ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಕ್ಷೇತ್ರವೂ ಜೆಡಿಎಸ್‌ಗೆ? ರಾಹುಲ್ ಮುಂದೆ ಪ್ರಸ್ತಾವವಿಟ್ಟ ಕುಮಾರಸ್ವಾಮಿ

Last Updated 13 ಅಕ್ಟೋಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳೇ ಇಲ್ಲದೆ ಪರಿತಪಿಸುತ್ತಿರುವ ಕಾಂಗ್ರೆಸ್‌, ಈ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವ ಚಿಂತನೆ ನಡೆಸಿದೆ.

ಶನಿವಾರಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜತೆ ರಾಜ್ಯ ನಾಯಕರು ನಡೆಸಿದ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪವಾಗಿದೆ. ಬಿಜೆಪಿಯನ್ನು ಸೋಲಿಸಲು ಯಾವ ಕ್ಷೇತ್ರದಲ್ಲಿ ಏನು ಸಿದ್ಧತೆ ನಡೆದಿದೆ ಎಂದು ರಾಹುಲ್ ಸಭೆಯಲ್ಲಿ ಪ್ರಶ್ನಿಸಿದರು. ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಬಳ್ಳಾರಿ ಲೋಕಸಭೆ, ಜಮಖಂಡಿ ವಿಧಾನಸಭೆಯಲ್ಲಿ ಬಿಜೆಪಿ ಸೋಲಿಸಲು ಮಿತ್ರ ಪಕ್ಷದ ನೆರವು ಕೋರಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಠಿಣವಾಗಿದೆ ಎಂದು ರಾಜ್ಯ ನಾಯಕರು ಹೇಳಿದರು.

ಇದಾದ ಬಳಿಕ ರಾಹುಲ್ ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ‘ಶಿವಮೊಗ್ಗ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವುದಾದರೆ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧ’ ಎಂದು ಹೇಳಿದರು. ರಾಜ್ಯ ನಾಯಕರ ಜತೆ ಚರ್ಚಿಸಿ ಎಂದು ರಾಹುಲ್ ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.

ಶಿವಮೊಗ್ಗ ಕಗ್ಗಂಟು: ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಗೋಡು ತಿಮ್ಮಪ್ಪ ಹಾಗೂ ಕಿಮ್ಮನೆ ರತ್ನಾಕರ ತಯಾ
ರಿಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಇಂತಹ ಹೊತ್ತಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಬಿಜೆಪಿಯ ಬಲದ ಎದುರು ಗೆಲುವು ಕಷ್ಟ ಎಂಬುದು ಕಾಂಗ್ರೆಸ್‌ ನಾಯಕರ ತರ್ಕ.

ವೇಣುಗೋಪಾಲ್ ಜತೆ ರಾಜ್ಯ ನಾಯಕರು ನಡೆಸಿದ ಪ್ರತ್ಯೇಕ ಸಮಾಲೋಚನೆ ವೇಳೆ ಈ ಕುರಿತು ಗಂಭೀರ ಚರ್ಚೆ ನಡೆದಿದೆ. ಕಾಂಗ್ರೆಸ್‌ ಅಭ್ಯರ್ಥಿಯನ್ನು ಇಳಿಸಿ ಸೋತರೆ ಮುಜುಗರ ಅನುಭವಿಸಬೇಕಾಗುತ್ತದೆ. ಅದರ ಬದಲು ಜೆಡಿಎಸ್‌ಗೆ ಬಿಟ್ಟುಕೊಡುವುದೇ ಸೂಕ್ತ ಎಂಬ ಸಲಹೆಯೂ ಬಂದಿತು ಎಂದೂ ಮೂಲಗಳು ಹೇಳಿವೆ.

ಚಂದ್ರಶೇಖರ್ ರಾಮನಗರಕ್ಕೆ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಪಕ್ಷಕ್ಕೆ ಬಂದಿರುವ ಎಲ್. ಚಂದ್ರಶೇಖರ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ಇವರು, ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ ಸಿ.ಎಂ. ಲಿಂಗಪ್ಪ ಪುತ್ರ.

ನಿಗಮ–ಮಂಡಳಿ ನೇಮಕ ಸದ್ಯಕ್ಕಿಲ್ಲ:ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ, ನಿರ್ದೇಶಕ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ಸದ್ಯಕ್ಕಿಲ್ಲ. ರಾಹುಲ್ ಭೇಟಿ ವೇಳೆ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಶಾಸಕರೂ ಸೇರಿದಂತೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಈ ಸ್ಥಾನಗಳಿಗೆ ನೇಮಿಸಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ‘ಉಪ ಚುನಾವಣೆ ಮುಗಿಯುವವರೆಗೂ ನೇಮಕಾತಿ ಬೇಡ’ ಎಂದು ರಾಹುಲ್ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಮಧು ಬಂಗಾರಪ್ಪ ಕಣಕ್ಕೆ: ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸುವುದು ಮುಖ್ಯಮಂತ್ರಿ ಆಲೋಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT