ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆ| ರಾಜ್ಯದಲ್ಲಿ 3 ದಿನ ನಿಷೇಧಾಜ್ಞೆ: ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

Last Updated 19 ಡಿಸೆಂಬರ್ 2019, 2:03 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಬೆನ್ನಲ್ಲೆ ಗುರುವಾರದಿಂದ (ಡಿ19) ಮೂರು ದಿನಗಳ ಕಾಲ(ಡಿ.21) ನಗರ ಸೇರಿದಂತೆ ರಾಜ್ಯದಲ್ಲಿಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಜ್ಯದೆಲ್ಲೆಡೆ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.ಕಲಬುರ್ಗಿಯಲ್ಲಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.

ಈ ದಿನಗಳಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ವಿಜಯೋತ್ಸವ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತೆ ರೋಕೊ, ರಾಜಕೀಯ ಸಭೆ, ಸಮಾರಂಭಗಳನ್ನು ಆಯೋಜಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.

ಬುಧವಾರ ರಾತ್ರಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ‘ಕಾಯ್ದೆ ಜಾರಿ ವಿರೋಧಿಸಿ ಇದೇ 19 ಮತ್ತು 20ರಂದು ವಿವಿಧ ರಾಜಕೀಯ ಪಕ್ಷಗಳು,ಸಂಘಟನೆಗಳು ಅಖಿಲ ಭಾರತ್‌ಬಂದ್‌ಗೆ ಕರೆಕೊಟ್ಟಿರುವ ಮಾಹಿತಿ ಇದೆ. ನಗರ ಸೂಕ್ಷ್ಮಪ್ರದೇಶವಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಾರದೆಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸಮರ್ಥನೆ ನೀಡಿದರು.

‘ಕೆಲವು ರಾಜಕೀಯ ಮತ್ತು ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಕೆಲವು ಸಾಮಾಜಿಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಇದರಿಂದ ಪ್ರೇರಿತಗೊಂಡು ಕೆಲವು ಸಂಘಟನೆಗಳು ಯಾವುದೇ ಪೂರ್ವಾನುಮತಿ ಪಡೆಯದೆ, ಏಕಾಏಕಿ ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆ ನಡೆಸುವ ನೆಪದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದರು.

‘ಸಂಘಟಕರೇ ಹೊಣೆ’: ‘ಉತ್ತರ ಭಾರತ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸುವುದಾದರೆ ಅಲ್ಲಿಗೆ ಹೋಗಿ ಪ್ರತಿಭಟನೆ ನಡೆಸಿ. ಬೆಂಗಳೂರಿನಲ್ಲಿ ಯಾರಿಗೂ ಪ್ರತಿಭಟನೆ ನಡೆಸಲು ಅವಕಾಶ ನೀಡಿಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಭಾಸ್ಕರ್‌ ರಾವ್‌ ಸೂಚಿಸಿದರು.

‘ಪ್ರತಿಭಟನೆ ನಡೆಸಲು ಅನುಮತಿ ಕೋರಿ ಹಲವು ಸಂಘಟನೆಗಳು ಮನವಿ ಸಲ್ಲಿಸಿವೆ. ಆದರೆ, ಈವರೆಗೂ ಯಾರಿಗೂ ಅನುಮತಿ ನೀಡಿಲ್ಲ. ಎಲ್ಲರ ಮನವಿಗಳನ್ನೂ ಪರಿಶೀಲಿಸಲಾಗುತ್ತಿದೆ. ಹೀಗಿದ್ದೂ ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಪ್ರತಿಭಟನೆಗೆ ಕರೆ ನೀಡಿದ ಸಂಘಟಕರೇ ಹೊಣೆ ಹೊರಬೇಕಾಗುತ್ತದೆ’ ಎಂದರು.

‘ಈಗಾಗಲೇ ಎರಡು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕೆಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಕಾನೂನುಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ’ ಎಂದರು.

‘ಸಾಮಾಜಿಕ ಜಾಲತಾಣಗಳಲ್ಲಿಪ್ರಚೋದನಾಕಾರಿ ಹೇಳಿಕೆ ಪೋಸ್ಟ್ ಮಾಡುವ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಕಣ್ಣಿಡಲಿದ್ದಾರೆ. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿ ಸಂಘಟನೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಇಂದು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ:ಗುರುವಾರಶಾಲಾ ಕಾಲೇಜುಗಳಿಗೆ ರಜೆ ಇಲ್ಲ, ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತಿಳಿಸಿದ್ದಾರೆ.

‘ಮುಂಜಾಗ್ರತಾ ಕ್ರಮ ಕೈಗೊಳ್ಳಿ’:ಪೌರತ್ವ (ತಿದ್ದುಪಡಿ) ಕಾಯಿದೆ ಹಾಗೂ ಎನ್‌ಆರ್‌ಸಿ ವಿಚಾರವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕದಡದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ, ಗುಪ್ತಚರ ದಳ ಎಡಿಜಿಪಿ, ನಗರ ಪೊಲೀಸ್ ಕಮಿಷನರ್‌ ಭಾಸ್ಕರ್ ರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಬುಧವಾರ ಸುದೀರ್ಘ ಸಭೆ ನಡೆಸಿದ ಡಿಜಿಪಿ ಅವರು, ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಡಿಜಿಪಿ ಸೂಚನೆ ಮೇರೆಗೆ ಆಯಾ ವಲಯ ಆಯುಕ್ತರು, ಐಜಿಪಿಗಳು ಹಾಗೂ ಜಿಲ್ಲಾ ಎಸ್‌ಪಿಗಳು ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಯಚೂರಿನಲ್ಲಿ ಬಿಗಿ ಬಂದೋಬಸ್ತ್

ರಾಯಚೂರು:ಜಿಲ್ಲೆಯಲ್ಲಿ ಡಿಸೆಂಬರ್ 21 ರವರೆಗೂ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಂದೋಬಸ್ತ್‌ಗಾಗಿ 3 ಕೆಎಸ್‌ಆರ್‌ಪಿ, 10 ಡಿಎಆರ್, 500ಕಾನ್‌ಸ್ಟೆಬಲ್, 10 ವಿಶೇಷ ಚೆಕ್‌ಪೋಸ್ಟ್‌,40 ಸಬ್‌ ಇನ್‌ಸ್ಪೆಕ್ಟರ್‌,20 ಸಿಪಿಐ, 4 ಡಿವೈಎಸ್‌ಪಿ ಹಾಗೂ ಇಬ್ಬರು ಎಸ್‌ಪಿಗಳನ್ನು ನಿಯೋಜಿಸಲಾಗಿದೆ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ರಾಯಚೂರು, ಮಾನವಿ, ಸಿಂಧನೂರು, ಲಿಂಗಸೂಗೂರು, ಮಸ್ಕಿ, ಸಿರವಾರ, ದೇವದುರ್ಗ ಸೇರಿ ಮುಖ್ಯ ನಗರಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ.

ವಿವಿಧ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

ಬೀದರ್:ಡಿ. 18ರ ಮಧ್ಯರಾತ್ರಿಯಿಂದಡಿ. 21ರ ಮಧ್ಯರಾತ್ರಿ 12ರ ವರೆಗೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದ್ದಾರೆ.

ಚಿತ್ರದುರ್ಗ:ಸಿಪಿಐ ಸೇರಿ ಹಲವು ಸಂಘಟನೆಗಳು ಬಂದ್ ಕರೆ ನೀಡಿರುವುದರಿಂದ ನಿಷೇಧಾಜ್ಞೆ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಬೆಳಗಾವಿ:ಡಿ. 18ರ ರಾತ್ರಿ 10ರಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ.21ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ:ಡಿ.19ರ ಬೆಳಿಗ್ಗೆ 6 ರಿಂದ ಡಿ.21ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ:ಡಿ.19ರ ಬೆಳಿಗ್ಗೆ 6 ರಿಂದ ಡಿ.21ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಹಾವೇರಿ:ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಡಿ.18ರ ರಾತ್ರಿ 9ರಿಂದ ಡಿ.21ರ ರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.ಅನಧಿಕೃತ ಮೆರವಣಿಗೆ, ಸಭೆ, ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದ್ದಾರೆ.

ಕಾರವಾರ:ಡಿ.19ರ ಬೆಳಿಗ್ಗೆ 6ರಿಂದ 21ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಾವಣಗೆರೆ:ಡಿ.18ರ ರಾತ್ರಿ 8ರಿಂದ ಡಿ.21ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ಜಾರಿ ಖಚಿತ: ಬಿಎಸ್‌ವೈ

‌ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಪ್ರವಾಸೋದ್ಯಮ ನೀತಿ ಕುರಿತ ಕಾರ್ಯಾಗಾರಕ್ಕೆ ಮೊದಲು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಯ್ದೆ ಅನುಷ್ಠಾನಕ್ಕೆ ಯಾವುದೇ ರೀತಿಯ ವಿರೋಧ ಬಂದರೂ, ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT