ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬಸವಣ್ಣನ ಪರಮ ಭಕ್ತ: ಸಿದ್ದರಾಮಯ್ಯ

ಕೇಕೆ, ಶಿಳ್ಳೆ, ಹುಲಿಯಾ... ಹರ್ಷೋದ್ಗಾರಗಳ ಅನುರಣನ
Last Updated 16 ಫೆಬ್ರುವರಿ 2020, 22:01 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಳಗ್ಗೆ ವೇದಿಕೆಗೆ ಹೆಜ್ಜೆಯಿಡುತ್ತಿದ್ದಂತೆಯೇ ನೆರೆದಿದ್ದ ಲಕ್ಷಾಂತರ ಭಕ್ತರು ಕೇಕೆ, ಶಿಳ್ಳೆ, ಹುಲಿಯಾ ಎಂಬ ಹರ್ಷೋದ್ಗಾರಗಳ ನಡುವೆ ಭರ್ಜರಿಯಾಗಿ ಸ್ವಾಗತಿಸಿದರು.

ಅಪಾರ ಜನಸ್ತೋಮದಿಂದ ಇಂತಹ ಅಭೂತಪೂರ್ವ ಸ್ವಾಗತಕ್ಕೆ ಉದ್ದೀಪನಗೊಂಡ ಸಿದ್ದರಾಮಯ್ಯ ಸಾಕಷ್ಟು ಆವೇಶಭರಿತವಾಗಿಯೇ ಮಾತನಾಡಿದರು. ‘ನಾನು ಬಸವಣ್ಣನ ಪರಮ ಭಕ್ತ. ಅದಕ್ಕಾಗಿಯೇ ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಎಂದೆಂದಿಗೂ ನಾನು ಬಸವ ತತ್ವದ ಪ್ರಬಲ ಪ್ರತಿಪಾದಕ’ ಎಂದು ಪುನರುಚ್ಚರಿಸಿದರು.

‘ಬಸವಣ್ಣನವರ ಕಾಲದ ಅಸಂಖ್ಯ ಪ್ರಮಥರ ಗಣಮೇಳವನ್ನು ಇಂದು ಶಿವಮೂರ್ತಿ ಶರಣರು ಮರುಕಳಿಸಿದ್ದಾರೆ. ಇಡೀ ಸಮಾಜದ ಶ್ಲಾಘನೆಗೆ ಪಾತ್ರರಾಗಿದ್ದಾರೆ. 900 ವರ್ಷಗಳ ನಂತರ ಮತ್ತೆ ಸಾಕಾರಗೊಂಡ ಈ ಪ್ರಯತ್ನ ಶ್ಲಾಘನೀಯ. ಜಗತ್ತಿನ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಇಂತಹ ಸಮಾವೇಶಗಳು ಪ್ರಸ್ತುತ ಹಾಗೂ ಅವಶ್ಯ’ ಎಂದು ಪ್ರತಿಪಾದಿಸಿದರು‌‌.

‘ಶಿವಮೂರ್ತಿ ಮುರುಘಾ ಶರಣರು ನನಗೆ ಸದಾ ನೈತಿಕ ಸ್ಥೈರ್ಯ ತುಂಬಿದ ಸ್ವಾಮೀಜಿಗಳ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ನನ್ನ ಅಹಿಂದ ಸಮಾವೇಶಗಳ ಕಾಲದಿಂದಲೂ ಅವರು ನನಗೆ ಶಕ್ತಿ ತುಂಬುತ್ತಲೇ ಬಂದಿದ್ದಾರೆ. ಅವರನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಸ್ಮರಿಸಿದರು.

‘ಅಸಮಾನತೆ, ಬಡತನ, ಭೇದ ಭಾವ, ತಾರತಮ್ಯ, ಸಾಮಾಜಿಕ ಅಸಮಾನತೆ ಇನ್ನೂ ಅಳಿದಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಜಾತಿ ವ್ಯವಸ್ಥೆ. ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ಕೂತಿದೆ. ಇದು ಹೋಗಬೇಕು. ಇಂತಹ ಸಂದರ್ಭದಲ್ಲಿ ವೈದಿಕ ಧರ್ಮಕ್ಕೆ ಪರ್ಯಾಯವಾಗಿ, ವೈಚಾರಿಕವಾಗಿ ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ, ಕರ್ಮ ಸಿದ್ಧಾಂತ, ಕಂದಾಚಾರ, ಮೌಢ್ಯಗಳನ್ನು ದೂರವಿಟ್ಟ ಧರ್ಮ ಎಂದರೆ ಅದು ಬಸವಾದಿ ಶಿವಶರಣರ ಧರ್ಮ ಎಂಬುದನ್ನು ಗಮನಿಸಬೇಕು’ ಎಂದರು.

‘ನಮ್ಮ ದೇಶ ಅನೇಕ ಸಮಾಜ ಸುಧಾರಕರು, ದಾರ್ಶನಿಕರು, ಸಂತರು, ಶರಣರು ಮತ್ತು ಸೂಫಿಗಳನ್ನು ಜಗತ್ತಿಗೆ ನೀಡಿದೆ. ಅವರೆಲ್ಲಾ ಸಮಾಜದ ಪರಿವರ್ತನೆಗೆ, ಬದಲಾವಣೆಗೆ, ಮಾನವೀಯ ಮೌಲ್ಯಗಳ ಸ್ಥಾಪನೆಗೆ ಶತಶತಮಾನಗಳಿಂದ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಜಾತಿ ವ್ಯವಸ್ಥೆ, ಅಸಮಾನತೆಯನ್ನು ತೊಡೆದು ಹಾಕಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ಸಂದೇಶಗಳನ್ನು ಅರಿತು ನಡೆಯಬೇಕಿದೆ. ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಮತೆ ಸಾಧಿಸದರಷ್ಟೇ ಸಮಸಮಾಜ ನಿರ್ಮಾಣವಾಗಬಲ್ಲದು’ ಎಂದು ತಿಳಿಸಿದರು.

‘ಇವತ್ತು ಇವನಾರವ, ಇವನಾರವ ಎನ್ನುತ್ತಿದ್ದಾರೆ’
‘ಇವನಾರವ ಇವನಾರವ ಎಂದು ಕೇಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ನಮ್ಮ ಸಂವಿಧಾನದಲ್ಲಿ ಭೇದ–ಭಾವಗಳಿಗೆ ಆಸ್ಪದವಿಲ್ಲ. ಅದು ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಸಾರುತ್ತದೆ. ಇದರಲ್ಲಿ ಅಗೌರವ, ಅಸಮಾನತೆಗೆ ಆಸ್ಪದವೇ ಇಲ್ಲ‌ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ವಚನಗಳು ಕೇವಲ ಪಠಣ ಮಾಡಲಿಕ್ಕೆ ಅಲ್ಲ. ಅವುಗಳ ಆಶಯಕ್ಕೆ ತಕ್ಕಂತೆ ಎಲ್ಲರೂ ಬಾಳಬೇಕು. ಬಸವಾದಿ ಶರಣರು ನುಡಿದಂತೆ ನಡೆದವರು. ಅವರ ಸನ್ಮಾರ್ಗದಲ್ಲಿ ನಾವು ಸಮಾಧಾನಕರವಾಗಿ ಬಾಳಿದರೆ ಅದು ಸಾರ್ಥಕ. ಇಲ್ಲದಿದ್ದರೆ ನಿರರ್ಥಕ’ ಎಂದರು.

ಗೇಯೋರು ಗೇಯ್ತಾನೇ ಇರಬೇಕಾ?
‘ಗೇಯೋರು ಗೇಯ್ತಾನೇ ಇರಬೇಕಾ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ‘ನಾವು ಬೇಡುವ ಕೈ ಆಗಲಿಕ್ಕೆ ಸಾಧ್ಯವಿಲ್ಲ. ಕೊಡುಗೈ ಆಗಬೇಕು. ಹಾಗಾಗಬೇಕು ಎಂದರೆ ಕಾಯಕ ದಾಸೋಹ ಜಾರಿಯಾಗಬೇಕು. ಆಗಷ್ಟೇ ಅದು ಸಾಧ್ಯ’ ಎಂದು ಗುಡುಗಿದರು.

‘ನಾನು ಅನ್ನಭಾಗ್ಯ ಕಾರ್ಯಕ್ರಮ ಜಾರಿಗೆ ತಂದಾಗ ಒಬ್ಬ ಪ್ರಶ್ನಿಸಿದ. ಏನ್‌ ಸ್ವಾಮಿ, ಅಕ್ಕಿ ಕೊಟ್ಟುಬಿಟ್ಟು ಎಲ್ಲರನ್ನೂ ಸೋಮಾರಿಗಳನ್ನಾಗಿ ಮಾಡಿದ್ರಿ ಅಂದ. ಅದಕ್ಕೆ ನಾನಂದಿದ್ದು, ಇಷ್ಟು ದಿನ ಗೇದೂ ಗೇದೂ ಅವರ ಬೆನ್ನು ನೆಲಕ್ಕೆ ಬಗ್ಗಿದೆ. ನೀವೆಲ್ಲಾ ತಿಂದೂ ತಿಂದು ಬೊಜ್ಜು ಬೆಳೆಸಿಕೊಂಡಿದ್ದರೀರಿ. ಅವರೂ ಒಂದಷ್ಟು ದಿನ ಶೋಕಿ ಮಾಡಲಿ ಬಿಡಿ. ಒಂದಿಷ್ಟು ರೆಸ್ಟ್ ತಗೊಳ್ಳಲಿ ಬಿಡಿ ಎಂದೆ’ ಎಂದರು.

‘ನಾನು ಚಿಕ್ಕವನಿದ್ದಾಗ ಹಳ್ಳಿಯಲ್ಲಿ ಬಾವಿಯಲ್ಲಿ ನೀರು ಸೇದಲು ಹೋದರೆ ಒಳಗಡೆ ಗುಬ್ಬಚ್ಚಿಗಳು ಗೂಡು ಕಟ್ಟಿರುತ್ತಿದ್ದವು. ಇದರಿಂದ ನೀರಿನ ಮೇಲೆ ಕಸ ಕೂತಿರುತ್ತಿತ್ತು. ಕೊಡಪಾನವನ್ನು ಬಿಟ್ಟೂ ಎಳೆದೂ ನೀರನ್ನು ತಿಳಿಗೊಳಿಸಿ ತುಂಬಿಸಿಕೊಳ್ಳುತ್ತಿದ್ದೆ. ಸ್ವಲ್ಪ ಹೊತ್ತು ಬಿಟ್ಟರೆ ಕಸ ಮತ್ತೆ ಯಥಾಪ್ರಕಾರ ಕೂತಿರುತ್ತಿತ್ತು. ಇವತ್ತು ಸುಧಾರಣೆಯ ಪರಿಸ್ಥಿತಿಯೂ ಇದೇ ರೀತಿ ಆಗಿದೆ’ ಎಂದು ಅವರು ವಿಷಾದಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT