ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಉದುರುವ ಸರ್ಕಾರ ಬೇಕೆ: ಕೃಷ್ಣ ವ್ಯಂಗ್ಯ

Last Updated 31 ಮಾರ್ಚ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆ. ಆದರೆ, ಇವತ್ತು ಬಂದು ನಾಳೆ ಉದುರಿ ಹೋಗುವ (ಮಹಾಘಟ ಬಂಧನ್) ಸರ್ಕಾರ ಜನರಿಗೆ ಬೇಕಿಲ್ಲ ಎಂದು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಪರ ರಾಜಾಜಿ ನಗರದ ಬ್ರಿಗೇಡ್‌ ಗೇಟ್‌ವೇ ಮತ್ತು ರೆನಾಸನ್ಸ್‌ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.

‘ಇದೊಂದು ಮಹತ್ವದ ಚುನಾವಣೆ. ಕಳೆದ ಐದು ವರ್ಷ ದೇಶ ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷ ತಂದಿದೆ. ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದು ಜನ ಬಯಸಿದಾಗ ಗುಜರಾತ್‌ನಿಂದ ನರೇಂದ್ರಮೋದಿ ಬಂದರು. ಅಲ್ಲಿಯವರೆಗೆ ಬಲಿಷ್ಠ ಪ್ರಧಾನಿ ಅಂದರೆ ಏನು ಎನ್ನುವುದು ದೇಶಕ್ಕೆ ತಿಳಿದಿರಲಿಲ್ಲ’ ಎಂದರು.

‘ಐದು ವರ್ಷಗಳ ಹಿಂದೆ ಯುಪಿಎ ಅವಧಿಯಲ್ಲಿ ಹಲವು ಹಗರಣಗಳು ನಡೆದಿದ್ದವು. ಇದು ದೇಶದ ಜನತೆಯನ್ನು ಕಾಡಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಭಾವನೆ ಇತ್ತು’ ಎಂದು ಕೃಷ್ಣ ಹೇಳಿದರು.

‘ವಂಶಪಾರಂಪರ್ಯ ರಾಜಕಾರಣ ಸರಿಯಲ್ಲ. ಆಡಳಿತ ನಡೆಸಲು ಅರ್ಹತೆ ಇಲ್ಲದಿದ್ದರೂ ಆ ವಂಶದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ದೇಶ ಆಳುತ್ತೇನೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಪರೋಕ್ಷವಾಗಿ ರಾಹುಲ್‌ಗಾಂಧಿಯನ್ನು ಟೀಕಿಸಿದರು.

‘ಕೆಲವರಿಗೆ ಸಂಸಾರವೇ ರಾಷ್ಟ್ರ. ಆದರೆ, ರಾಷ್ಟ್ರವೇ ಸಂಸಾರ ಎಂದು ಮೋದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಗರಣರಹಿತ ಆಡಳಿತ ನೀಡಿದ್ದಾರೆ. ಇಂತಹ ಸರ್ಕಾರ ಮತ್ತೆ ಐದು ವರ್ಷವಲ್ಲ ಹತ್ತು ವರ್ಷವೂ ಇರಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

‘ಹಿಂದಿನಂತೇ ಮುಂಬೈಗೆ ಬಂದು ನೂರಾರು ಜನರನ್ನು ಕೊಲ್ಲಬಹುದು ಎಂದು ಪಾಕಿಸ್ತಾನ ಯೋಚಿಸಿತ್ತು. ಆದರೆ, ಪುಲ್ವಾಮಾ ದಾಳಿಯಾದ ಬೆನ್ನಲ್ಲೇ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಉಗ್ರರನ್ನು ಸಂಹರಿಸಲಾಯಿತು. ಎಷ್ಟೇ ಆದರೂ ಪಾಕಿಸ್ತಾನ ಬುದ್ಧಿ ಕಲಿಯುವುದಿಲ್ಲ. ಶಾಂತಿ ಮಂತ್ರವನ್ನು ಜಪಿಸುತ್ತಲೇ ದಾಳಿ ನಡೆಸುತ್ತಿದೆ’ ಎಂದು ಕೃಷ್ಣ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT