ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ನೀರಿನ ಸುಗ್ಗಿ, ಸಿದ್ದನೂರು ರೈತರ ಆದಾಯ ವೃದ್ಧಿ!

Last Updated 20 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಕೇಂದ್ರದಿಂದ 17 ಕಿ.ಮೀ. ದೂರವಿರುವ ಸಿದ್ದನೂರು ಗ್ರಾಮದ ರೈತರು 5 ವರ್ಷಗಳ ಹಿಂದೆ ಜೀವನೋಪಾಯಕ್ಕೆ ಮಳೆಯನ್ನೇ ಆಶ್ರಯಿಸಬೇಕಿತ್ತು. ಏರು ತಗ್ಗಿನ ಭೂಮಿಯನ್ನು ಹೊಂದಿದ್ದ ಈ ಗ್ರಾಮದಲ್ಲಿ ವ್ಯವಸಾಯ ಮಾಡುವುದೇ ಕಷ್ಟವಾಗಿತ್ತು. ಆದರೆ ಈಗ ಎಲ್ಲೆಲ್ಲೂ ನೀರಿನ ಸುಗ್ಗಿ.

ಕೊಳವೆಬಾವಿಗಳು ಮರುಪೂರಣಗೊಂಡಿವೆ. ಕೃಷಿ ಹೊಂಡಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಏಕಬೆಳೆಯನ್ನು ಬೆಳೆಯುತ್ತಿದ್ದ ರೈತರು ಈಗ ಮಿಶ್ರಬೆಳೆಯನ್ನು ಬೆಳೆಯುತ್ತಿದ್ದಾರೆ. ದಾವಣಗೆರೆಯ ಐ.ಸಿ.ಎ.ಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಅನುಷ್ಠಾನಗೊಳಿಸಿರುವ ‘ನಿಕ್ರಾ’ ಯೋಜನೆಯ ಫಲ ಇದು.

ಕೃಷಿ, ಪಶು ಸಂಗೋಪನೆ, ತೋಟಗಾರಿಕೆ ಇಲಾಖೆಗಳ ಯೋಜನೆಗಳನ್ನು ಈ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಅನುಷ್ಠಾನಗೊಳಿಸುತ್ತಿವೆ. 205 ಕುಟುಂಬಗಳು ಇರುವ ಈ ಗ್ರಾಮದಲ್ಲಿ ಬಾಳೆ, ದಾಳಿಂಬೆ, ಅಡಿಕೆ, ಸೌತೆಕಾಯಿ, ಟೊಮೆಟೊ ಮತ್ತಿತರ ತರಕಾರಿ ಬೆಳೆಯನ್ನು ಬೆಳೆಯುತ್ತಿದ್ದು, ಈ ಮೂಲಕಕೆಲವು ರೈತರ ಆದಾಯ ದುಪ್ಪಟ್ಟು ಆಗಿದೆ.

ನಾಲ್ಕು ವಿಭಾಗಗಳಲ್ಲಿ ಕೆಲಸ: ‘ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ, ಬೆಳೆ ಉತ್ಪಾದನೆ, ಪಶು ಸಂಗೋಪನೆ, ಸಾಂಸ್ಥಿಕ ಮಧ್ಯಸ್ಥಿಕೆ ಈ ನಾಲ್ಕು ವಿಭಾಗಗಳ ಮೂಲಕ ನಿಕ್ರಾ ಯೋಜನೆಯನ್ನು ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗಿದೆ’ ಎನ್ನುತ್ತಾರೆ ಕೇಂದ್ರದ ವಿಷಯ ತಜ್ಞ ಮಲ್ಲಿಕಾರ್ಜುನ್ ಬಿ.ಒ.

‘ಸ್ವಾಭಾವಿಕ ಸಂಪನ್ಮೂಲ ನಿರ್ವಹಣೆ ಯಲ್ಲಿ ಕೃಷಿ ಹೊಂಡಗಳ ನಿರ್ಮಾಣ, ಚೆಕ್‌ ಡ್ಯಾಂಗಳ ಪುನಶ್ಚೇತನ, ಕಂದಕ ಬದುಗಳ ನಿರ್ಮಾಣ, ಕೃಷಿ ಅರಣ್ಯ ನಿರ್ಮಿಸಿದೆವು. ಆ ಊರಿನಲ್ಲಿ ಚೆಕ್‌ ಡ್ಯಾಂಗಳಲ್ಲಿ ನೀರು ತುಂಬಿದಾಗ ಬೋರ್‌ವೆಲ್‌ಗಳು ಮರುಪೂರಣಗೊಂಡಿವೆ. ಗ್ರಾಮದ ಬಳಿ ಇರುವ ರಾಜಕಾಲುವೆ ಮತ್ತು ಕೋಡಿಸರದ ಹೂಳೆತ್ತಿದ ಮೇಲೆ ಗ್ರಾಮದ ಕೆರೆಗಳಿಗೆ ನೀರು ಸರಾಗವಾಗಿ ಹರಿಯುತ್ತಿದೆ. 10 ಕೆರೆಗಳು ತುಂಬಿ, 3,744 ಎಕರೆ ಪ್ರದೇಶದಲ್ಲಿ ಅಂತರ್ಜಲ ಜಿನುಗುತ್ತಿದೆ’ ಎಂದು ಹೇಳುತ್ತಾರೆ.

ಆದಾಯ ವೃದ್ಧಿ: ‘ಗ್ರಾಮದಲ್ಲಿ ಹಾಲಿನ ಡೇರಿ ಇದ್ದು, ದಿನವೂ 200 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಹಸುಗಳಿಗೆ ಮೇವು ಬೆಳೆಯುತ್ತಿದ್ದಾರೆ. ನಾರಿ–ಸುವರ್ಣ ತಳಿಯ ಕುರಿಗಳಿಂದ ಸಾಗಣೆದಾರರು ದ್ವಿಗುಣ ಲಾಭ ಗಳಿಸುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಮೆಕ್ಕೆಜೋಳದ ಜೊತೆ ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಬೆಳೆಯುತ್ತಿದ್ದು, ಕಡಿಮೆ ಖರ್ಚು ಉಳಿತಾಯ ಜಾಸ್ತಿಯಾಗುತ್ತಿದೆ. ತರಕಾರಿ ಬೆಳೆಗಳನ್ನು ಗ್ರೇಡಿಂಗ್ ಮಾಡಿ ಮಾರಾಟ ಮಾಡುತ್ತಿದ್ದು ಲಾಭ ಗಳಿಸುತ್ತಿದ್ದೇವೆ’ ಎಂದು ಹೇಳಿದರು ರೈತ ತಿಪ್ಪೇಶನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT