ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಜಾತಿ, ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನ: ಬಳಕೆಯಾಗದ ₹1,539 ಕೋಟಿ

Last Updated 5 ಜೂನ್ 2019, 5:02 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗೆ 2018–2019ನೇ ಸಾಲಿನಲ್ಲಿ ನೀಡಿದ್ದ ಅನುದಾನದಲ್ಲಿ ₹1539 ಕೋಟಿ ಹಣ ಬಳಕೆಯೇ ಆಗಿಲ್ಲ.

ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯ ಪ್ರಗತಿ ಪರಿಶೀಲನೆ ಸಮಯದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ₹29723.57 ಕೋಟಿ ಹಣ ಒದಗಿಸಿದ್ದು, ₹28184.10 ಕೋಟಿ ವೆಚ್ಚವಾಗಿದೆ. ಒಟ್ಟಾರೆಯಾಗಿ ಶೇ 94.5ರಷ್ಟು ಪ್ರಗತಿ ಸಾಧಿಸಲಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸತತವಾಗಿ 5 ಗಂಟೆಗಳ ಕಾಲ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ‘ಗುರಿ ಮುಟ್ಟುವಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿವೆ. ಹಂಚಿಕೆ ಮಾಡಿದ ಹಣವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕು. ಶೇಕಡ ನೂರರಷ್ಟು ಗುರಿ ಸಾಧಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ನಂತರ ಮಾಹಿತಿ ನೀಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ‘ಈ ಬಾರಿ ಪೂರ್ಣ ಪ್ರಮಾಣದಲ್ಲಿ ಗುರಿಮುಟ್ಟದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಗಂಭೀರ ಲೋಪವೆಂದು ಪರಿಗಣಿಸಲಾಗುವುದು’ ಎಂದು ಎಚ್ಚರಿಸಿದರು.

ಹಿಂದಿನ ವರ್ಷಗಳಲ್ಲಿ ಆಗಿರುವ ಪ್ರಗತಿ, ಪರಿಣಾಮಗಳ ಅಧ್ಯಯನಕ್ಕೆ ಏಜೆನ್ಸಿ ಗುರುತಿಸಲಾಗಿದೆ. ಒಂದು ತಿಂಗಳಲ್ಲಿ ಇದು ಕೆಲಸ ಆರಂಭಿಸಲಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಆಗಿರುವ ಲೋಪಗಳ ಬಗ್ಗೆಯೂ ತನಿಖೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

3 ವರ್ಷದಲ್ಲಿ ಕಟ್ಟಡ: ಸಾಕಷ್ಟು ಕಡೆಗಳಲ್ಲಿ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಪರಿಶಿಷ್ಟರಿಗೆ ನೀಡಿರುವ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ತನ್ನ ವಾರ್ಷಿಕ ಬಜೆಟ್‌ನ ಯೋಜನಾ ವೆಚ್ಚದ ಶೇ 24.10ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡುತ್ತಿದೆ ಎಂದರು.

ಕಡಿಮೆ ಸಾಧನೆ ಮಾಡಿದ ಇಲಾಖೆಗಳು

ತೋಟಗಾರಿಕೆ, ಸಾರಿಗೆ, ಅರಣ್ಯ, ಸಹಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಾರ್ತಾ, ಯುವ ಸಬಲೀಕರಣ, ಪ್ರಾಥಮಿಕ– ಪ್ರೌಢ ಶಿಕ್ಷಣ, ಲೋಕೋಪಯೋಗಿ, ಸಣ್ಣ ನೀರಾವರಿ, ಕಾರ್ಮಿಕ, ಕೌಶಲಾಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ, ಕಾನೂನು ಇಲಾಖೆ.

ಹೊಸ ಯೋಜನೆ

l 25ಕ್ಕೂ ಹೆಚ್ಚಿನ ಅಶ್ವಶಕ್ತಿ ಸಾಮರ್ಥ್ಯದ ಟ್ರಾಕ್ಟರ್ ಕೊಳ್ಳಲು ₹3 ಲಕ್ಷ ಸಹಾಯ ಧನ

l ದಾಳಿಂಬೆ, ದ್ರಾಕ್ಷಿ ಬೆಳೆಗೆ ಪ್ರೋತ್ಸಾಹ ಧನ

l ವಸತಿ ಶಾಲೆಗಳ ಆವರಣದಲ್ಲಿ ಹಣ್ಣಿನ ಗಿಡ ಬೆಳೆಸುವುದು

l ಪಾಲಿಹೌಸ್ ನಿರ್ಮಾಣಕ್ಕೆ 1 ಎಕರೆ ಪ್ರದೇಶಕ್ಕೆ ಮಿತಿಗೊಳಿಸಿ ಶೇ 90ರಷ್ಟು ಸಹಾಯ ಧನ

l ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಶೇ 90ರಷ್ಟು ಸಹಾಯ ಧನ

l ಮೀನು ತಿಂಡಿ ಕ್ಯಾಂಟೀನ್, ಮೀನು ಮಾರಾಟ ಮಳಿಗೆ ಸ್ಥಾಪಿಸಲು ಗರಿಷ್ಠ ₹7 ಲಕ್ಷ ಸಹಾಯ ಧನ

l ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಮೂಲಸೌಕರ್ಯ, ವಸತಿ ಶಾಲೆ, ವಸತಿ ನಿಲಯಗಳಿಗೆ ಕಟ್ಟಡ ನಿರ್ಮಾಣ. ಅಂಗನವಾಡಿ ಕಟ್ಟಡಗಳ ನಿರ್ಮಾಣ

l ಬಡವರ ಬಂಧು ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ತಲಾ ₹10 ಸಾವಿರ ಸಹಾಯ ಧನ

l ನವೋದ್ಯಮ ಸ್ಥಾಪಿಸುವವರಿಗೆ ತಲಾ ₹50 ಲಕ್ಷ ಪ್ರೋತ್ಸಾಹ ಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT