ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ: ರಸ್ತೆಯಲ್ಲಿ ಸಿಲುಕಿದ ನೂರಾರು ವಾಹನಗಳು

7

ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ: ರಸ್ತೆಯಲ್ಲಿ ಸಿಲುಕಿದ ನೂರಾರು ವಾಹನಗಳು

Published:
Updated:

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಮಾರ್ಗದಲ್ಲಿ ಸಕಲೇಶಪುರ ಸಮೀಪದ ಮಾರನಹಳ್ಳಿ ಬಳಿ ಮಂಗಳವಾರ ಬೆಳಗ್ಗಿನ ಜಾವ ಮತ್ತೆ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದೆ. ನೂರಾರು ವಾಹನಗಳು ಈ ಮಾರ್ಗದಲ್ಲಿ ಸಿಲುಕಿಕೊಂಡಿವೆ.

ಸೋಮವಾರ ರಾತ್ರಿ 10 ಗಂಟೆಗೆ ಮಂಗಳೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಬಸ್ಸುಗಳು ಇನ್ನೂ ಸಕಲೇಶಪುರ ತಲುಪಿಲ್ಲ. ಹಾಸನ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ವಾಹನಗಳಿಗೂ ಅಡ್ಡಿಯಾಗಿದೆ ಎಂದು ಬಸ್‌ನಲ್ಲಿರುವ ಪ್ರಯಾಣಿಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

'ಸಕಲೇಶಪುರ ಸಮೀಪದ ಮಾರನಹಳ್ಳಿ ಬಳಿ ಎರಡು ಕಡೆ ಬೆಳಗ್ಗಿನ ಜಾವ 3.30ರ ಸುಮಾರಿಗೆ ಗುಡ್ಡ ಕುಸಿದು ರಸ್ತೆ ಮೇಲೆ‌ ಬಿದ್ದಿದೆ. ಮಣ್ಣು ತೆರವು ಮಾಡಲು ಬೆಳಿಗ್ಗೆ 5 ಗಂಟೆಗೆ ತಂಡವೊಂದನ್ನು ರವಾನಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ' ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸುಬ್ಬರಾಮ ಹೊಳ್ಳ ತಿಳಿಸಿದರು.

ಗುಂಡ್ಯ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಗುಂಡ್ಯ ಹೊಳೆಯಲ್ಲಿ ಪ್ರವಾಹ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಮೇಲೆ‌ ನೀರು ಬಂದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಾರ್ಗಮಧ್ಯದಲ್ಲಿ ಇನ್ನೂ ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
**
ಮಂಗಳೂರು: ಘಟ್ಟ ಪ್ರದೇಶದ ಸುಬ್ರಹ್ಮಣ್ಯ ರಸ್ತೆ– ಸಕಲೇಶಪುರ ನಡುವಿನಲ್ಲಿ ರೈಲ್ವೆ ಹಳಿ ಮೇಲೆ ಸೋಮವಾರ ತಡರಾತ್ರಿಯ ಬಳಿಕ ಬೆಳಗ್ಗಿನ ಜಾವ ಭೂಕುಸಿತ ಸಂಭವಿಸುತ್ತಿದ್ದು, ಹಾಸನ– ಮಂಗಳೂರು ನಡುವಿನ ರೈಲು ಸಂಚಾರ ರದ್ದು ಮಾಡಲಾಗಿದೆ.

ಕಾರವಾರ– ಮಂಗಳೂರು ಜಂಕ್ಷನ್‌– ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಮಂಗಳೂರಿನಿಂದ ಯಶವಂತಪುರಕ್ಕೆ ಈ ರೈಲು ಸಂಚರಿಸುವುದಿಲ್ಲ. ಯಶವಂತಪುರ– ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಹಾಸನದಿಂದ ಮಂಗಳೂರುವರೆಗೆ ರದ್ದು ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರು– ಕಣ್ಣೂರು ರೈಲು ತಡರಾತ್ರಿ 1.30ಕ್ಕೆ ಹಾಸನ ತಲುಪಿತ್ತು. ಅದನ್ನು ಅಲ್ಲಿಯೇ ತಡೆ ಹಿಡಿದಿದ್ದು, ಹಾಸನ– ಮಂಗಳೂರು ನಡುವಿನ ಪ್ರಯಾಣ ರದ್ದುಗೊಂಡಿದೆ. ಶ್ರವಣಬೆಳಗೊಳ ಮಾರ್ಗವಾಗಿ ಕಣ್ಣೂರು– ಮಂಗಳೂರು ಸೆಂಟ್ರಲ್‌– ಬೆಂಗಳೂರು ನಡುವೆ ಸಂಚರಿಸುವ ರೈಲು ತಡರಾತ್ರಿ 2.05ಕ್ಕೆ ಶಿರಿಬಾಗಿಲು ತಲುಪಿತ್ತು. ಬೆಂಗಳೂರು ಕಡೆಗಿನ ‍ಪ್ರಯಾಣವನ್ನು ರದ್ದುಗೊಳಿಸಿದ್ದು, ರೈಲು ಮಂಗಳೂರಿಗೆ ಹಿಂದಿರುಗಿದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !