ಶನಿವಾರ, ಆಗಸ್ಟ್ 15, 2020
21 °C
ಮಂಡ್ಯಕ್ಕೆ ಹೆಚ್ಚುವರಿ ವೀಕ್ಷಕರು * ಅಕ್ರಮಕ್ಕೆ ಅವಕಾಶವಿಲ್ಲ

ಆಯೋಗಕ್ಕೆ 2,450 ದೂರು: ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ವಿಜಯಕುಮಾರ್‌ ಸಿಗರನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಇದೇ 18ರಂದು ನಡೆಯಲಿದೆ. ಪೂರ್ವ ಸಿದ್ಧತೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ...

*ಹಣ, ಮದ್ಯ ಹಂಚಿಕೆ ತಡೆ ಸಾಧ್ಯವಾಗಿದೆಯೇ?

ಹಣ, ಮದ್ಯ ಹಂಚಿಕೆ ಸೇರಿದಂತೆ ಅಕ್ರಮ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂಚಾರಿ ತಂಡ, ಉಸ್ತುವಾರಿ ತಂಡ, ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ತಂಡಗಳು ಸೇರಿ ಸುಮಾರು 3.50 ಲಕ್ಷ ಚುನಾವಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಫೋಟೊ, ವಿಡಿಯೊ ಜೊತೆ ಮತದಾರರೇ ದೂರು ದಾಖಲಿಸಲು ಸಿ–ವಿಜಿಲ್ ಆ್ಯಪ್ ಇದೆ. ಅಧಿಕಾರಿಗಳು ಯಾರ ಪರವಾಗಿಯಾದರೂ ಕೆಲಸ ಮಾಡಿದರೂ ದೂರು ನೀಡಬಹುದು. ಈವರೆಗೆ 2,450 ದೂರುಗಳು ಬಂದಿವೆ. ಅದರಲ್ಲಿ ಕಾಸಿಗಾಗಿ ಸುದ್ದಿಯ 58 ಪ್ರಕರಣಗಳೂ ಸೇರಿವೆ. ದೂರಿನ ಸತ್ಯಾಸತ್ಯತೆಯನ್ನು ಪ್ರತ್ಯೇಕ ಸಮಿತಿ ಪರಿಶೀಲಿಸುತ್ತಿದೆ.

*ಆಂಧ್ರ ಪ್ರದೇಶದಲ್ಲಿ ಮತಯಂತ್ರಗಳಲ್ಲಿ ದೋಷ ಕಂಡುಬಂದಿದೆ. ರಾಜ್ಯಕ್ಕೆ ಸರಬರಾಜಾಗಿರುವ ಇವಿಎಂಗಳು ಹೀಗಿವೆ?

ಹಲವು ಹಂತಗಳಲ್ಲಿ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳ ಪರಿಶೀಲನೆ ನಡೆದಿದೆ. ಅಣಕು ಮತದಾನ ಮಾಡಲಾಗಿದ್ದು, ಸುಸ್ಥಿತಿಯಲ್ಲಿ ಇಲ್ಲದ ಮತಯಂತ್ರಗಳನ್ನು ಬದಲಿಸಲಾಗಿದೆ. ಅವುಗಳ ಸಂಖ್ಯೆ ಹೆಚ್ಚಿಲ್ಲ. ಅಭ್ಯರ್ಥಿಗಳ ಹೆಸರನ್ನು ಅಳವಡಿಸಿದ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಅಣಕು ಮತದಾನ ಮಾಡಲಾಗಿದೆ. ತಾಂತ್ರಿಕ ದೋಷ ಕಂಡುಬಂದ ಕೆಲವನ್ನು ಈ ಸಂದರ್ಭದಲ್ಲೂ ಕೈಬಿಡಲಾಗಿದೆ. ಮತಗಟ್ಟೆಯಲ್ಲಿ ಮತದಾನಕ್ಕೂ ಮುನ್ನ ಏಜೆಂಟ್‌ಗಳ ಸಮ್ಮುಖ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ. ಸರಿಯಿಲ್ಲ ಎಂದಾದರೆ ಬದಲಿಸಲಾಗುವುದು.

*ಮಂಡ್ಯ ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿ ಬದಲಾಗಿದೆ. ಇಲ್ಲಿನ ಕಣ್ಗಾವಲಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ?

ಈ ಕ್ಷೇತ್ರದ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಇಬ್ಬರು ಸೇರಿ ಐವರು ವೀಕ್ಷಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇತರ ಕ್ಷೇತ್ರಗಳಿಗಿಂತ ಹೆಚ್ಚು ಸಿಬ್ಬಂದಿಯನ್ನೂ ನಿಯೋಜಿಲಾಗಿದೆ.

*ಮಂಡ್ಯದಲ್ಲಿ ಪ್ರತಿ ಮತಗಟ್ಟೆಯ ಮತದಾರರಿಗೆ ಹಂಚಲು ₹5 ಲಕ್ಷ ಖರ್ಚು ಮಾಡಲಾಗುತ್ತಿದೆ ಎಂಬ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ?

ದೂರು ಬಂದಿದೆ. ತನಿಖೆ ನಡೆಯುತ್ತಿದೆ.

*ನಿಮ್ಮ ಅಧಿಕಾರಿಗಳ ಪ್ರಕಾರ ಯಾವ ಜಿಲ್ಲೆಯಲ್ಲಿ ಹೆಚ್ಚು ಹಣದ ಹರಿವಿದೆ?

ನಮ್ಮ ಬಳಿ ಎಲ್ಲಾ ಮಾಹಿತಿ ಇದೆ. ಆದರೆ, ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಅಂಥ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

*ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಕೆಲವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಆಯಿತು. ಅವರು ಅಸಮರ್ಥರು ಎನಿಸಿತ್ತೆ, ಅವರನ್ನು ಜನ ಅನುಮಾನದಿಂದ ನೋಡುವುದಿಲ್ಲವೇ?

ಅಸಮರ್ಥರು ಎನ್ನಲು ಆಗವುದಿಲ್ಲ. ಒಬ್ಬೊಬ್ಬರಿಗೂ ಒಂದೊಂದು ಕಾರಣಗಳಿವೆ. ಅವರ ಮುಂದಾಳತ್ವದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದಿಲ್ಲ ಎನಿಸಿತ್ತು. ಹೀಗಾಗಿ ವರ್ಗಾವಣೆ ಮಾಡಲಾಗಿದೆ.

*ಧರ್ಮ ಮತ್ತು ಜಾತಿ ಹೆಸರಿನಲ್ಲಿ ಪ್ರಚಾರ ನಡೆಸುವವರ ವಿರುದ್ಧ ಏನು ಕ್ರಮ?

ಧರ್ಮ ಮತ್ತು ಜಾತಿ ಹೆಸರಿನಲ್ಲಿ ಪ್ರಚಾರ ಮಾಡುವುದು ಶಿಕ್ಷಾರ್ಹ ಅಪರಾಧ. ಇಂಥ ಹಲವು ಪ್ರಕರಣ ದಾಖಲಾಗಿದ್ದು, ಎಷ್ಟು ಎಂಬುದನ್ನು ನಿಖರವಾಗಿ ಹೇಳಲು ಆಗುವುದಿಲ್ಲ. ವರದಿಯಾದ ಎಲ್ಲಾ ಪ್ರಕರಣಗಳನ್ನೂ ದಾಖಲಿಸಿಕೊಳ್ಳಲಾಗಿದೆ.

*2018ರ ವಿಧಾನಸಭೆ ಚುನಾವಣೆಯನ್ನು ಸಮರ್ಪಕವಾಗಿ ನಡೆಸಿದ್ದೀರಿ. ಈ ಚುನಾವಣೆಯ ಸವಾಲು ಎನಿಸಿದೆಯೇ?

ಸುಲಭ ಎಂದೇನೂ ಇಲ್ಲ. ಸಮಸ್ಯೆ ಮತ್ತು ಸವಾಲುಗಳಿವೆ. ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಅದು ಅನಿವಾರ್ಯವೂ ಹೌದು.

*ಚುನಾವಣೆ ಬಳಿಕ ಒಂದು ತಿಂಗಳಿಗೂ ಹೆಚ್ಚು ಕಾಲ ಮತಯಂತ್ರಗಳನಿರಿಸುವ ನಿಯಂತ್ರಣಾ ಕೊಠಡಿಗೆ ಸೂಕ್ತ ಭದ್ರತೆ ಇದೆಯೇ?

ಅನುಮಾನ ಅಗತ್ಯವಿಲ್ಲ. 2 ಹಂತದಲ್ಲಿ ಕಾವಲು ವ್ಯವಸ್ಥೆ ಇದೆ. ನಿಯಂತ್ರಣಾ ಕೊಠಡಿ ಒಳ ಆವರಣದಲ್ಲಿ ಕೇಂದ್ರ ಭದ್ರತಾ ತಂಡ, ಹೊರಭಾಗದಲ್ಲಿ ರಾಜ್ಯ ಪೊಲೀಸರು ಕಾವಲು ಇರಲಿದ್ದಾರೆ. ಕೊಠಡಿಯ ಕೀಗಳು ಇಬ್ಬರು ಅಧಿಕಾರಿಗಳ ಬಳಿ ಇರಲಿವೆ. ಸೀಲ್ ಕೂಡ ಹಾಕಲಾಗುತ್ತದೆ. ಅನುಮಾನ ಇರುವ ಅಭ್ಯರ್ಥಿಗಳು ಕೂಡ ಪ್ರತ್ಯೇಕ ಬೀಗ ಹಾಕಿಕೊಳ್ಳಬಹುದು, ತಮ್ಮದೇ ಕಾವಲುಗಾರರನ್ನು ನಿಯೋಜಿಸಲೂ ಅವಕಾಶ ಇದೆ. ಆದರೆ, ಈ ರೀತಿಯ ಗುಮಾನಿ ನಮ್ಮಲ್ಲಿ ಕಡಿಮೆ. ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಗಳು ತಮ್ಮದೇ ಬೀಗ, ಕಾವಲುಗಾರರನ್ನು ನೇಮಿಸುತ್ತಾರೆ.

*ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆಯಲ್ಲ, ಅದು ಚುನಾವಣಾ ವೆಚ್ಚಕ್ಕೆ ಸೇರುವುದಿಲ್ಲವೇ?

ಈ ಸಂಬಂಧ 315 ದೂರುಗಳು ಬಂದಿವೆ. ಪರಿಶೀಲನೆ ನಡೆಸಿ, ನೀತಿ ಸಂಹಿತೆ ಉಲ್ಲಂಘಿಸಿದ 20 ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ. 295 ಪ್ರಕರಣಗಳ ಪರಿಶೀಲನೆ ನಡೆಯುತ್ತಿದ್ದು, ಅವುಗಳನ್ನು ಆಯಾ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುವುದು. ರಾಜಕೀಯಕ್ಕೆ ಸಂಬಂಧಿಸಿದ ಹಲವು ಪೋಸ್ಟ್‌ಗಳನ್ನು ಕಂಪನಿಗಳೇ ತೆಗೆದು ಹಾಕುತ್ತಿದ್ದು, ಆಯೋಗಕ್ಕೆ ವರದಿ ನೀಡಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು