ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ‌ ನಾಲ್ವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

Last Updated 16 ಜುಲೈ 2019, 17:05 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮೂವರು ಕಲಾವಿದರು 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಮತ್ತು ಒಬ್ಬ ಕಲಾವಿದೆ ‘ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

ಗೊಂಬೆಯಾಟದ ಕಲಾವಿದೆ ಅನುಪಮಾ ಹೊಸಕೆರೆ, ರಂಗ ನಿರ್ದೇಶಕ ಎಸ್‌. ರಘುನಂದನ ಹಾಗೂ ಭರತನಾಟ್ಯ ಕಲಾವಿದೆ ರಾಧಾ ಶ್ರೀಧರ್‌ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದವರು.

ಸುಗಮ ಸಂಗೀತ ಗಾಯಕಿ ಎಂ.ಡಿ. ಪಲ್ಲವಿ ಅವರು 2018ನೇ ಸಾಲಿನ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಸಂಗೀತ, ನಾಟಕ, ಜಾನಪದ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 44 ಮಂದಿಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ₹1ಲಕ್ಷ ನಗದು ಮತ್ತು ತಾಮ್ರಪತ್ರ ಒಳಗೊಂಡಿದೆ.

**

ನಾಲ್ವರು ದಿಗ್ಗಜರಿಗೆ ‘ಅಕಾಡೆಮಿ ರತ್ನ’ ಪ್ರಶಸ್ತಿ

ತಬಲಾ ಮಾಂತ್ರಿಕ ಜಾಕಿರ್‌ ಹುಸೇನ್‌, ನೃತ್ಯ ಕಲಾವಿದರಾದ ಕೆ. ಕಲ್ಯಾಣಸುಂದರಂ ಪಿಳ್ಳೆ, ಸೋನಲ್‌ ಮಾನ್‌ಸಿಂಗ್‌ ಹಾಗೂ ಜತಿನ್‌ ಗೋಸ್ವಾಮಿ ಅವರನ್ನು ‘ಸಂಗೀತ ನಾಟಕ ಅಕಾಡೆಮಿ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ಜೂನ್‌ 26ರಂದು ಅಸ್ಸಾಂನಲ್ಲಿ ನಡೆದಿದ್ದ ಅಕಾಡೆಮಿಯ ಆಯ್ಕೆ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅಕಾಡೆಮಿ ತಿಳಿಸಿದೆ.

‘ಅಕಾಡೆಮಿ ರತ್ನ’ ಅಪರೂಪ ಮತ್ತು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಬದುಕಿರುವ 40 ಮಂದಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ನಾಲ್ವರು ಕಲಾವಿದರನ್ನು ಅಕಾಡೆಮಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಿಂದ ಒಟ್ಟಾರೆ 40 ಮಂದಿಗೆ ಈ ಗೌರವ ನೀಡಿದಂತಾಗಿದೆ’ ಎಂದು ಕೇಂದ್ರದ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

‘ಅಕಾಡೆಮಿ ರತ್ನ’ ಪ್ರಶಸ್ತಿಯು ಮೂರು ಲಕ್ಷ ರೂಪಾಯಿ ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿದೆ.

ಇದರ ಜೊತೆಯಲ್ಲೇ ಅಕಾಡೆಮಿಯು ದೇಶದ ವಿವಿಧ ಪ್ರದೇಶಗಳ 44 ಮಂದಿ ಕಲಾವಿದರನ್ನು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಹಾಗೂ 32 ಮಂದಿಯನ್ನು 2018ನೇ ಸಾಲಿನ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಯುವ ಪುರಸ್ಕಾರವನ್ನು 40 ವರ್ಷ ವಯಸ್ಸಿನೊಳಗಿನ ಕಲಾವಿದರಿಗೆ ನೀಡಲಾಗುತ್ತದೆ.

ಅಕಾಡೆಮಿ ಪ್ರಶಸ್ತಿಗಳನ್ನು ರಾಷ್ಟ್ರಪತಿ ಅವರು ಮತ್ತು ಯುವ ಪ್ರಶಸ್ತಿಗಳನ್ನು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ಪ್ರದಾನ ಮಾಡುವರು ಎಂದು ಸಂಸ್ಕೃತಿ ಸಚಿವಾಲಯವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT