ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂಡು ರಸ್ತೆಗೆ ಸುರಿದು ಪ್ರತಿಭಟನೆ

ರಾಮನಗರದಲ್ಲಿ ರೇಷ್ಮೆಗೂಡು ರಸ್ತೆಗೆ ಸುರಿದು ರೈತರ ಪ್ರತಿಭಟನೆ
Last Updated 16 ಮೇ 2020, 20:00 IST
ಅಕ್ಷರ ಗಾತ್ರ

ರಾಮನಗರ: ರೀಲರ್‌ಗಳು ಹಿಂದೆ ಸರಿದ ಕಾರಣ ಶನಿವಾರ ರಾಜ್ಯದ ಬಹುತೇಕ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿಲ್ಲ. ರಾಮನಗರದಲ್ಲಿ ರೈತರು ರಸ್ತೆಗೆ ರೇಷ್ಮೆಗೂಡು ಸುರಿದು ಪ್ರತಿಭಟನೆ ನಡೆಸಿದರು.

ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ರೀಲರ್‌ಗಳು ಹರಾಜು ಬಹಿಷ್ಕರಿಸಿದರು. ಹೀಗಾಗಿ ಇ-ಹರಾಜು ಪ್ರಕ್ರಿಯೆ ಮಧ್ಯಾಹ್ನವಾದರೂ ಆರಂಭವಾಗಲಿಲ್ಲ. ರೈತರು ಆಕ್ರೋಶ ವ್ಯಕ್ತಪಡಿಸಿ ರಸ್ತೆಗೆ ಇಳಿದರು.

‘ರೀಲರ್‌ಗಳು ಮೊದಲೇ ತಿಳಿಸಿದ್ದರೆ ಮಾರುಕಟ್ಟೆಗೆ ಗೂಡು ತರುತ್ತಿರಲಿಲ್ಲ. ಈಗ ವಾಪಸ್ ಒಯ್ಯಲು, ಹಾಗೆಯೇ ಇಡಲೂ ಆಗುವುದಿಲ್ಲ. ಹೆಚ್ಚು ಹೊತ್ತು ಕಳೆದಷ್ಟೂ ರೈತರಿಗೆ ನಷ್ಟ. ಸರ್ಕಾರ ರೀಲರ್‌ಗಳ ಜತೆ ಚರ್ಚಿಸಲಿ. ಅಲ್ಲಿಯವರೆಗೆ ಕೆಎಸ್‌ಎಂಬಿ ಹಾಗೂ ಕೆಎಸ್‌ಐಸಿ ಮೂಲಕ ಸರ್ಕಾರವೇ ಖರೀದಿಸಲಿ’ ಎಂದು ಒತ್ತಾಯಿಸಿದರು. ಮೂರ್ನಾಲ್ಕು ಗಂಟೆ ಕಾಲ ಪ್ರತಿಭಟನೆ ನಡೆಯಿತು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು.

ರೀಲರ್‌ಗಳ ವಾದವೇನು?: ‘ಲಾಕ್‌ಡೌನ್‌ ಕಾರಣಕ್ಕೆ 2500ಟನ್‌ನಷ್ಟು ನೂಲು ಮಾರಾಟವಾಗದೇ ಉಳಿದಿದೆ. ಪ್ರತಿ ರೀಲರ್‌ ಬಳಿಯೂ 100-1000 ಕೆ.ಜಿವರೆಗೆ ನೂಲು ಸಂಗ್ರಹವಿದೆ. ರೇಷ್ಮೆ ಮಾರುಕಟ್ಟೆ ನಿಗಮದ ಮೂಲಕ ಸರ್ಕಾರ ನೆರವಿಗೆ ಧಾವಿಸಬೇಕು ಎಂಬುದು ರೀಲರ್‌ಗಳ ಬೇಡಿಕೆ ಆಗಿತ್ತು.

ಸಂಧಾನಕ್ಕೆ ಯತ್ನ: ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಮಾಗಡಿ ಶಾಸಕ ಎ.ಮಂಜುನಾಥ್‌ ರೀಲರ್‌ಗಳು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿದರು. ರೇಷ್ಮೆ ಇಲಾಖೆ ಕಾರ್ಯದರ್ಶಿಗೆ ಪರಿಸ್ಥಿತಿಯನ್ನು ವಿವರಿಸಿದರು.

ಅಂತಿಮವಾಗಿ ರೀಲರ್‌ಗಳ ಬೇಡಿಕೆಗೆ ಸರ್ಕಾರ ಮೌಖಿಕ ಒಪ್ಪಿಗೆ ನೀಡಿದೆ. ನೂಲು ಖರೀದಿ, ಕೆಎಸ್‌ಎಂಬಿಯಿಂದ ₹2 ಲಕ್ಷ ಅಡಮಾನ ಸಾಲ ಹಾಗೂ ಅಂತರ ರಾಜ್ಯ ಓಡಾಟಕ್ಕೆ ಪಾಸ್ ವ್ಯವಸ್ಥೆ ಮಾಡಿಕೊಡಲು ಒಪ್ಪಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ರೀಲರ್‌ಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT