ಗುರುವಾರ , ಏಪ್ರಿಲ್ 22, 2021
24 °C
ಕಾಮಗಾರಿಗೆ ಅನುಮತಿ ಕೋರಿ ಕೇಂದ್ರ ಪರಿಸರ, ಅರಣ್ಯ ಸಚಿವಾಲಯಕ್ಕೆ ಅರ್ಜಿ

₹360 ಕೋಟಿ ವೆಚ್ಚದಲ್ಲಿ ಶಿರಸಿ–ಕುಮಟಾ ರಸ್ತೆ ವಿಸ್ತರಣೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Deccan Herald

ಶಿರಸಿ: ರಾಷ್ಟ್ರೀಯ ಹೆದ್ದಾರಿ ‘766–ಇ’ ಆಗಿ ಪರಿವರ್ತನೆಗೊಂಡಿರುವ ಶಿರಸಿ– ಕುಮಟಾ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಸಿದ್ಧತೆಗಳು ಜನರಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಎರಡು ಘಟ್ಟಗಳು, ಅರಣ್ಯ ಪ್ರದೇಶಗಳ ನಡುವೆ ಹಾದುಹೋಗಿರುವ ಈ ರಸ್ತೆ ವಿಸ್ತರಣೆಗೆ ಅನುಮತಿ ಕೋರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಪರಿಸರ, ಅರಣ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಹಾವೇರಿ– ಎಕ್ಕಂಬಿ (ರಾಜ್ಯ ಹೆದ್ದಾರಿ–2) ಹಾಗೂ ಎಕ್ಕಂಬಿಯಿಂದ ಕುಮಟಾ, ಬೇಲೆಕೇರಿವರೆಗಿನ (ರಾಜ್ಯ ಹೆದ್ದಾರಿ –69) ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಮೊದಲ ಪ್ಯಾಕೇಜ್‌ನಲ್ಲಿ ಶಿರಸಿ– ಕುಮಟಾವರೆಗಿನ 60 ಕಿ.ಮೀ ಅಭಿವೃದ್ಧಿಯಾಗಲಿದೆ. ಸಾಗರಮಾಲಾ ಯೋಜನೆಯಡಿ ಮಂಜೂರು ಆಗಿರುವ ಬೃಹತ್ ಕಾಮಗಾರಿಯ ಟೆಂಡರ್‌ ಅನ್ನು ₹360.60 ಕೋಟಿ ಮೊತ್ತಕ್ಕೆ ಆರ್.ಎನ್‌.ಎಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ಸ್‌ ಲಿಮಿಟೆಡ್ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ಗುತ್ತಿಗೆ ಪಡೆದಿವೆ.

ಬಹುತೇಕ ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ಈ ರಸ್ತೆಯ ವಿಸ್ತರಣೆಯಿಂದ ನೂರಾರು ಮರಗಳು, ಅಮೂಲ್ಯ ಗಿಡಮೂಲಿಕೆಗಳು ನಾಶವಾಗುತ್ತವೆ. ಹೀಗಾಗಿ ಅಗತ್ಯವಿದ್ದಷ್ಟೇ ವಿಸ್ತರಣೆ ಮಾಡಿ, ಉತ್ಕೃಷ್ಟ ದರ್ಜೆಯ ರಸ್ತೆ ಪುನರ್ ನಿರ್ಮಾಣ ಮಾಡಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ.

‘ರಸ್ತೆ ವಿಸ್ತರಣೆಗೆ ಅನುಮತಿ ನೀಡುವಂತೆ, ಕೇಂದ್ರ ಅರಣ್ಯ ಸಚಿವಾಲಯಕ್ಕೆ ಆನ್‌ಲೈನ್‌ನಲ್ಲಿ (website: forest clearance) ಅರ್ಜಿ ಸಲ್ಲಿಸಲಾಗಿದೆ. ವಿವಿಧ ರೀತಿಯ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಎಲ್ಲ ಪ್ರಕ್ರಿಯೆಗಳು ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ. ಒಟ್ಟು 10 ಮೀಟರ್‌ ರಸ್ತೆ ಅಗಲ ಮಾಡುತ್ತಿದ್ದು, ಇದರಲ್ಲಿ 7 ಮೀಟರ್ ಕಾಂಕ್ರೀಟ್ ರಸ್ತೆ (ಟೂ ಲೇನ್ ಕ್ಯಾರಿಯೇಜ್) ಇರುತ್ತದೆ’ ಎಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ, ಧಾರವಾಡದಲ್ಲಿರುವ ಯೋಜನಾ ನಿರ್ದೇಶಕ ಎ.ಕೆ.ಜಾನ್‌ಬಾಝ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅರಣ್ಯ ಇಲಾಖೆಯ ಅನುಮತಿ ಪಡೆದ ಮೇಲೆ ಹೆದ್ದಾರಿ ಪ್ರಾಧಿಕಾರ ನೀಡುವ ನಕ್ಷೆ ಆಧರಿಸಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತದೆ. ಪರ್ಯಾಯ ಮಾರ್ಗಗಳು ಸುವ್ಯವಸ್ಥಿತಗೊಂಡ ಮೇಲೆ ಶಿರಸಿ– ಕುಮಟಾ ರಸ್ತೆಯಲ್ಲಿ ಸಂಚಾರ ನಿಷೇಧಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಪುನರ್ ವಿಮರ್ಶೆಯಾಗಲಿ

ಕೊಡಗು– ಕೇರಳದಲ್ಲಿ ನಡೆದಿರುವ ಪ್ರಕೃತಿ ವಿಕೋಪಗಳು ಕಣ್ಮುಂದೆ ಇವೆ. ಅರಣ್ಯ ಪ್ರದೇಶದಲ್ಲಿ ಇಷ್ಟು ದೊಡ್ಡ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸುವ ಪೂರ್ವದಲ್ಲಿ ಸ್ಥಳೀಯ ಪಂಚಾಯಿತಿ, ಸಾಮಾಜಿಕ ಪರಿಸರ ಸಂಘಟನೆಗಳ ಅಭಿಪ್ರಾಯ ಪಡೆದಿಲ್ಲ. ವೃಕ್ಷಲಕ್ಷ ಆಂದೋಲನ ನಡೆಸಿರುವ ಅಧ್ಯಯನದ ಪ್ರಕಾರ, 100 ಎಕರೆ ಅರಣ್ಯ ನಾಶವಾಗುವ ಸಾಧ್ಯತೆಯಿದ್ದು, 10 ಸಾವಿರ ಮರಗಳು ಬಲಿಯಾಗಬಹುದು. ಹೀಗಾಗಿ ಯೋಜನೆಯ ಪುನರ್ ವಿಮರ್ಶೆಯಾಗಬೇಕು ಎನ್ನುತ್ತಾರೆ ವೃಕ್ಷಲಕ್ಷ ಆಂದೋಲನ ಸಂಘಟನೆಯ ಅಧ್ಯಕ್ಷ ಅನಂತ ಅಶೀಸರ.

ಅಭಿವೃದ್ಧಿಗೆ ಅನುಕೂಲ: ಸಾರ್ವಜನಿಕರ ಅಭಿಪ್ರಾಯ

ಶಿರಸಿ– ಕುಮಟಾ ರಸ್ತೆ ವಿಸ್ತರಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಅಭಿವ್ಯಕ್ತಿಗೆ ‘ಪ್ರಜಾವಾಣಿ’ ಉತ್ತರ ಕನ್ನಡ ಆವೃತ್ತಿಯಲ್ಲಿ ವೇದಿಕೆ ಕಲ್ಪಿಸಿತ್ತು. ನಿರಂತರ ಒಂದು ವಾರ ಹಲವಾರು ಓದುಗರು ಅಭಿಪ್ರಾಯ ಹಂಚಿಕೊಂಡರು. ಶೇ 90ಕ್ಕಿಂತ ಹೆಚ್ಚು ಓದುಗರು, ರಸ್ತೆ ವಿಸ್ತರಣೆ ಕಾಮಗಾರಿ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು