ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಮಗಿರಿಗೆ ತಳ್ಳಿದ ಕೇಂದ್ರ ಸರ್ಕಾರ: ಸಿದ್ದರಾಮಯ್ಯ ಟೀಕೆ

Last Updated 2 ಏಪ್ರಿಲ್ 2020, 20:53 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಕೇಂದ್ರದ ಪರಿಹಾರ ನಿಧಿಗೆ ಸಂಸದರ ಪ್ರದೇಶ ಅಭಿವೃದ್ಧಿ ನಿಧಿಯನ್ನು ನೀಡುವ ಮೂಲಕ ರಾಜ್ಯದ ಸಂಸದರು ಜನರಿಗೆದ್ರೋಹ ಬಗೆಯುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

‘ಕರ್ನಾಟಕದ ಶಾಸಕರು ತಮ್ಮ ಒಂದು ತಿಂಗಳ‌ ಸಂಬಳವನ್ನು ‘ಪಿಎಂ ಕೇರ್’ ಫಂಡ್‌ಗೆ ಕೊಡಬೇಕಂತೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣಕ್ಕಾಗಿ ದೇಣಿಗೆ ಕೊಡುವಂತೆ ಸಾರ್ವಜನಿಕರ ಬಳಿ ಬೇಡಿಕೊಳ್ಳುತ್ತಿದ್ದಾರೆ. ಇದೆಂತಹ ವಿಪರ್ಯಾಸ? ಇದೆಂತಹ ಗುಲಾಮಗಿರಿ?’ ಎಂದು ಗುರುವಾರ ಸರಣಿ ಟ್ವೀಟ್‌ ಮೂಲಕ ಟೀಕಿಸಿದ್ದಾರೆ.

‘ನಮ್ಮದೇ ತೆರಿಗೆ ಹಣದಲ್ಲಿ ನ್ಯಾಯಯುತ ಪಾಲು ನೀಡದೆ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ‍ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಖರ್ಚಾಗಬೇಕಾಗಿದ್ದ ಹಣವನ್ನು ಕೂಡಾ ಕೇಂದ್ರಕ್ಕೆ ತರಿಸಿಕೊಂಡು ಮತ್ತೆ ಕರ್ನಾಟಕ ದೆಹಲಿ‌ ದೊರೆಗಳ ಎದುರು‌ ಕೈಯೊಡ್ಡಿ ನಿಲ್ಲುವಂತೆ ಮಾಡಿದ್ದಾರೆ’ ಎಂದು ಕುಟುಕಿದ್ದಾರೆ.‌

‘ಕೊರೊನಾ ಸೋಂಕು ಯಾವುದೇ ಒಂದು ರಾಜ್ಯಕ್ಕೆ ಇಲ್ಲವೇ ಪ್ರದೇಶಕ್ಕೆ ಸೀಮಿತವಾದದುಲ್ಲ. ಪ್ರತಿಯೊಂದು ರಾಜ್ಯವೂ ಕಷ್ಟದಲ್ಲಿದೆ. ಹೀಗಿರುವಾಗ‌ ಎಂಪಿ ಲ್ಯಾಡ್ ದುಡ್ಡನ್ನು‌ ಜಿಲ್ಲಾಧಿಕಾರಿಗಳಿಗೆ ನೀಡಿ ಸ್ಥಳೀಯವಾಗಿ ಖರ್ಚು ಮಾಡುವಂತೆ ಮಾಡಬೇಕು. ಬಿಜೆಪಿಯ ಸಂಸದರು ಎಂಪಿ ಲ್ಯಾಡ್‌ನಿಂದ ₹1 ಕೋಟಿ ಮತ್ತು ಸಂಬಳದ ₹ 1 ಲಕ್ಷವನ್ನು ‘ಪಿಎಂ ಕೇರ್ ಫಂಡ್‌’ಗೆ ನೀಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೀಡಿರುವ ಸೂಚನೆಯೇ ಬೇಜವಾಬ್ದಾರಿತನದ್ದು. ಮುಖ್ಯಮಂತ್ರಿ‌ ಪರಿಹಾರ ನಿಧಿಗೆ ದುಡ್ಡು ಕೊಡಬೇಕಾಗಿರುವುದು ಪ್ರತಿಯೊಬ್ಬ ಸಂಸದನ ಜವಾಬ್ದಾರಿ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT