ಶುಕ್ರವಾರ, ಏಪ್ರಿಲ್ 16, 2021
31 °C
ಜಲಮರುಪೂರಣದ ಪರಿಣಾಮ ಬೇಸಿಗೆಯಲ್ಲೂ ಹಸಿರಾಗಿರುವ ತೋಟ

ಶಿರಸಿ: ಬರ ಗೆದ್ದ ಮಾವಿನಕೊಪ್ಪ ಗ್ರಾಮಸ್ಥರು

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಪ್ರತಿವರ್ಷ ಜಲಕ್ಷಾಮದಿಂದ ಹೈರಾಣಾಗುತ್ತಿದ್ದ ಈ ಊರಿನ ಜನರು, ಸಮುದಾಯದ ಸಹಭಾಗಿತ್ವದಲ್ಲಿ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡು ಬರಗಾಲವನ್ನು ಗೆದ್ದಿದ್ದಾರೆ.

ಮಾವಿನಕೊಪ್ಪ ಸುಮಾರು 22 ಮನೆಗಳಿರುವ ಪುಟ್ಟ ಹಳ್ಳಿ. ಇಲ್ಲಿನ ನಿವಾಸಿಗಳಿಗೆ ಅಡಿಕೆ ತೋಟವೇ ಜೀವನಾಧಾರ. ಬೇಸಿಗೆ ಬಂತೆಂದರೆ ಇಲ್ಲಿನ ಜನರಿಗೆ ವಿಚಿತ್ರ ಸಂಕಟ. ಮನುಷ್ಯರಿಗೆ, ಜಾನುವಾರುಗಳಿಗೆ ಕುಡಿಯಲು ನೀರಿನ ಕೊರತೆಯಾಗುತ್ತಿತ್ತು. ಕಣ್ಣೆದುರಿಗೆ ಒಣಗುವ ತೋಟವನ್ನು ಕಂಡು ಅಸಹಾಯಕರಾಗುತ್ತಿದ್ದರು ಕೃಷಿಕರು. 2015ರಲ್ಲಿ ಎದುರಾದ ಬರಗಾಲ ಅವರನ್ನು ಇನ್ನಷ್ಟು ಹಿಂಡಿತು. ತೋಟದಲ್ಲಿ ಇಳುವರಿ ತೀವ್ರವಾಗಿ ಕುಸಿಯಿತು.

ಇದನ್ನು ಸವಾಲಾಗಿ ಸ್ವೀಕರಿಸಿದ ಗ್ರಾಮಸ್ಥರು, ಸನಾತನ ಪರಂಪರಾಗತ ಕೃಷಿಕರ ಸಂಘ ಕಟ್ಟಿಕೊಂಡು, ಪರಿಹಾರ ಕಂಡುಕೊಳ್ಳಲು ಯತ್ನಿಸಿದರು. ಅನೇಕ ತಜ್ಞರ ಜತೆ ಚರ್ಚಿಸಿ, ಅಂತಿಮವಾಗಿ ಜಲಮರುಪೂರಣ ವ್ಯವಸ್ಥೆ ಅಳವಡಿಸುವ ತೀರ್ಮಾನಕ್ಕೆ ಬಂದರು.

‘ದಶಕದ ಹಿಂದೆಯೇ ಬೆಟ್ಟದಲ್ಲಿ ಇಂಗುಗುಂಡಿ ನಿರ್ಮಿಸಲಾಗಿತ್ತು. ಆದರೆ, ಶೇಡಿಮಣ್ಣು (clay soil) ಈ ಊರಿನ ದೊಡ್ಡ ಸಮಸ್ಯೆ. ಈ ಕಾರಣಕ್ಕೆ ಮಳೆನೀರು ಹಿಡಿಟ್ಟುಕೊಳ್ಳಲಾಗದ ಇಂಗುಗುಂಡಿ ಫಲ ಕೊಡಲಿಲ್ಲ. ಹೀಗಾಗಿ, 2016ರಲ್ಲಿ ಪುನರ್ ಯೋಜನೆ ರೂಪಿಸಿ, ನಿವೃತ್ತ ಭೂ ವಿಜ್ಞಾನಿ ಡಾ.ಜಿ.ವಿ.ಹೆಗಡೆ ಹಾಗೂ ಜಲ ಕಾರ್ಯಕರ್ತ ಶಿವಾನಂದ ಕಳವೆ ಮಾರ್ಗದರ್ಶನ ಪಡೆದೆವು. ಕೃಷಿ ಜಮೀನು, ಬೆಟ್ಟ ಸೇರಿ 60 ಎಕರೆ ಪ್ರದೇಶದಲ್ಲಿ 17ಕ್ಕೂ ಹೆಚ್ಚು ದೊಡ್ಡ ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ, 1 ಕೋಟಿ ಲೀಟರ್ ನೀರಿಂಗಿಸುವ ಯೋಜನೆ ಅನುಷ್ಠಾನಗೊಳಿಸಿದೆವು. ಶೇಡಿಮಣ್ಣಿನ ಪದರಕ್ಕಿಂತ ಆಳದವರೆಗೆ ಗುಂಡಿ ತೆಗೆದ ಪರಿಣಾಮ ಹರಿದು ಹಳ್ಳ ಸೇರುತ್ತಿದ್ದ ಮಳೆ ನೀರು ನೆಲದಲ್ಲಿ ಇಂಗಿ, ಅಂತರ್ಜಲ ಮಟ್ಟ ಹೆಚ್ಚಿತು’ ಎನ್ನುತ್ತಾರೆ ಉತ್ಸಾಹಿ ಯುವಕ ಮಂಜುನಾಥ ಮಾವಿನಕೊಪ್ಪ.

‘2017ರಲ್ಲಿ ಮುಂಗಾರು ದುರ್ಬಲವಾಗಿದ್ದ ಕಾರಣಕ್ಕೆ ಇಂಗುಗುಂಡಿ ನಿರ್ಮಾಣದ ಫಲಿತಾಂಶ ಸರಿಯಾಗಿ ಗೊತ್ತಾಗಿರಲಿಲ್ಲ. 2018ರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದ್ದಕ್ಕೆ, ನೀರಿಂಗಿಸುವಿಕೆಯಿಂದ ಆಗಿರುವ ಲಾಭ ಈ ವರ್ಷ ಅನುಭವಕ್ಕೆ ಬಂದಿದೆ’ ಎಂದು ಹೇಳಿದರು.

‘ನೀರಿಲ್ಲದೇ ನಮ್ಮ ಗದ್ದೆಯಲ್ಲಿದ್ದ ಬೋರ್‌ವೆಲ್ ನಿರುಪಯುಕ್ತವಾಗಿ ಐದಾರು ವರ್ಷಗಳಾಗಿದ್ದವು. ಇದರ ಸಮೀಪವೇ ಇಂಗುಗುಂಡಿ ಮಾಡಲು ಡಾ.ಜಿ.ವಿ.ಹೆಗಡೆ ಸಲಹೆ ಮಾಡಿದ್ದರು. ಜಲಮರುಪೂರಣದಿಂದಾಗಿ ಈ ಬಿರು ಬೇಸಿಗೆಯಲ್ಲೂ ಬೋರ್‌ವೆಲ್‌ನಲ್ಲಿ ನೀರು ಸಿಗುತ್ತಿದೆ. ಅಡಿಕೆ ಮರಗಳು ಈ ಬಾರಿ ಹಸಿರಾಗಿವೆ’ ಎಂದರು ನಿವಾಸಿ ವಿನಯ್ ಹೆಗಡೆ.

**

ಕಳೆದ ವರ್ಷದವರೆಗೆ ಬೇಸಿಗೆಯಲ್ಲಿ ತಳ ಕಾಣುತ್ತಿದ್ದ ಬಾವಿಯಲ್ಲಿ ಈ ಬಾರಿ ಮೂರ್ನಾಲ್ಕು ಅಡಿ ನೀರಿದೆ. ಬಾವಿಯಲ್ಲಿ ನೀರಿರುವ ಕಾರಣಕ್ಕೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದೇವೆ
ಮಂಜುನಾಥ ಮಾವಿನಕೊಪ್ಪ, ಗ್ರಾಮಸ್ಥ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು