ಶನಿವಾರ, ಫೆಬ್ರವರಿ 22, 2020
19 °C
ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ

ಅನರ್ಹ ಶಾಸಕರಿಗೆ ಪಾಠ ಕಲಿಸಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಅಥಣಿ ತಾಲ್ಲೂಕು): ‘ಮಹೇಶ ಕುಮಠಳ್ಳಿ ಸೇರಿದಂತೆ ಅನರ್ಹ ಶಾಸಕರು ಮತ ಕೊಟ್ಟವರನ್ನೇ ಕೇಳದೇ ಸ್ವಾರ್ಥಕ್ಕೋಸ್ಕರ, ಅಧಿಕಾರದ ಲಾಲಸೆಯಿಂದ ಮತ್ತು ಹಣಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಈ ಮೂಲಕ ಮತದಾರರಿಗೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೋರಿದರು.

ಅಥಣಿ ಕ್ಷೇತ್ರದ ಕಾಂಗ್ರೆಸ್‌ ಆಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಇಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘2018ರಲ್ಲಿ ಇಡೀ ಊರಿನ ಜನರೆಲ್ಲರೂ ಹಣ ಕೊಟ್ಟು ಗೆಲ್ಲಿಸಿದ್ದೀರಲ್ಲವೇ? ನೀವು ಇನ್ಮುಂದೆ ಶಾಸಕನಾಗಲು ಯೋಗ್ಯನಲ್ಲ ಎಂದು ಅವರಿಗೆ ತಿಳಿಸಬೇಕು. ಅವರನ್ನು ಶಾಶ್ವತವಾಗಿ ನಾಲಾಯಕ್ ಮಾಡಿ ಮನೆಗೆ ಕಳುಹಿಸಬೇಕು’ ಎಂದು ಕೋರಿದರು.

‘17 ಮಂದಿ ಪಕ್ಷಾಂತರ ಮಾಡಿದ್ದರಿಂದ ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪೀಕರ್‌ಗೆ ಅರ್ಜಿ ಕೊಟ್ಟೆವು. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ ಅವರನ್ನು ಅನರ್ಹ ಶಾಸಕರನ್ನಾಗಿ ಮಾಡಬೇಕು ಎಂದು ಕೋರಿದ್ದೆವು. ವಿಚಾರಣೆ ನಡೆಸಿದ ಸ್ಪೀಕರ್‌, ಅವರನ್ನು ಅನರ್ಹಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡ ಅನರ್ಹರು ಎಂದು ತೀರ್ಪು ನೀಡಿದೆ. ಹೀಗಾಗಿ, ಅವರೆಲ್ಲರೂ ಶಾಸಕರಾಗಿರಲು ನಾಲಾಯಕ್ ಆಗಿದ್ದಾರೆ. ಜನತಾ ನ್ಯಾಯಾಲಯದಲ್ಲೂ ಶಿಕ್ಷಿಸಬೇಕು’ ಎಂದರು.

ಸಂಕಷ್ಟ ಕೇಳದೇ ಹೋದರು: ‘ಪ್ರವಾಹ ಬಂದಾಗ ಶಾಸಕರು ಜನರ ಸಂಕಷ್ಟಗಳನ್ನು ಕೇಳಿದರಾ, ಸಾಂತ್ವನವನ್ನಾದರೂ ಹೇಳಿದರಾ? ಜನಪ್ರತಿನಿಧಿಯಾಗಿ ಕಷ್ಟ ಕೇಳದೇ ಐಷಾರಾಮಿ ಹೋಟೆಲ್‌ನಲ್ಲಿ ಉಳಿದಿದ್ದವರು ಮತ್ತೆ ಶಾಸಕರಾಗಬೇಕಾ? ಕುಮಠಳ್ಳಿ ಅಂಥವರಿಗೆ ತಕ್ಕಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.

‘ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷ ಬಿಟ್ಟು ಹೋದವರಲ್ಲಿ ಬಹುತೇಕರನ್ನು ಜನರು ಸೋಲಿಸಿದ್ದಾರೆ. ಎಲ್ಲ ಕಡೆಯೂ ಅನರ್ಹರನ್ನು ಮನೆಗೆ ಕಳುಹಿಸಬೇಕು. ಜನರಿಗೆ ದ್ರೋಹ ಮಾಡಿ ಹೋದವರು ಮನುಷ್ಯರೇ ಅಲ್ಲ’ ಎಂದು ಗುಡುಗಿದರು.

ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ‘ಕುಮಠಳ್ಳಿಯನ್ನು ಪುಣ್ಯಕೋಟಿ ಎಂದುಕೊಂಡಿದ್ದೆವು. ಆದರೆ, ಆಕಳಿನ ಮುಖವಾಡ ಧರಿಸಿದದರು ಎಂದು ಗೊತ್ತು ಮಾಡಿಬಿಟ್ಟರು. ಕೆರೆ ತುಂಬಿಸುವ ಯೋಜನೆ, ನೀರಾವರಿ ಹಾಗೂ ತುಬಚಿ ಬಬಲೇಶ್ವರ ಯೋಜನೆಗೆ ನಮ್ಮ ಸರ್ಕಾರ ಅನುಮತಿ ಕೊಟ್ಟಿತ್ತು. ಇದನ್ನು ಅವರೇ ಸಭೆಯಲ್ಲಿ ಹೇಳಿದ್ದರು’ ಎಂದು ನೆನಪಿಸಿ, ಕುಮಠಳ್ಳಿ ಭಾಷಣದ ಅಡಿಯೊ ಕೇಳಿಸಿದರು.

ಕೃತಜ್ಞತೆ ಸಲ್ಲಿಸಲು ಬಂದಿದ್ದರಾ?: ‘ಯೋಜನೆಗೆ ಇಲಾಖೆ ಅನುಮೋದನೆ ಪಡೆದು ಟೆಂಡರ್ ಮಾಡಿಸುವುದು ಬಿಟ್ಟು ಮುಂಬೈ ಐಷಾರಾಮಿ ಹೋಟೆಲ್ ಸೇರಿದರು. ನೀರಾವರಿ ಬದಲು ಜನರ ಬುಡಕ್ಕೆ ನೀರು ಬಿಟ್ಟರು. ಅವರಿಗೆ ಬುದ್ಧಿ ಕಲಿಸಬೇಕು. ಪೂರ್ವ ಭಾಗದಲ್ಲಿ ಬಿಟ್ಟು ಹೋದ 7 ಹಳ್ಳಿಗಳಿಗೆ ನೀರಾವರಿ ಮಾಡಿ, ತೆಲಸಂಗ ಏತ ನೀರಾವರಿ ಎಂದು ಹೆಸರಿಡುವ ಜವಾಬ್ದಾರಿ ನನ್ನದು’ ಎಂದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಕಳ್ಳರು, ಸುಳ್ಳರನ್ನು ನಂಬಿ ಮೋಸ ಹೋಗಿದ್ದು ಸಾಕು. ತೆಲಸಂಗ ಕುಮಠಳ್ಳಿಯ ಹುಟ್ಟೂರು. ನಿಮಗೆ ಕೃತಜ್ಞತೆ ಸಲ್ಲಿಸಲು ಒಮ್ಮೆಯಾದರೂ ಬಂದಿದ್ದರಾ, ₹100 ಅಭಿವೃದ್ಧಿ ಕಾರ್ಯವನ್ನಾದರೂ ಇಲ್ಲಿಗೆ ಮಾಡಿದ್ದಾರಾ?‍’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಆನಂದ ನ್ಯಾಮಗೌಡ, ಅಭ್ಯರ್ಥಿ ಗಜಾನನ ಮಂಗಸೂಳಿ, ಮುಖಂಡರಾದ ಎಸ್.ಆರ್. ಪಾಟೀಲ, ವಿನಯ ಪಾಟೀಲ, ಸುನೀಲ ಪಾಟೀಲ, ಶಹಜಹಾನ್‌ ಡೊಂಗರಗಾಂವ, ಕಾಶೀನಾಥ ಕುಂಬಾರಕರ, ಸುರೇಶ ಖೊಳಂಬಿ, ರವಿ ಕವಟಗಿ, ಅಪ್ಪು ಜಮಾದರ, ದರೆಪ್ಪ ಮಾಳಿ, ಸಿದ್ದು ಕೊಕಟನೂರ, ರಾಮು ನಿಡೋಣಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು