ಸತೀಶ ಜಾರಕಿಹೊಳಿ ಸಾಹುಕಾರ್ರು.. ನಾವು ಪ್ರಜೆಗಳಷ್ಟೇ: ಡಿಕೆಶಿ

ಬೆಂಗಳೂರು: ‘ಸತೀಶ ಜಾರಕಿಹೊಳಿ ಸಾಹುಕಾರ, ನಾಯಕ.. ನಾವು ಪ್ರಜೆಗಳು ಮಾತ್ರ. ಪಕ್ಷ ಏನು ಕೆಲಸ ವಹಿಸಿದೆಯೋ ಅದನ್ನು ಮಾಡುತ್ತೇನೆ ಅಷ್ಟೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಕುಂದಗೋಳ ಉಪ ಚುನಾವಣೆಯ ಉಸ್ತುವಾರಿಯನ್ನು ಶಿವಕುಮಾರ್ ಅವರಿಗೆ ಕಾಂಗ್ರೆಸ್ ವಹಿಸಿದೆ.
‘ಉತ್ತರ ಕರ್ನಾಟಕ ಭಾಗಕ್ಕೆ ನಾವಿದ್ದೇವೆ’ ಎಂದು ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಳ್ಳಾರಿಯಲ್ಲೂ ದೊಡ್ಡ ದೊಡ್ಡ ನಾಯಕರು ಇದ್ದರು. ಮೈಸೂರು, ಗುಂಡ್ಲುಪೇಟೆ ಸೇರಿ ಹಲವು ಉಪ ಚುನಾವಣೆಯಲ್ಲಿ ಕೆಲಸ ಮಾಡಿ ಅಂದಿದ್ದರು. ಹೋಗಿ ಅಂದ್ರೆ ಹೋಗುತ್ತೇನೆ. ಬೇಡ ಅಂದರೆ ಹೋಗುವುದಿಲ್ಲ. ಪಕ್ಷ ಹೇಳಿದ ಮೇಲೆ ನಾನು ಕೇಳಲೇಬೇಕಾಗುತ್ತದೆ’ ಎಂದರು.
‘ಕೋರ್ಟ್ ಕೇಸ್ ಇದ್ದ ಕಾರಣ ಇಂದು ಕುಂದಗೋಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾಳೆಯೂ ವಿಚಾರಣೆ ಮುಂದುವರೆಯಲಿದೆ’ ಎಂದರು.
‘ಸಿ.ಎಸ್ ಶಿವಳ್ಳಿ ಹಾಗೂ ನನ್ನ ಸಂಬಂಧ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ. ಶಿವಳ್ಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದೇ ನಾನು’ ಎಂದರು.
‘ನನ್ನ ಕುಟುಂಬವನ್ನು ಕರೆದುಕೊಂಡು ಎಲ್ಲಾದರೂ ಹೋಗಿ ಬರೋಣ ಅಂದುಕೊಂಡಿದ್ದೆ. ಆದರೆ, ಪಕ್ಷದ ಕೆಲಸದಿಂದ ಹೋಗಲು ಸಾಧ್ಯವಾಗಿಲ್ಲ’ ಎಂದರು.
ಎಸ್.ಟಿ. ಸೋಮಶೇಖರ್ ಕರೆದಿರುವ ಸಮಾನ ಮನಸ್ಕ ಶಾಸಕರ ಸಭೆಯ ಬಗ್ಗೆ ಮಾತನಾಡಿದ ಶಿವಕುಮಾರ್, ‘ ಬೇರೆ ಪಕ್ಷಗಳಲ್ಲೂ ಅಧಿಕೃತ, ಅನಧಿಕೃತವಾಗಿ ಶಾಸಕರು ಸೇರುತ್ತಾರೆ. ಅವರ ಸಮಸ್ಯೆಗಳಿದ್ದರೆ ಅದನ್ನು ಹೇಳಿಕೊಳ್ಳುತ್ತಾರೆ. ಅದರಲ್ಲಿ ತಪ್ಪು ಏನಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಎಸ್.ಟಿ ಸೋಮಶೇಖರ್ ಅವರಿಗೂ ಉತ್ತಮ ಬಾಂಧವ್ಯವಿದೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.