ನಡೆದಾಡುವ ದೇವರಿಗೆ ರಾಯಚೂರಿನಲ್ಲಿ ‘ಗುರುವಂದನೆ’

7

ನಡೆದಾಡುವ ದೇವರಿಗೆ ರಾಯಚೂರಿನಲ್ಲಿ ‘ಗುರುವಂದನೆ’

Published:
Updated:

ರಾಯಚೂರು: ಶತಾಯುಷ ಪೂರ್ಣಗೊಳಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ 2009ರ ಆಗಸ್ಟ್‌ 3 ರಂದು ರಾಯಚೂರಿನಲ್ಲಿ ಭಕ್ತ ಸಮೂಹವು ಭವ್ಯ ಸಮಾರಂಭ ಏರ್ಪಡಿಸಿ ಗುರುವಂದನೆ ಸಲ್ಲಿಸಿತ್ತು.

ಮಠದ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ, ಬದುಕು ರೂಪಿಸಿಕೊಂಡಿದ್ದ ಶಿಷ್ಯವರ್ಗ. ಸ್ವಾಮೀಜಿಗಳ ಆಶೀರ್ವಾದ ಪಡೆದು ಬದುಕು ಪರಿವರ್ತನೆ ಮಾಡಿಕೊಂಡಿದ್ದ ಭಕ್ತ ಸಮೂಹ ಹಾಗೂ ಲಿಂಗ ಪೂಜೆ, ಬಸವಣ್ಣನ ಮೌಲ್ಯಗಳನ್ನು ಆಚರಣೆಗೆ ತಂದು ತ್ರಿವಿಧ ದಾಸೋಹಿ ಎನಿಸಿದ ಸ್ವಾಮೀಜಿಯ ದರ್ಶನ ಪಡೆದು ಪುನೀತರಾಗಬೇಕೆನ್ನುವ ಜನರು ಅಂದು ನೆರೆದಿದ್ದರು.

ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣವು ಸಾವಿರಾರು ಜನರಿಂದ ತುಂಬಿಹೋಗಿತ್ತು. ಜಿಲ್ಲಾ ವೀರಶೈವ ಸಮಾಜದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರತಿಯೊಂದು ಸಮಾಜದ ಜನರು, ಶಿಷ್ಯರು ನೆರೆದು ಗುರುವಿಗೆ ನಮಿಸಿದ್ದರು. ಆ ದಿನಗಳನ್ನು ಈಗ ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ.

ಅಂದು ನಡೆದ ಸಮಾರಂಭದಲ್ಲಿ  ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು, ಗುರುವಂದನೆ ಮಾತುಗಳನ್ನಾಡಿದ್ದರು. ರಾಜಕೀಯ ಮುಖಂಡರು, ಸಮಾಜದ ಮುಖಂಡರು ಸಹ ನುಡಿನಮನ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದರು.

ಪ್ರೊ. ಶಿವಬಸಪ್ಪ ಮಾಲಿಪಾಟೀಲ ಅವರು ಗುರುವಂದನಾ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಸಮಾರಂಭ ಆಯೋಜನೆಯಲ್ಲಿ ಒಬ್ಬರಾಗಿದ್ದ ವೀರಶೈವ ಸಮಾಜದ ಮುಖಂಡ ಶರಣಬಸಪ್ಪ ಅರಳಿ ಅವರು ಹೇಳುವಂತೆ, ‘ಶ್ರೀಗಳಿಗೆ ಗುರುವಂದನೆ ಸಲ್ಲಿಸುವ ಅವಕಾಶ ಒದಗಿ ಬಂದಿದ್ದು ನಮ್ಮ ಸುದೈವವಾಗಿತ್ತು. 21ನೇ ಶತಮಾನದ ನಡೆದಾಡುವ ದೇವರು ಅವರಾಗಿದ್ದರು. ಯಾವುದೇ ಜಾತಿ ಬೇಧ ನೋಡದೆ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಪ್ರತಿವರ್ಷ ಪ್ರವೇಶಾತಿ ಪ್ರಕ್ರಿಯೆಯನ್ನು ಖುದ್ದಾಗಿ ನಡೆಸುತ್ತಿದ್ದ ರೀತಿ ನಿಜಕ್ಕೂ ಪವಾಡ’ ಎಂದರು.

‘ಅವರನ್ನು ದೈಹಿಕವಾಗಿ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ಮಠದಲ್ಲಿ ನಡೆಸಿದ ತ್ರಿವಿಧ ದಾಸೋಹ ಅಜರಾಮರ. ಅವರು ಮಾಡಿರುವ ಪವಾಡ ಇದಾಗಿದೆ’ ಎಂದು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !