ಗುರುವಾರ , ನವೆಂಬರ್ 14, 2019
18 °C
ಮೂರು ಬ್ರ್ಯಾಂಡೆಡ್‌ ಕಂಪನಿಗಳ ಹೆಸರಲ್ಲಿ ನಕಲಿ ಪತ್ತೆ

ಮಕ್ಕಳಿಗೆ ಶೂ: ನಕಲಿ ಹಾವಳಿ

Published:
Updated:
Prajavani

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿ ತನಕ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ನೀಡುವ ಕಾರ್ಯ ಇದೀಗ ಆರಂಭವಾಗಿದ್ದು, ನಕಲಿ ಹಾವಳಿ ಕಾಣಿಸಿಕೊಂಡಿದೆ.

ಒಟ್ಟು 44.57 ಲಕ್ಷ ವಿದ್ಯಾರ್ಥಿಗಳಿಗೆ ಗುಣಮಟ್ಟದ, ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಬಾಟಾ, ಲಿಬರ್ಟಿ, ಲ್ಯಾನ್ಸರ್‌, ಲಖಾನಿ, ಪ್ಯಾರಗಾನ್‌, ಕರೋನ, ಆ್ಯಕ್ಷನ್‌ ಶೂಗಳನ್ನೇ ವಿತರಿಸಬೇಕು. ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರ್ಯಾಂಡೆಡ್‌, ಕಳಪೆ ಗುಣಮಟ್ಟದ ಶೂ ವಿತರಿಸಿದರೆ ಶಾಲಾ ಮುಖ್ಯ ಶಿಕ್ಷಕರು,  ಬಿಇಒ, ಡಿಡಿಪಿಐ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೇ 6ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಎಚ್ಚರಿಸಲಾಗಿತ್ತು. ಆದರೆ ಲಿಬರ್ಟಿ, ಲ್ಯಾನ್ಸರ್‌ ಮತ್ತು ಲಖಾನಿ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲಿ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

‘ನಕಲಿ ಮಾರಾಟಗಾರರು ಗ್ರಾಹಕರಿಗೆ ಯಾವುದೇ ವ್ಯತ್ಯಾಸ ಗೊತ್ತಾಗದಂತೆ ಬ್ರ್ಯಾಂಡ್‌ ಶೂ ಹೆಸರಿನಲ್ಲೇ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಈಗಲೇ ಎಚ್ಚರಗೊಳ್ಳದಿದ್ದರೆ ಅದೆಷ್ಟೋ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂ ದೊರೆತು ಒಂದೆರಡು ತಿಂಗಳಲ್ಲಿಯೇ ಹಾಳಾಗಿ ಹೋಗುವ ಅಪಾಯ ಇದೆ’ ಎಂದು ಅಸಲಿ ಮತ್ತು ನಕಲಿ ಶೂಗಳ ಕುರಿತು ಮಾಹಿತಿ ನೀಡಿದ ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಕಲಿ ಶೂ ಮಾರಾಟವಾಗುತ್ತಿರುವ ಬಗ್ಗೆ ನಮಗೆ ಇದುವರೆಗೆ ದೂರು ಬಂದಿಲ್ಲ. ನಿರ್ದಿಷ್ಟ ದೂರು ಬಂದರೆ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಕೆ. ಜಿ. ಜಗದೀಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)