ಶುಕ್ರವಾರ, ಡಿಸೆಂಬರ್ 6, 2019
21 °C

ಸೇಠ್‌ ಮೇಲೆ ಹಲ್ಲೆ ನಡೆಸಿದ ಸಂಸ್ಥೆಯ ಪೋಷಕ ಸಿದ್ದರಾಮಯ್ಯ: ಬಿಎಸ್‌ವೈ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಸಕ ತನ್ವೀರ್‌ ಸೇಠ್ ಮೇಲೆ ನಡೆದಿರುವ ಹಲ್ಲೆ ನೋವನ್ನುಂಟು ಮಾಡಿದ್ದು, ಹಲ್ಲೆ ನಡೆಸಿದ ಯುವಕನ ಹಿಂದಿರುವ ಸಂಸ್ಥೆಯನ್ನು ಸಿದ್ದರಾಮಯ್ಯ ಪೋಷಿಸುತ್ತಾ ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು. 

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸ್ವಾರ್ಥಕ್ಕಾಗಿ ಸಂಸ್ಥೆ ಮೇಲಿದ್ದ ಎಲ್ಲ ಪ್ರಕರಣವನ್ನು ರದ್ದು ಮಾಡಿಸಿದರು. ಆಗಲೇ ತನಿಖೆ ನಡೆಸಿದ್ದರೆ ಇಂತಹ ಘಟನೆ ರಾಜ್ಯದಲ್ಲಿ ನಡೆಯುತ್ತಿರಲಿಲ್ಲ. ಶಿವಮೊಗ್ಗದಲ್ಲಿ ಕೊಲೆಯಾದಾಗಲೂ ಆ ಸಂಸ್ಥೆಯನ್ನು ರಕ್ಷಣೆ ಮಾಡಿದರು. ಅದೇ ರೀತಿ, ಮೈಸೂರಿನಲ್ಲಿ ಗಲಾಟೆಯಾದರೂ ಈ ಬಗ್ಗೆ ತನಿಖೆಗೆ ಸೂಚಿಸಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಇದೀಗ ನಡೆದಿರುವ ಘಟನೆಯ ಬಗ್ಗೆ ಸಿದ್ದರಾಮಯ್ಯ ಉತ್ತರಿಸಬೇಕು’ ಎಂದರು.

‘ನೆರೆ, ಬರ ಬಂದರೂ ಎದೆಗುಂದದೆ ಜನರ ನೋವಿಗೆ ಸ್ಪಂದಿಸಿದ್ದೇವೆ. ಉಪಚುನಾವಣೆ ನಂತರ ಸರ್ಕಾರ ಬಿದ್ದು, ಹೋಗಲಿದೆ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಲೋಕಸಭೆ ಚುನಾವಣೆಯಲ್ಲಿಯೇ ಜನರು ಉತ್ತರ ನೀಡಿದ್ದಾರೆ. ಉಪಚುನಾವಣೆಯಲ್ಲಿ ಕೂಡಾ ನಾವೇ ಗೆಲುವು ಸಾಧಿಸಲಿದ್ದೇವೆ’ ಎಂದರು. 

 

ಸಿ.ಎಂ ಜವಾಬ್ದಾರಿಯಿಂದ ಮಾತಾಡಲಿ: ಸಿದ್ದರಾಮಯ್ಯ

ಚಿಕ್ಕಮಗಳೂರು: ‘ಶಾಸಕ ತನ್ವೀರ್‌ ಸೇಠ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವವ ಎಸ್‌ಡಿಪಿಐ ಕಾರ್ಯಕರ್ತ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಹಿಂದೆ ಯಾರ‍್ಯಾರು ಇದ್ದಾರೆ, ಷಡ್ಯಂತ್ರ ಏನಿದೆ ಎಂಬುದನ್ನು ಪತ್ತೆ ಹಚ್ಚುವಂತೆ ಅವರಿಗೆ ಹೇಳಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಉತ್ತರಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್‌ಐ ಸಂಘಟನೆ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದಿದ್ದು, ತನ್ವೀರ್‌ ಸೇಠ್‌ ಮೇಲಿನ ಹಲ್ಲೆಗೆ ಪರೋಕ್ಷ ಕಾರಣ ಎಂದು ಯಡಿಯೂರಪ್ಪ ಹೇಳಿದ್ದಾರೆಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ರಾಜಕಾರಣಕ್ಕೆ ಏನೋ ಹೇಳಿದ್ದಾರೆ. ಅವರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ತನ್ವೀರ್‌ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು’ ಎಂದರು.

‘ಹಲ್ಲೆ, ಕೊಲೆ ಯತ್ನ, ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗುವ ಯಾವುದೇ ಸಂಘಟನೆಗಳಿಗೆ ನಮ್ಮ ಬೆಂಬಲ ಇಲ್ಲ. ಕಾನೂನು ಕೈಗೆತ್ತಿಕೊಳ್ಳುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

 

‘ವಿಶ್ವನಾಥ್‌ಗೆ ಸಿದ್ಧಾಂತ ಇದೆಯೇ?: ದಿನೇಶ್‌ ಗುಂಡೂರಾವ್ ಪ್ರಶ್ನೆ

ಎಚ್‌. ವಿಶ್ವನಾಥ್‌ ಅವರು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿದ್ದರು, ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಯಾವ ಸಿದ್ಧಾಂತ, ನೈತಿಕತೆ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವನಾಥ್‌ ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಎಣಿಸಿರಲಿಲ್ಲ. ಅವರು ಏಕೆ ಬಿಜೆಪಿ ಸೇರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ದೊಡ್ಡಮಟ್ಟದಲ್ಲಿ ಗೆಲುವು ಸಾಧಿಸಲಿದೆ’ ಎಂದು ಉತ್ತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು