ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕಾಡಿನ ಮರಗಳ ಅಧ್ಯಯನ

ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಯೋಜನೆ
Last Updated 1 ಡಿಸೆಂಬರ್ 2018, 19:08 IST
ಅಕ್ಷರ ಗಾತ್ರ

ಶಿರಸಿ: ಜಾಗತಿಕ ತಾಪಮಾನ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡುಗಳು ಹೀರಿಕೊಳ್ಳುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣದ ಬಗ್ಗೆ ಮಹತ್ವದ ವೈಜ್ಞಾನಿಕ ಅಧ್ಯಯನವೊಂದು ಸಿದ್ದಾಪುರ ತಾಲ್ಲೂಕಿನ ನಿಲ್ಕುಂದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ.

ಕೇಂದ್ರ ಸರ್ಕಾರದ ಅಂಗ ಸಂ‌ಸ್ಥೆಯಾಗಿರುವ ಪುಣೆಯ ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ಸೈನ್ಸ್‌’ನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ(ಎನ್‌ಸಿಬಿಎಸ್‌)ದ ಅಡಿಯಲ್ಲಿ ಈ ಅಧ್ಯಯನ ನಡೆಯುತ್ತಿದೆ. ವಿಜ್ಞಾನಿಗಳಾದ ಡಾ.ಮಹೇಶ ಶಂಕರನ್, ಡಾ.ಜಯಶ್ರೀ ರತ್ನಂ ನೇತೃತ್ವದಲ್ಲಿ 30 ವಿಜ್ಞಾನಿಗಳ ತಂಡವು ದೇಶದ ನಾಲ್ಕು ಕಡೆಗಳಲ್ಲಿ ಇಂಥ ಅಧ್ಯಯನ ನಡೆಸುತ್ತಿದ್ದು, ಇದರಲ್ಲಿ ಅತಿ ಹೆಚ್ಚು ಮಳೆ ಬೀಳುವ ನಿಲ್ಕುಂದ ಕೂಡ ಒಂದಾಗಿದೆ.

ಅಧ್ಯಯನದಲ್ಲಿ ಏನೇನು ?: ‘ಕರ್ನಾಟಕದ ಚಿರಾಪುಂಜಿ ಎಂದು ಕರೆಯಲಾಗುವ ನಿಲ್ಕುಂದದ ಮಳೆ ವೈಶಿಷ್ಷ್ಯದಿಂದಾಗಿಯೇ ಈ ಪ್ರದೇಶವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮಾನವ ಹಸ್ತಕ್ಷೇಪ ಅತ್ಯಂತ ಕಡಿಮೆ ಇರುವ ಒಂದು ಹೆಕ್ಟೇರ್‌ ಪ್ಲಾಟ್‌ನಲ್ಲಿ 2011ರಲ್ಲಿಯೇ ಆರಂಭವಾಗಿರುವ ಈ ಅಧ್ಯಯನವು, ಸುದೀರ್ಘ 40 ವರ್ಷಗಳವರೆಗೆ ನಡೆಯುತ್ತದೆ. ಶಿರಸಿ ತಾಲ್ಲೂಕಿನ ಜಾನ್ಮನೆಯಲ್ಲಿ ಎನ್‌ಸಿಬಿಎಸ್‌ ಕ್ಷೇತ್ರ ಕಚೇರಿ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ ಕ್ಷೇತ್ರ ಸಂಯೋಜಕ ರಾಘವೇಂದ್ರ ಎಚ್‌.ವಿ.

‘ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಸ್ವಾಭಾವಿಕ ಕಾಡಿನಲ್ಲಿ ಇರುವ ಹುಲ್ಲು, ಬಳ್ಳಿ, ಗಿಡ–ಮರ ಯಾವುದನ್ನೂ ಕಡಿಯಲು ಅವಕಾಶವಿಲ್ಲ. ಪ್ರತಿ ಋತುವಿನಲ್ಲಿ ಇಲ್ಲಿನ ಸಸ್ಯ ಪ್ರಭೇದಗಳ ವರ್ತನೆ, ಬೆಳವಣಿಗೆ, ಗಾತ್ರ, ತೊಗಟೆಯ ದಪ್ಪದಲ್ಲಾಗುವ ವ್ಯತ್ಯಾಸ, ಎಲೆಗಳಲ್ಲಿ ರಾಸಾಯನಿಕ ಬದಲಾವಣೆ, ಉದುರುವ ಬೀಜಗಳು, ಅವುಗಳಲ್ಲಿ ನೈಸರ್ಗಿಕವಾಗಿ ಮೊಳಕೆಯೊಡೆಯುವ ಮತ್ತು ನಷ್ಟವಾಗುವ ಬೀಜದ ಪ್ರಮಾಣ, ಪ್ರಾಣಿ–ಪಕ್ಷಿಗಳ ಮೂಲಕ ಅವು ತಲುಪುವ ದೂರ, ಉದುರಿದ ಎಲೆಗಳ ತೂಕ, ಬೀಳುವ ಮಳೆ ಭೂಮಿಯಲ್ಲಿ ಇಂಗುವ ಪ್ರಕ್ರಿಯೆ, ಅದಕ್ಕೆ ತಗಲುವ ಸಮಯ... ಹೀಗೆ ಅತ್ಯಂತ ಸಣ್ಣ ಸಂಗತಿಗಳನ್ನು ಸಹ ಪರಿಗಣಿಸಲಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುತೂಹಲಕರ ಸಂಗತಿಗಳು

ಒಣ ಕಾಡು ಮತ್ತು ಇಲ್ಲಿನ ಕಾಡುಗಳಿಗೆ ಹೋಲಿಸಿದಾಗ, ನಿತ್ಯಹರಿದ್ವರ್ಣ ಕಾಡುಗಳಲ್ಲಿ ನಿರಂತರ ಬೆಳವಣಿಗೆ ಉಳಿದುಕೊಂಡಿದೆ. ಒಣ ಕಾಡಿನಲ್ಲಿ ನಕಾರಾತ್ಮಕ ಬೆಳವಣಿಗೆ ಹೆಚ್ಚು ಕಂಡು ಬಂದರೆ, ಅಧಿಕ ಮಳೆ ದಾಖಲಾಗುವ ಇಲ್ಲಿ ಹವಾಮಾನ ಒಂದೇ ರೀತಿಯಾಗಿ ಮುಂದುವರಿದಿದೆ ಎಂಬುದು ಆರು ವರ್ಷಗಳ ಅಧ್ಯಯನದಲ್ಲಿ ಕಂಡು ಬಂದಿರುವ ಸಂಗತಿಗಳು ಎಂದು ರಾಘವೇಂದ್ರ ಹೇಳುತ್ತಾರೆ.

***

ಕಾಡಿನಲ್ಲಿರುವ ಮರಗಳು ಹೀರಿಕೊಳ್ಳುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ, ಕಾಡಿನ ನಾಶದಿಂದ ವಾತಾವರಣದಲ್ಲಿ ಉಳಿದುಕೊಳ್ಳುವ ಇಂಗಾಲದಿಂದ ಹೆಚ್ಚುವ ತಾಪಮಾನದ ಬಗ್ಗೆ ತಿಳಿಯಲು ಅಧ್ಯಯನ ಸಹಕಾರಿಯಾಗಿದೆ
ರಾಘವೇಂದ್ರ ಎಚ್‌.ವಿ
ಕ್ಷೇತ್ರ ಸಂಯೋಜಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT