ಭಾನುವಾರ, ಜನವರಿ 26, 2020
31 °C
ಬಡತನದಲ್ಲಿ ಅರಳಿದ ಮೂಡಲಗಿಯ ಪ್ರತಿಭೆ

'ಮಿಂಚಿನ ಓಟ'ದ ರೇಖಾ ಫಿರೋಜಿ 

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ಛಲ, ಉತ್ಸಾಹವಿದ್ದರೆ ಏನನ್ನು ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಮೂಡಲಗಿಯ ರೇಖಾ ಫಿರೋಜಿ ಉತ್ತಮ ಉದಾಹರಣೆಯಾಗಿದ್ದಾರೆ. ಬಡ ಕುಟುಂಬದ ಈ ಬಾಲೆ 4 ವರ್ಷಗಳಿಂದ ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡುತ್ತಿದ್ದಾರೆ. ಹೋದಲೆಲ್ಲಾ ಪ್ರಶಸ್ತಿ, ಪದಕಗಳನ್ನು ಗೆಲ್ಲುತ್ತಿದ್ದಾರೆ.

ಇಲ್ಲಿನ ಉಮಾಬಾಯಿಸ್ವಾಮಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಅವರು ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ 1,500 ಮೀಟರ್‌ ಮತ್ತು 3000 ಮೀಟರ್‌ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ 1500 ಓಟದಲ್ಲಿ 6ನೇ ಸ್ಥಾನ ಗಳಿಸಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

2016ರಲ್ಲಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಓಟದಲ್ಲಿ ಛಾಪು ಮೂಡಿಸಿದ್ದರು. 600 ಮೀ. ಮತ್ತು 200 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದರು. ಇಲಾಖೆಯಿಂದ ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.

ಓದಿನಲ್ಲೂ ಮುಂದಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದಾರೆ. ತಂದೆ ಬಸಪ್ಪ ಮತ್ತು ತಾಯಿ ಮಹಾದೇವಿ ಕೂಲಿ ಮಾಡಿಕೊಂಡು ಕಷ್ಟದಲ್ಲಿದ್ದರೂ ಪುತ್ರ ಸಾಧನೆಗೆ ಪ್ರೋತ್ಸಾಹಿಸುತ್ತಿದ್ದಾರೆ.

ಸಾಧನೆ: 2018ರಲ್ಲಿ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನ 400 ಮೀ. ಮತ್ತು 3000 ಮೀ. ಓಟದಲ್ಲಿ 4ನೇ ಸ್ಥಾನ, ಹವ್ಯಾಸಿ ಸಂಸ್ಥೆಯಿಂದ ನಡೆಯುವ ರಾಜ್ಯ ಮಟ್ಟದ ಕ್ರಾಸ್‌ಕಂಟ್ರಿ ಓಟದಲ್ಲಿ 2ನೇ ಸ್ಥಾನ, ಉತ್ತರಪ್ರದೇಶ ಮಥುರಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರಾಸ್‌ಕಂಟ್ರಿ ಓಟದಲ್ಲಿ 14ನೇ ಸ್ಥಾನ ಪಡೆದಿದ್ದಾರೆ. ಸತೀಶ ಆವಾರ್ಡ್ಸ್‌ನಲ್ಲಿ ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ, ₹ 10ಸಾವಿರ ನಗದು ಬಹುಮಾನ ಗೆದ್ದಿದ್ದಾರೆ.

ಇದೇ ವರ್ಷ ಮೈಸೂರು ದಸರಾದಲ್ಲಿ 5000 ಮೀ. ಓಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸಿದ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ 400 ಮೀ, 1500 ಮೀ. ಮತ್ತು 3000ಮೀ. ಓಟಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ‘ಮಿಂಚಿನ ಓಟದ ಹುಡುಗಿ’ ಎಂದು ಗುರುತಿಸಿಕೊಂಡಿದ್ದಾರೆ. ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

‘ಇದಕ್ಕೆಲ್ಲವೂ ಅವರ ಪರಿಶ್ರಮ ಕಾರಣವಾಗಿದೆ’ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಉಮೇಶ ಪೂಜೇರಿ ಮತ್ತು ಪಿ.ಐ. ಅನವಾಲ.

‘ನಾನು ದಿನಾ ಪ್ರ್ಯಾಕ್ಟೀಸ್‌ ತಪ್ಪಸಾಂಗಿಲ್ಲರ್ರೀ... ಮುಂಜಾನೆ ಮತ್ತು ಸಂಜಿಗೆ ಎರಡೂ ಹೊತ್ತ ತಪ್ಪದ ಓಡತ್ತನರ್ರೀ... ವಾರದಾಗ ಎರಡ ಸಲ 10 ಕಿ.ಮೀ. ರಸ್ತೆದಾಗ ಓಡತ್ತಿನರ್ರೀ ಇದರಿಂದ ದಣಿವಾಗಾಂಗಿಲ್ಲರ್ರೀ ಮತ್ತ ಕಾಲು ನೋವು ಬರಾಂಗಿಲ್ಲರ್ರೀ’ ಎನ್ನುತ್ತಾರೆ ರೇಖಾ.

ಪ್ರೋತ್ಸಾಹ: ರೇಖಾ ಸಾಧನೆಯ ಹಿಂದೆ ಉಮಾಬಾಯಿ ಶಾಲೆ ಅಧ್ಯಕ್ಷ ಶ್ರೀಪಾದಬೋಧ ಸ್ವಾಮೀಜಿ ಅವರ ಅನನ್ಯ ಪ್ರೋತ್ಸಾಹವಿದೆ. ಉಚಿತ ಶಿಕ್ಷಣ ಕಲ್ಪಿಸುವ ಜೊತೆಗೆ ಪೌಷ್ಟಿಕ ಆಹಾರ, ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರಯಾಣ ಮತ್ತು ಇತರ ವೆಚ್ಚ ನೋಡಿಕೊಂಡಿದ್ದಾರೆ. ಬಿಇಒ ಅಜಿತ್ ಮನ್ನಿಕೇರಿ, ಸ್ಥಳೀಯ ಸಂಘ, ಸಂಸ್ಥೆಯವರು ಗೌರವಿಸಿ ಸಹಾಯ ಮಾಡಿದ್ದಾರೆ.

‘ಮುಂದ ಒಲಿಂಪಿಕ್ಸ್‌ನಾಗ ಓಡಿ ಪದಕ ಗೆಲ್ಲಬೇಕಂತ ಮಾಡೇನ್ರಿ’ ಎಂದು ರೇಖಾ ಹೇಳಿದರು. ಸಂಪರ್ಕಕ್ಕೆ ಮೊ: 7353517452 (ತಂದೆ ಬಸಪ್ಪ ಫಿರೋಜಿ).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು