ತಡಕ್ಕೆ ಮಣಿದು ಎಸ್‌.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಒಳಮೀಸಲಾತಿ ಕಲ್ಪಿಸುವ ಕಾರ್ಯಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. 2005ರಲ್ಲಿ ಎನ್‌. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರವು ಸದಾಶಿವ ಆಯೋಗ ರಚಿಸಿತ್ತು.

ಆಯೋಗವು 2012ರ ಜೂನ್‌ 15ರಂದು ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿತ್ತು. ಒಳಮೀಸಲು ಜಾರಿ ಮಾಡಿದರೆ ಬಲಗೈ ಒಳಪಂಗಡ ಮತ್ತು ಇತರೆ ಸ್ಪೃಶ್ಯ ಪರಿಶಿಷ್ಟ ಜಾತಿಗಳ ಸಿಟ್ಟು ಎದುರಿಸಬೇಕಾದೀತು ಎಂಬ ಕಾರಣಕ್ಕೆ ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ವರದಿ ಬಗ್ಗೆ ತೀರ್ಮಾನ ತೆಗೆದುಕೊಂಡಿರಲಿಲ್ಲ.

ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮಾದಿಗ ಹೋರಾಟವನ್ನು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದರು. ಮುಖ್ಯಮಂತ್ರಿಯಾದ ಬಳಿಕ ಅವರು ಈ ವಿಷಯದಲ್ಲಿ ಹಿಂದೆ ಸರಿದರು. ದಲಿತ ಮುಖಂಡರ ಜತೆಗೆ 13 ಸಲ ಮಾತುಕತೆ ನಡೆಸಿದರು. ‘ಕೈ’ ಪಾಳಯದ ಎಡಗೈ–ಬಲಗೈ ಮುಖಂಡರ ಕಚ್ಚಾಟದಿಂದ ಅವರಿಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅವರು ವರದಿಯನ್ನು ಪುರಸ್ಕರಿಸಲಿಲ್ಲ, ತಿರಸ್ಕರಿಸಲೂ ಇಲ್ಲ. ಪರಿಣಾಮವಾಗಿ, ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಒಳಪಂಗಡವು ‘ಕೈ’ಯಿಂದ ದೂರ ಸರಿಯಿತು.

ವರದಿಯ ಅಂಶಗಳನ್ನು ಜಾರಿಗೆ ತರಲು ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಗಟ್ಟಿ ನಿಲುವು ತಳೆಯಲಿಲ್ಲ ಎಂಬ ಸಿಟ್ಟು ಎಡಗೈ ಪಂಗಡದವರಿಗಿದೆ.

ಸದಾಶಿವ ಆಯೋಗದ ವರದಿಯ ಜಾರಿಗೆ ಬದ್ಧವೆಂದು ಜೆಡಿಎಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಈ ವಿಷಯದಲ್ಲಿ ಮೌನ ವಹಿಸಿದೆ ಎಂಬ ಆಕ್ರೋಶ ಮಾದಿಗ ಸಮುದಾಯದಲ್ಲಿ ಮೂಡಿದೆ. ತಮಗೆ ಶೇ 6ರಷ್ಟು ಒಳ ಮೀಸಲಾತಿ ಕಲ್ಪಿಸಿರುವ ಆಯೋಗದ ವರದಿ ಕಾರ್ಯರೂಪಕ್ಕೆ ತರಲೇಬೇಕು ಎಂದು ಈ ಸಮುದಾಯ ಪಟ್ಟು ಹಿಡಿದಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ಆಕ್ರಮಣಕಾರಿಯನ್ನಾಗಿ ಮಾಡುವ ಸುಳಿವನ್ನು ನೀಡಿದೆ.

ಆಯೋಗದ ವರದಿ ಅವೈಜ್ಞಾನಿಕ ಮತ್ತು ಸಂವಿಧಾನಬಾಹಿರ ಎಂದು ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗಗಳು ಟೀಕಿಸಿದ್ದು, ವರದಿಯ ಜಾರಿಯನ್ನು ವಿರೋಧಿಸಿವೆ.

**

ಮಾದಿಗರಿಂದ ತಿಂಗಳ ಗಡುವು

ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಗೆ ಜಾರಿಗೆ ರಾಜ್ಯ ಸರ್ಕಾರಕ್ಕೆ ಮಾದಿಗ ಸಂಘಟನೆಗಳು ತಿಂಗಳ ಗಡುವು ನೀಡಿವೆ. ಮೂರು ರಾಜಕೀಯ ಪಕ್ಷಗಳ ವಿರುದ್ಧ ‘ಮಾದಿಗರ ಮಹಾಯುದ್ಧ’ ಹೆಸರಿನಲ್ಲಿ ಅಕ್ಟೋಬರ್ 2ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.

‘ರಾಜ್ಯದಲ್ಲಿ 1.25 ಕೋಟಿ ಪರಿಶಿಷ್ಟ ಜಾತಿಯವರು ‌ಇದ್ದಾರೆ. ಮಾದಿಗರ ಸಂಖ್ಯೆ 65 ಲಕ್ಷದಷ್ಟಿದೆ. ಈ ಸಮುದಾಯಕ್ಕೆ 70 ವರ್ಷಗಳಿಂದ ಒಳಮೀಸಲಾತಿ ಸಿಕ್ಕಿಲ್ಲ. ಇದಕ್ಕೆ ಮನುವಾದಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಕುತಂತ್ರವೇ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

**

ಸದಾಶಿವ ಆಯೋಗದ ಶಿಫಾರಸುಗಳು

101:ಪರಿಶಿಷ್ಟ ಜಾತಿಗಳು

ಶೇ 15:ಪರಿಶಿಷ್ಟರಿಗೆ ಮೀಸಲು ಪ್ರಮಾಣ

ಶೇ 6:ಎಡಗೈ ಜಾತಿಗಳಿಗೆ

ಶೇ 5:ಬಲಗೈ ಜಾತಿಗಳಿಗೆ

ಶೇ 3:ಸ್ಪೃಶ್ಯ ಜಾತಿಗಳಿಗೆ

ಶೇ 1:ಇತರೆ ಪರಿಶಿಷ್ಟ ಜಾತಿಗಳಿಗೆ

**

ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯದವರನ್ನು ಕರೆದು ಚರ್ಚಿಸಿವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.

-ಎಚ್‌.ಆಂಜನೇಯ, ಕಾಂಗ್ರೆಸ್‌ ಮುಖಂಡ

*

ಮೂಲ ಅಸ್ಪೃಶ್ಯರಿಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ತರಬೇಕು. ಈ ವಿಷಯದಲ್ಲಿ ವಿಳಂಬ ಸಲ್ಲದು.

-ಗೋವಿಂದ ಕಾರಜೋಳ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT