ಸೋಮವಾರ, ಮಾರ್ಚ್ 8, 2021
31 °C
15 ವರ್ಷಗಳಿಂದ ಮಠದ ಕಾಲೇಜಿನಲ್ಲಿ ಸಂರಕ್ಷಣೆ

ಪ್ರತಿಮೆ ಅನಾವರಣ ಬೇಡವೆಂದಿದ್ದ ‘ದೇವರು’

ನಾಗರಾಜ ಎನ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಕ್ಷಾಂತರ ಭಕ್ತರು, ನೂರಾರು ಮಠಾಧೀಶರ ಸಮ್ಮುಖದಲ್ಲಿ ನಡೆದ ಸಿದ್ಧಗಂಗಾ ಶ್ರೀಗಳ ಸ್ಮರಣೋತ್ಸವದಲ್ಲಿ ಸೂಜಿಗಲ್ಲಿನಂತೆ ಸೆಳೆದಿದ್ದು ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪ್ರತಿಮೆ.

ತುಮಕೂರಿನಲ್ಲಿ ಶ್ರೀಗಳ ಸ್ಮರಣೆಯಂದೇ ಅನಾವರಣಗೊಂಡ ಕಂಚಿನ ಪ್ರತಿಮೆ ಹಿಂದೆ ಸ್ವಾಮೀಜಿಯ ಘನತೆ ಸಾರುವ ಸ್ವಾರಸ್ಯಕರ ಸನ್ನಿವೇಶವೊಂದು ಇದೆ. ಆ ಕ್ಷಣ ಸ್ವಾಮೀಜಿಯ ಸರಳತೆಗೆ ಸಾಕ್ಷಿಯಂತಿದೆ.

ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ವಾಮೀಜಿ ಮೇಲೆ ಹೆಚ್ಚಿನ ಭಕ್ತಿ. 15 ವರ್ಷಗಳ ಹಿಂದೆಯೇ ಶಿವಕುಮಾರ ಸ್ವಾಮಿಗಳ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲು ಅವರು ಸಿದ್ಧತೆ ಆರಂಭಿಸಿದ್ದರಂತೆ. ನ್ಯಾ. ಶಿವರಾಜ್‌ ಪಾಟೀಲ್‌, ಐಎಎಸ್‌ ಅಧಿಕಾರಿ ಮುದ್ದಪ್ಪ, ಮುಖಂಡರಾದ ವಿಶ್ವಾರಾಧ್ಯ, ವೀರಣ್ಣ, ರೇವಣಸಿದ್ದಯ್ಯ ಅವರನ್ನೊಳಗೊಂಡ ತಂಡ ಶಾಮನೂರು ಅವರಿಗೆ ಜತೆಯಾಯಿತು. ಸ್ವಾಮೀಜಿ ಅವರಷ್ಟೇ ಎತ್ತರವಿರುವ ಪ್ರತಿಮೆ ಪ್ರತಿಷ್ಠಾಪಿಸಲು ಅವರೆಲ್ಲಾ ನಿರ್ಧರಿಸಿದರು. ಕೊಲ್ಲಾಪುರದ ಶಿಲ್ಪಿಯೊಬ್ಬರಿಗೆ ₹ 18 ಲಕ್ಷ ಕೊಟ್ಟು ಪ್ರತಿಮೆಯನ್ನೂ ಮಾಡಿಸಿದರು.

ಮಠದಲ್ಲಿ ನಡೆಯುವ ಜಾತ್ರೆ ವೇಳೆ ಪ್ರತಿಮೆ ಪ್ರತಿಷ್ಠಾಪಿಸಲು ಅವರೆಲ್ಲಾ ತೀರ್ಮಾನಿಸಿ, ಸ್ವಾಮೀಜಿಯ ಅಪ್ಪಣೆ ‍ಪಡೆಯಲು ಸಿದ್ಧಗಂಗೆಗೆ ಹೋದರು. ಮುಖಂಡರ ಭಿನ್ನಹ ಆಲಿಸಿದ ಸ್ವಾಮೀಜಿ, ‘ನಾನು ಬದುಕಿರುವವರೆಗೂ ಪ್ರತಿಮೆ ಅನಾವರಣ ಮಾಡಕೂಡದು’ ಎಂದು ಕಡ್ಡಿ ತುಂಡಾಗುವಂತೆ ಹೇಳಿದರಂತೆ.

ಸ್ವಾಮೀಜಿಯ ಮಾತಿಗೆ ತಲೆಯಾಡಿಸಿದ ಮುಖಂಡರು ಮಠದ ಕಾಲೇಜಿನಲ್ಲೇ ಪ್ರತಿಮೆ ಸಂರಕ್ಷಿಸಿ ಇಟ್ಟಿದ್ದರು. ಆ ಪ್ರತಿಮೆ ಅನಾವರಣಗೊಂಡಿರುವುದು ಸ್ವಾಮೀಜಿ ಇಚ್ಛೆಪಟ್ಟಂತೆ.

‘ಸ್ನೇಹಿತರ ಆಸೆಯಂತೆ ಕಂಚಿನ ಪ್ರತಿಮೆ ಮಾಡಿಸಿದ್ದೆ. ಅದರ ಪ್ರತಿಷ್ಠಾಪನೆ ಆಗಿರಲಿಲ್ಲ. ಕೊಟ್ಟಿದ್ದನ್ನು ಮರೆಯಬೇಕು ಎಂಬುದು ನನ್ನ ನಂಬಿಕೆ. ಪ್ರತಿಮೆ ಮಾಡಿಸಿದ್ದನ್ನೂ ಮರೆತುಬಿಟ್ಟಿದ್ದೆ. ಶ್ರೀಗಳ ಸ್ಮರಣೆ ವೇಳೆ ಪ್ರತಿಮೆ ಅನಾವರಣಗೊಂಡಾಗ ನೆನಪುಗಳು ಮರುಕಳಿಸಿದವು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.