ಸೋಮವಾರ, ಮಾರ್ಚ್ 1, 2021
30 °C
ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ, ಪರಿಸರಕ್ಕೆ ತೊಂದರೆ ಆಗದಂತೆ ಕಾಮಗಾರಿ, ಯೋಜನಾ ವರದಿ ಸಿದ್ಧವಿದ್ದರೂ ಶುರುವಾಗದ ಕಾಮಗಾರಿ

ಶಿರಾಡಿ ಸುರಂಗ ಮಾರ್ಗಕ್ಕೆ ಹೆಚ್ಚಿದ ಒತ್ತಡ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಮಂಗಳೂರು: ಈ ಬಾರಿ ಸುರಿದ ಮಳೆ ಕರಾವಳಿ ಭಾಗಕ್ಕೆ ಹೊಸತೊಂದು ಪಾಠವನ್ನು ಕಲಿಸಿದೆ. ಈ ವರ್ಷ ಬೆಂಗಳೂರಿನ ಜತೆಗೆ ಸಂಪರ್ಕ ಸಾಧಿಸಲು 10 ತಿಂಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸರಕು ಸಾಗಣೆಯಂತೂ ಬಹುತೇಕ ಸ್ಥಗಿತಗೊಂಡಿತ್ತು. ಇದರ ಪರಿಣಾಮ ಶಿರಾಡಿ ಸುರಂಗ ಮಾರ್ಗ ನಿರ್ಮಾಣ ಮತ್ತೆ ಮುನ್ನೆಲೆಗೆ ಬಂದಿದೆ.

ಚಾರ್ಮಾಡಿ ಹಾಗೂ ಆಗುಂಬೆ ಘಾಟಿಯ ಮೂಲಕ ಸರಕು ಸಾಗಣೆ ಪ್ರಯಾಸಕರವಾಗಿದೆ. ಬೆಂಗಳೂರಿನಿಂದ ಸರಕುಗಳನ್ನು ಹೊತ್ತ ಲಾರಿಗಳು ಮಂಗಳೂರನ್ನು ತಲುಪಲು ಹರಸಾಹಸ ಮಾಡುವಂತಾಗಿದೆ. ಇದರ ನೇರ ಪರಿಣಾಮ ನಗರದಲ್ಲಿ ಇರುವ ನವಮಂಗಳೂರು ಬಂದರಿನ ವಹಿವಾಟಿನ ಮೇಲೆ ಆಗುತ್ತಿದೆ.

ರಸ್ತೆ ಸಂಪರ್ಕ ಸರಿಯಾಗಿ ಇಲ್ಲದೇ ಇರುವುದರಿಂದ ಬೆಂಗಳೂರಿನ ಉದ್ಯಮಿಗಳು ತಮ್ಮ ಸರಕನ್ನು ರಫ್ತು ಮಾಡಲು ಚೆನ್ನೈ ಬಂದರನ್ನು ಅವಲಂಬಿಸಿದ್ದಾರೆ. ನವಮಂಗಳೂರು ಬಂದರು, ಬೆಂಗಳೂರಿನ ಉದ್ಯಮಿಗಳಿಗೆ ದೂರದ ಬೆಟ್ಟವಾಗಿ ಪರಿಣಮಿಸಿದೆ.

ಸರಕಿನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎನ್‌ಎಂಪಿಟಿಯ ಅಧ್ಯಕ್ಷ ಟಿ. ಕೃಷ್ಣಬಾಬು ಅವರು ತಜ್ಞರ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಹಾಸನ, ಬೆಂಗಳೂರು ಸೇರಿದಂತೆ ವಿವಿಧೆಡೆ ತೆರಳಿ, ಉದ್ಯಮಿಗಳ ಜತೆಗೆ ಮಾತುಕತೆ ನಡೆಸಿದೆ. ಈ ಸಂದರ್ಭದಲ್ಲಿ ಬಹುತೇಕ ಉದ್ಯಮಿಗಳು ರಸ್ತೆ ಸಂಪರ್ಕದ ಕೊರತೆಯನ್ನೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

‘ಈ ವರ್ಷವಂತೂ ಬಹುತೇಕ ಶಿರಾಡಿ ಘಾಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧವಾಗಿತ್ತು. ಸದ್ಯಕ್ಕೆ ಲಾರಿಗಳ ಓಡಾಟ ಶುರುವಾಗಿದ್ದರೂ, ನಿಗದಿತ ಸಮಯದಲ್ಲಿ ಮಂಗಳೂರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎನ್‌ಎಂಪಿಟಿ ಮೂಲಕ ಸರಕುಗಳನ್ನು ಸಾಗಿಸಲು ಬಹುತೇಕ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪಿ.ಬಿ. ಅಬ್ದುಲ್‌ ಹಮೀದ್‌ ಹೇಳುತ್ತಾರೆ.

ಸುರಂಗ ಮಾರ್ಗ ನಿರ್ಮಾಣದಿಂದ ಸರಕು ಸಾಗಣೆ ವಾಹನಗಳಿಗೆ ಪ್ರತ್ಯೇಕ ಹೆದ್ದಾರಿ ದೊರೆಯಲಿದ್ದು, ಈಗಿರುವ ಶಿರಾಡಿ ಘಾಟಿ ರಸ್ತೆಯ ಮೂಲಕ ಪ್ರಯಾಣಿಕ ವಾಹನಗಳೂ ನಿರಾತಂಕವಾಗಿ ಸಂಚರಿಸಬಹುದು. ಈಗಿರುವ ಅಡುಗೆ ಅನಿಲ ಟ್ಯಾಂಕರ್‌ಗಳ ಓಡಾಟ ಕಡಿಮೆ ಆಗುವುದರಿಂದ ಅಪಘಾತಗಳ ಸಂಖ್ಯೆಯೂ ಕಡಿಮೆ ಆಗಲಿದೆ ಎಂದು ಕೆನರಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.


ಉದ್ದೇಶಿತ ಸುರಂಗ ಮಾರ್ಗ ನಿರ್ಮಾಣವಾಗಲಿರುವ ಶಿರಾಡಿ ಘಾಟಿ ಪ್ರದೇಶ. ಪ್ರಜಾವಾಣಿ ಚಿತ್ರ

‘ಪೈಪೋಟಿ ಸಾಧ್ಯವಾಗುತ್ತಿಲ್ಲ’

ಮಂಗಳೂರಿನಲ್ಲಿ ರಾಜ್ಯದ ಬೃಹತ್‌ ಬಂದರಿದ್ದರೂ ಚೆನ್ನೈ ಬಂದರಿನ ಜತೆಗೆ ಪೈಪೋಟಿ ನಡೆಸುವುದು ಸಾಧ್ಯವಾಗುತ್ತಿಲ್ಲ. ರಸ್ತೆ ಸಂಪರ್ಕ ಸರಿಯಾಗಿ ಇಲ್ಲದೇ ಇರುವುದರಿಂದ ಬೆಂಗಳೂರಿನ ಬಹುತೇಕ ಉದ್ಯಮಿಗಳು ಚೆನ್ನೈ ಬಂದರಿನ ಮೂಲಕ ರಫ್ತು ಮಾಡುತ್ತಿದ್ದಾರೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ತಿಳಿಸಿದ್ದಾರೆ.

ಇದಕ್ಕೆ ಶಿರಾಡಿ ಘಾಟಿ ಸುರಂಗ ಮಾರ್ಗ ನಿರ್ಮಾಣ ಅವಶ್ಯವಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಎಫ್‌ಕೆಸಿಸಿಐ ಮನವಿ ಮಾಡಲಿದ್ದು, ಕೆನರಾ ವಾಣಿಜ್ಯೋದ್ಯಮ ಸಂಸ್ಥೆಯ ಜತೆಗೂಡಿ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

* ಶಿರಾಡಿ ಘಾಟಿ ಸುರಂಗ ಮಾರ್ಗ ನಿರ್ಮಾಣ ಬಹುದಿನದ ಬೇಡಿಕೆಯಾಗಿದೆ. ಈ ವರ್ಷ ಸುರಿದ ಮಳೆಯಿಂದ ಸುರಂಗ ಮಾರ್ಗದ ಅವಶ್ಯಕತೆ ಮತ್ತಷ್ಟು ಹೆಚ್ಚಾಗಿದೆ.
-ಪಿ.ಬಿ. ಅಬ್ದುಲ್‌ ಹಮೀದ್‌, ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ

ಮುಖ್ಯಾಂಶಗಳು
* ಈ ವರ್ಷ 10 ತಿಂಗಳ ಬಂದ್‌ ಆಗಿದ್ದ ಶಿರಾಡಿ ಘಾಟಿ ರಸ್ತೆ
* ಆಗುಂಬೆ, ಚಾರ್ಮಾಡಿ ಘಾಟಿಯಲ್ಲಿ ಸರಕು ಸಾಗಣೆ ಕಷ್ಟಕರ
* ಕರಾವಳಿ ಭಾಗದ ಸುಧಾರಣೆಗೆ ಸುರಂಗ ಮಾರ್ಗ ರಹದಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು